ಭಟ್ಕಳ: ಸೋಮವಾರ ಮಜ್ಲಿಸೆ ಇಸ್ಲಾಹ ತಂಝೀಂ ಸಂಸ್ಥೆಯವರು ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧವಾಗಿ ವಿರೋಧ ವ್ಯಕ್ತಪಡಿಸಲು ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೇಳಿದ್ದು, ಈ ಕುರಿತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಚರ್ಚಿಸಲು ಭಟ್ಕಳಕ್ಕಾಗಮಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ ಎಂದು ಪಶ್ಚಿಮ ವಲಯ ಐಜಿಪಿ ಅರುಣ ಚಕ್ರವರ್ತಿ ಹೇಳಿದರು.
ಭಟ್ಕಳದ ಎಎಸ್ಪಿ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಟ್ಕಳದಲ್ಲಿ ಸೋಮವಾರ ತಂಝೀಂ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಲಾಗುವ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಹಾಗೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಕುರಿತು ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿದ್ದೇನೆ. ಈಗಾಗಲೇ ಪಟ್ಟಣದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದರೂ ಸೋಮವಾರದ ಬಂದೋಬಸ್ತ್ಗಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗುತ್ತದೆ ಎಂದರು.
ಈ ಕುರಿತು ಎಸ್ಪಿ ಹೆಚ್ಚಿನ ಮಾಹಿತಿ ತಿಳಿಸುತ್ತಾರೆ ಎಂದ ಅವರು, ತಾಲೂಕಿನಲ್ಲಿ 144 ಕಲಂ ಮುಂದುವರಿಸಲಾಗುತ್ತದೆಯೇ? ಒಂದೊಮ್ಮೆ 144 ಕಲಂ ಮುಂದುವರಿಸಿದರೆ ಪ್ರತಿಭಟನೆಗೆ ಅವಕಾಶ ನೀಡಲಾಗುವುದೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಿಷೇಧಾಜ್ಞೆ ಶನಿವಾರ ಅಂತ್ಯಗೊಳ್ಳಲಿದ್ದು, ಒಂದೊಮ್ಮೆ ಮುಂದುವರಿಸಿದರೆ ಏನು ನಿರ್ಧಾರ ಕೈಗೊಳ್ಳಬೇಕು ಎನ್ನುವುದರ ಕುರಿತು ತಿಳಿಸಲಾಗುವುದು ಎಂದರು.
ಎಸ್ಪಿ ಶಿವಪ್ರಕಾಶ ದೇವರಾಜ, ಹೆಚ್ಚುವರಿ ಎಸ್ಪಿ ಗೋಪಾಲ ಬ್ಯಾಕೋಡ, ಭಟ್ಕಳ ಎಎಸ್ಪಿ ನಿಖೀಲ ಬಿ, ಐಜಿಪಿ ಕಚೇರಿಯ ಡಿವೈಎಸ್ಪಿ ನಟರಾಜ ಮುಂತಾದವರಿದ್ದರು.
ತಂಝೀಂ ನಿಯೋಗದಿಂದ ಐಜಿಪಿ ಭೇಟಿ: ಶನಿವಾರ ಸಂಜೆ ಮಜ್ಲಿಸೆ ಇಸ್ಲಾಹ ವ ತಂಝೀಂ ಸಂಸ್ಥೆ ಅಧ್ಯಕ್ಷ ಎಸ್.ಎಂ. ಪರ್ವೇಜ್, ಪ್ರಧಾನ ಕಾರ್ಯದರ್ಶಿ ಎಂ.ಜೆ. ಅಬ್ದುಲ ರಖೀಬ್, ಇನಾಯತುಲ್ಲಾ ಶಾಬಂದ್ರಿ ಮತ್ತಿತರ ಪದಾಧಿಕಾರಿಗಳು ಐಜಿಪಿ, ಎಸ್ಪಿಯವರನ್ನು ಭೇಟಿಯಾಗಿ ಸೋಮವಾರ ನಡೆಸಲಾಗುವ ಶಾಂತಿಯುತ ಪ್ರತಿಭಟನೆ ಕುರಿತು ಚರ್ಚೆ ನಡೆಸಿದ್ದಲ್ಲದೇ ತಮಗೆ ಪೌರತ್ವ ಕಾಯ್ದೆ ತಿದ್ದುಪಡಿ ವಿದೇಯಕ ವಿರೋಧಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.