ರಾಣಿಬೆನ್ನೂರ: ಧಾರ್ಮಿಕತೆಯ ಮನೋಭಾವನೆ ಇರುವ ಗ್ರಾಮ ಉತ್ತಮ ಸಂಸ್ಕಾರ, ಸಂಸ್ಕೃತಿಯಿಂದಿರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ವರೂ ಧಾರ್ಮಿಕತೆಯ ಮನೋಭಾವನೆ ರೂಢಿಸಿಕೊಂಡು ಸಾಗಿದಾಗ ಮಾತ್ರ ನೆಮ್ಮದಿಯ ಜೀವನ ಕಾಣಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸತೀಶ ಶೇಟ್ ಹೇಳಿದರು.
ತಾಲೂಕಿನ ಮಾಕನೂರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಸ್ಥಾನದ ಸಮಿತಿಯವರಿಗೆ 3ಲಕ್ಷ ರೂ. ಚೆಕ್ ವಿತರಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಂಡು ಮುನ್ನಡೆಯಬೇಕು ಎಂದರು.
ಸರಕಾರ ಮಾಡದಂತಹ ಸಮಾಜಮುಖಿ ಕೆಲಸ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಾ ಬಂದಿದೆ. ಸರ್ವರೂ ಆರ್ಥಿಕ ಸ್ವಾವಲಂಬಿಗಳಾಗಿ ಬಾಳಿ ಬದುಕಬೇಕೆಂಬ ಉದ್ದೇಶದಿಂದ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಇಂತಹ ಯೋಜನೆಯಲ್ಲಿರುವವರು ಮತ್ತು ಇದರ ಸದುಪಯೋಗ ಪಡೆದುಕೊಂಡವರು ನಿಜಕ್ಕೂ ಧನ್ಯರು ಎಂದರು.
ವಲಯ ಮೇಲ್ವಿಚಾರಕ ಸೋಮಶೇಖರ ಗಿಣಿವಾಲ, ಸೇವಾ ಪ್ರತಿನಿಧಿ ಪೂಜಾ, ದೇವಸ್ಥಾನ ಸಮಿತಿ ಅಧ್ಯಕ್ಷ ಬೀರಪ್ಪ ಹುಚ್ಚಣ್ಣನವರ, ಗದಿಗಪ್ಪ ಸಾರ್ಥಿ, ಡಾ| ಮಾಲತೇಶ ಹುಚ್ಚಣ್ಣನವರ, ಹನುಮಂತಪ್ಪ ಸಾರ್ಥಿ, ಕರಬಸಪ್ಪ ಸಾರ್ಥಿ, ಬಸವಂತಪ್ಪ ಸಾರ್ಥಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದವರು ಹಾಗೂ ಗ್ರಾಮಸ್ಥರು ಇದ್ದರು.