ಬೆಂಗಳೂರು: ದೇಶದಲ್ಲಿ ಕೋಮುಸೌಹಾರ್ದತೆ, ಶಾಂತಿ ಹಾಗೂ ಸಹಬಾಳ್ವೆಯ ಸ್ಥಾಪನೆಗೆ ಜಮೀಯತ್ ಲೇಮಾ ಹಿಂದ್ ಸಂಘಟನೆಯ ರಾಜ್ಯ ಘಟಕದ ವತಿಯಿಂದ ಭಾನುವಾರ ನಗರದಲ್ಲಿ “ಶಾಂತಿ ನಡುಗೆ’ ಹೆಸರಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಈ ಜಾಥಾ ನಡೆಯಿತು. ಬಳಿಕ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಖಾಸ್ಮಿ, “ದೇಶದಲ್ಲಿ ಕೋಮುಸೌಹಾರ್ದ, ಶಾಂತಿ-ಸಹಬಾಳ್ವೆ ನೆಲಸಬೇಕು. ಎಲ್ಲ ವರ್ಗಗಳ ಜನರಿಗೆ ಅವರ ಧಾರ್ಮಿಕ ಆಚರಣೆಗಳಿಗೆ ಮುಕ್ತ ಅವಕಾಶಗಳು ಸಿಗುವಂತಾಗಬೇಕು,’ ಎಂದರು.
“ಭಾರತ ಜಾತ್ಯಾತೀತ ರಾಷ್ಟ್ರ. ಈ ದೇಶ ಇಲ್ಲಿ ನೆಲೆಸಿದ ಪ್ರತಿಯೊಬ್ಬರಿಗೂ ಸೇರಿದ್ದು. ಆದರೆ, ಕೆಲವರು ರಾಜಕೀಯ ಲಾಭಕ್ಕಾಗಿ ಕೋಮುವಾದ ಹುಟ್ಟು ಹಾಕಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪಿಡುಗುಗಳ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಾಗಿದೆ.
ಸಂವಿಧಾನಬದ್ಧವಾಗಿ ಸಿಕ್ಕಿರುವ ಧಾರ್ಮಿಕ ಹಕ್ಕನ್ನು ಯಾವುದೇ ಆಡಳಿತ ಕಸಿದುಕೊಳ್ಳಲು ಮುಂದಾಗಬಾರದು. ದೇಶದ ಅಭಿವೃದ್ಧಿಗೆ ಮುಸ್ಲಿಮರ ಕೊಡುಗೆ ಅಪಾರ. ಭಾರತವನ್ನು ಸಶಕ್ತ ರಾಷ್ಟ್ರ ಮಾಡಲು ಮುಸ್ಲಿಂ ಸಮುದಾಯ ಪ್ರಯತ್ನಿಸುತ್ತಿದೆ,’ ಎಂದರು.
“ಶಾಂತಿ ನಡಿಗೆ’ ಜಾಥಾದಲ್ಲಿ ಪಾಲಿಕೆ ಸದಸ್ಯ ಮುಜಾಹಿದ್ ಪಾಷಾ, ಕರ್ನಾಟಕ ಮುಸ್ಲಿಂ ಮುತ್ತಹಿದಃ ಮಹಾಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್, ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯುಸೂಫ್ ಕನ್ನಿ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.