ಬೆಳ್ತಂಗಡಿ: ವ್ಯಸನದಿಂದ ಆಯುಷ್ಯ ಕಡಿಮೆ ಆಗುವುದರ ಜತೆಗೆ ಭವಿಷ್ಯವೂ ಇರುವುದಿಲ್ಲ. ದುಶ್ಚಟ ಜಾಸ್ತಿ ಆಗುತ್ತಿದ್ದಂತೆ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ
ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಉಜಿರೆಯ ಜಾಗೃತಿ ಸೌಧದಲ್ಲಿ ನಡೆದ 149ನೇ ವಿಶೇಷ ಮದ್ಯವರ್ಜನ ಶಿಬಿರದ 57 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿ, ಪರಿವರ್ತನೆ ಎಂಬುದು ಭಾಗ್ಯದ ಬಾಗಿಲು ಇದ್ದಂತೆ. ಪದೇ ಪದೇ ದೇವರು ಭಾಗ್ಯದ ಬಾಗಿಲು ತಟ್ಟುವು ದಿಲ್ಲ. ತಟ್ಟಿದಾಗ ನಾವು ಎಚ್ಚರಿಕೆಯಿಂದ ಓಗೊಡಬೇಕು. ಇಲ್ಲಿ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಲೋಪದೋಷಗಳನ್ನು ತಿದ್ದಿಕೊಡು ಬದುಕಬೇಕು. ದುಶ್ಚಟಗಳ ಯೋಚನೆ ಬಂದಾಗ ನಾಳೆ ಬಾ ಎನ್ನುವ ಫಲಕ ಹಾಕಿ ಮಾರಿಯನ್ನು ಓಡಿಸಿದಂತೆ ನಮ್ಮ ಜೀವನದಲ್ಲಿ ವ್ಯಸನದ ಯೋಚನೆ ಬಂದಾಗ ಈ ರೀತಿ ಮಾಡಿ ನಮ್ಮ ದುಶ್ಚಟದ ಬದುಕನ್ನು ಬದಲಾಯಿಸಬಹುದು ಎಂದರು.
ವ್ಯಸನಮುಕ್ತಗೊಳಿಸುವ ಪುಣ್ಯದ ಕೆಲಸ ಮಾಡಲು ಧರ್ಮಸ್ಥಳದಿಂದ ಪ್ರೇರಣೆ ಸಿಕ್ಕಿದೆ. ವ್ಯಸನಕ್ಕೆ ತಳ್ಳುವವರು ತುಂಬಾ ಜನ ಇರುತ್ತಾರೆ. ಆದರೆ ಅದರಿಂದ ಮೇಲೆತ್ತು ವವರು ಯಾರೂ ಇರುವುದಿಲ್ಲ. ನಿಮ್ಮ ಬದುಕನ್ನು ಪ್ರೀತಿಸಿ ಎಂದರು.
ವಿವೇಕ್ ವಿ. ಪಾçಸ್ ನಿರ್ದೇಶನದಲ್ಲಿ ಪಿ. ಚೆನ್ನಪ್ಪ ಗೌಡ ಯೋಜನಾಧಿಕಾರಿಯಾಗಿ, ನಂದಕುಮಾರ್ ಶಿಬಿರಾಧಿಕಾರಿಯಾಗಿ, ಪ್ರಸಿಲ್ಲಾ ಆರೋಗ್ಯ ಸಹಾಯಕಿಯಾಗಿ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಜ. 6ರಂದು ನಡೆಯಲಿದೆ.