Advertisement

ದೇಶದಲ್ಲಿ ಶಾಂತಿ ನೆಲೆಸಿ, ರೈತನ ಬದುಕು ಸುಭದ್ರಗೊಳ್ಳಲಿ

05:04 PM Jun 19, 2018 | Team Udayavani |

ಬನಹಟ್ಟಿ: ದೇಶದಲ್ಲಿ ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ
ಜೈನ ಮುನಿ ಕುಲರತ್ನ ಭೂಷಣ ಮಹಾರಾಜರು ಹೇಳಿದರು.

Advertisement

ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಹಮ್ಮಿಕೊಂಡ ಶೃತಾವತಾರ ಶೃತಪಂಚಮಿ ಮಹಾಪರ್ವ ನಿಮಿತ್ತ ಹಮ್ಮಿಕೊಂಡ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಶಾಂತಿ ನೆಲೆಸಲಿ, ಮಳೆ ಬೆಳೆಗಳು ಚೆನ್ನಾಗಿ ಆಗಿ ರೈತನ ಬಾಳು ಬೆಳಗಲಿ. ಅನ್ಯಾಯ, ಅತ್ಯಾಚಾರಗಳು ಕಡಿಮೆಯಾಗಲಿ ಎಂಬ ಸದುದ್ದೇಶದಿಂದ ಈ ಶಾಂತಿ ಸಮಾರಂಭವನ್ನು ಹಮ್ಮಿಕೊಂಡಿದ್ದು ನಮಗೆ ಸಂತಸ ತಂದಿದೆ ಎಂದರು.

ಮಳೆ ಮತ್ತು ಬದುಕಿಗೆ ಅತ್ಯಂತ ಹತ್ತಿರದ ಸಂಬಂಧ. ಮಳೆಯ ಒಳ್ಳೆಯ ದಿನಗಳಿಗಾಗಿ ಕಾಯುವ ತಾಳ್ಮೆ ಬೇಕು. ಮಳೆಯೊಂದಿಗೆ ಬರುವ ಸಿಡಿಲು, ಗುಡುಗು, ಸಿಡಿಲುಗಳಂತೆಯೇ ಬದುಕಿನಲ್ಲೂ ಬರಸಿಡಿಲುಗಳು ಹೊಡೆಯುತ್ತಲೇ ಇರುತ್ತವೆ. ಆದರೆ, ಅಲ್ಲೇ ಒಂದು ಕೋಲ್ಮೀಚು ಕಾಣಿಸುತ್ತದೆ ಎಂಬುದನ್ನು ನಾವು ಮೆರೆಯಬಾರದು ಎಂದರು. ಮನೆಗಿಂತ ಬಾಲಿಲು ಚಿಕ್ಕದು, ಬಾಗಿಲಿಗಿಂತ ಬೀಗ ಚಿಕ್ಕದು, ಬೀಗಕ್ಕಿಂತ ಕೀಲಿ ಚಿಕ್ಕದು, ಕೀಲಿ ಚಿಕ್ಕದಾದರೂ ಅದರ ಪಾತ್ರ ಹಿರಿದು. ವಿವೇಚನೆಯಿಂದ ಕೂಡಿದ ಸಣ್ಣ ಪರಿಹಾರವೂ ಉತ್ತಮವಾಗಿರುತ್ತದೆ ಎಂಬುದನ್ನು ಹಿರಿಯರು ಹೇಳಿದ ಮಾತನ್ನು ಯಾವತ್ತು ಮರೆಯಬಾರದು ಎಂದರು. 

ಭದ್ರಗಿರಿ ಬೆಟ್ಟದ ಭೂಗರ್ಭದಲ್ಲಿ ದೊರೆತ ರತ್ನಖಚಿತ ಜಿನಬಿಂಬಗಳ ಪ್ರದರ್ಶನ ಮೂರು ದಿನಗಳವರೆಗೆ ನಡೆಯಲಿದೆ ಎಂದರು. ಭದ್ರಗಿರಿ ಕ್ಷೇತ್ರದ ಮತ್ತು ಆಚಾರ್ಯ ಭದ್ರಬಾಹು ಮುನಿ ಮಹಾರಾಜರ ಕುರಿತು ಕುಲರತ್ನಭೂಷಣ ಮಹಾರಾಜರು ವಿವರಿಸಿದರು. ಇದಕ್ಕೂ ಪೂರ್ವದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿ 1008 ಬೈಕ ರ್ಯಾಲಿಯ ಶ್ರಾವಕರನ್ನು ಬರಮಾಡಿಕೊಂಡು ಅಶೀರ್ವದಿಸಲಾಯಿತು. ಇದೇ ಸಂದರ್ಭದಲ್ಲಿ ದಿ. ಸಿದ್ದು ನ್ಯಾಮಗೌಡರಿಗೆ ಮೃತ ನಂತರ ‘ರೈತರ ಕಣ್ಮಣಿ’ ಪ್ರಶಸ್ತಿಯನ್ನು ಅವರ ಮಕ್ಕಳಾದ ಆನಂದ
ಮತ್ತು ಬಸವರಾಜ ಅವರಿಗೆ ನೀಡಿ ಗೌರವಿಸಲಾಯಿತು. ನ್ಯಾಮಗೌಡ ಕುಟುಂಬದ ಅನೇಕ ಸದಸ್ಯರು ಹಾಜರಿದ್ದರು. 

ಜೈನ ಸಮಾಜದೊಂದಿಗೆ ಹೃದಯ ಸ್ಪರ್ಶಿ ಸಂಬಂಧ ಇಟ್ಟುಕೊಂಡಿದ್ದ ದಿ.ಸಿದ್ದು ನ್ಯಾಮಗೌಡರಿಗೆ ಸಾವಿರಾರು ಜೈನ ಸಮುದಾಯದ ಜನರು ಒಂದು ನಿಮಿಷದ ಮೌನ ಆಚರಿಸಿ ಶಾಂತಿ ಕೋರಿದರು. ಜೈನ ಸಮಾಜದ ಹಿರಿಯರು ಮತ್ತು ಭಾರತ ದೇಶದ ಜೈನ ಸಮಾಜದ ಮುಖಂಡರಾದ ಸುರೇಶ ಜೈನ ಅವರಿಗೆ ಭದ್ರಗಿರಿ ಬೆಟ್ಟದ ವತಿಯಿಂದ ‘ಜೈನ
ರತ್ನ’ ಪ್ರಶಸ್ತಿ, ಇನ್ನೋರ್ವ ಹಿರಿಯರಾದ ರಾಜೇಂದ್ರ ಕೇರಕರ ಅವರಿಗೆ ಪರಿಸರವಾದಿ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮದ ಹಿರಿಯಾದ ಬಿ. ಎ. ದೇಸಾಯಿ, ದೇವಲ ದೇಸಾಯಿ, ಮಹಾವೀರ ದೇಸಾಯಿ, ಅರವಿಂದ ಪಾಟೀಲ, ಚಂದ್ರಕಾಂತ ಬೋಜದಾರ, ಸಂಜಯ ನಾಡಗೌಡ, ಪಿ.ಟಿ. ಪಾಟೀಲ ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಸಾವಿರಾರು ಜೈನ ಸಮುದಾಯದ ಭಕ್ತರು ಆಗಮಿಸಿದ್ದರು. ಶೀತಲ ನಂದೆಪ್ಪನವರ ಹಾಗೂ ಸುಕುಮಾರ ಖೇಬೋಜಿ ನಿರೂಪಿಸಿದರು. ವೈ.ಜಿ. ಅಲಾಸ ಸ್ವಾಗತಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next