Advertisement

ನಾಗಾಲ್ಯಾಂಡ್‌ನ‌ಲ್ಲಿ ಶಾಂತಿ ಸಾಧನೆ

11:22 AM Oct 21, 2019 | mahesh |

ದಶಕಗಳ ಹಿಂದಿನ ಪ್ರತ್ಯೇಕತೆಯ ಕೂಗು ಶಮನಗೊಳಿಸುವಲ್ಲಿ ಸಫ‌ಲ ಪ್ರತ್ಯೇಕತಾವಾದಿಗಳು, ಕೇಂದ್ರದ ನಡುವೆ ಸದ್ಯದಲ್ಲಿಯೇ ಒಪ್ಪಂದ
ಹೊಸ ಒಪ್ಪಂದಕ್ಕೆ ನಾಗಾಲ್ಯಾಂಡ್‌ನ‌ ಬಹುತೇಕ ಎಲ್ಲ ಸಂಘಟನೆಗಳ ನಾಯಕರು ಸಹಿ ಹಾಕುವ ನಿರೀಕ್ಷೆ

Advertisement

ಹೊಸದಿಲ್ಲಿ: ವಿಶ್ವದ ಅತ್ಯಂತ ಹಳೆಯ, ಇನ್ನೂ ಬಗೆಹರಿಯದ “ದಂಗೆ’ ಎಂದೇ ಪರಿಗಣಿಸಲ್ಪಟ್ಟಿರುವ ನಾಗಾಲ್ಯಾಂಡ್‌ ಪ್ರತ್ಯೇಕತೆಯ ಕೂಗು ಶಮನವಾಗುವ ದಿನಗಳು ಸಮೀಪಿಸುತ್ತಿವೆ. ಭಾರತವನ್ನು ಬಿಡದೆ ಕಾಡುತ್ತಿದ್ದ ನಾಗಾಲ್ಯಾಂಡ್‌ ಪ್ರತ್ಯೇಕ ರಾಷ್ಟ್ರದ ಕೂಗಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಕೆಲಸಕ್ಕೆ ಕೈಹಾಕಿದ್ದ ಕೇಂದ್ರ ಸರಕಾರವು ಈಗ ಆ ವಿಚಾರದಲ್ಲಿ ಯಶಸ್ಸು ಸಾಧಿಸಿದೆ.

ಪ್ರತ್ಯೇಕತಾವಾದಿಗಳ ಜತೆ ಕೇಂದ್ರ ಸರಕಾರ ನಡೆಸಿದ್ದ ಶಾಂತಿ ಮಾತುಕತೆಗಳು ಬಹುತೇಕ ಯಶಸ್ವಿಯಾಗಿದ್ದು, ಸದ್ಯದಲ್ಲೇ ಅಂತಿಮ ಒಪ್ಪಂದ ಏರ್ಪಡಲಿದೆ ಎಂದು ನಾಗಾಲ್ಯಾಂಡ್‌ನ‌ ರಾಜ್ಯಪಾಲ ಆರ್‌.ಎನ್‌. ರವಿ ತಿಳಿಸಿದ್ದಾರೆ. ನಾಗಾ ಪ್ರತ್ಯೇಕತಾವಾದಿಗಳು, ಕೇಂದ್ರದ ನಡುವೆ ಸಂಯೋಜಕ ರಾಗಿ ರವಿ ಕೆಲಸ ಮಾಡಿದ್ದಾರೆ.

ಸಮನ್ವಯತೆಯ ಪ್ರತೀಕ
ನಾಗಾಲ್ಯಾಂಡ್‌ನ‌ ಜನತೆಯ ಭಾವನೆಗಳಿಗೆ ಬೆಲೆ ಕೊಟ್ಟು, ಕೇಂದ್ರ ಸರಕಾರ ನಾಗಾಲ್ಯಾಂಡ್‌ನ‌ಲ್ಲಿ ಶಾಂತಿ, ಸೌಹಾರ್ದ ಸ್ಥಿರ ಗೊಳಿಸಲು ತ್ವರಿತ ಕ್ರಮಗಳನ್ನು ಕೈಗೊಂಡಿದೆ. 2ನೇ ಅವಧಿಗೆ ಅಧಿಕಾರಕ್ಕೆ ಬಂದ ಅನಂತರ ಈ ಪ್ರಕ್ರಿಯೆಗೆ ಮತ್ತಷ್ಟು ಚುರುಕು ನೀಡಲಾಗಿತ್ತು. ಮೋದಿ-1ನೇ ಸರಕಾರದ ಅವಧಿಯಲ್ಲಿ 2015ರ ಆ. 3ರಂದು ಎನ್‌ಎಸ್‌ಸಿಎನ್‌ (ಐಎಂ) ಜತೆಗೆ “ಫ್ರೆಮ್‌ ವರ್ಕ್‌ ಅಗ್ರಿಮೆಂಟ್‌’ ಮಾಡಿಕೊಳ್ಳಲಾಗಿತ್ತು. 2017ರ ನ. 17ರಂದು ನಾಗಾಲ್ಯಾಂಡ್‌ನ‌ ಏಳು ಬಂಡುಕೋರರ ಗುಂಪುಗಳ ಸದಸ್ಯರು, ನಾಗಾ ರಾಷ್ಟ್ರೀಯ ರಾಜಕೀಯ ಗುಂಪುಗಳ (ಎನ್‌ಎನ್‌ಪಿಜಿ) ಕಾರ್ಯಕಾರಿ ಸಮಿತಿಯ (ಡಬ್ಲೂéಸಿ) ಹೆಸರಿನಲ್ಲಿ ಕೇಂದ್ರ ಸರಕಾರದೊಂದಿಗೆ ಮತ್ತೂಂದು ಒಪ್ಪಂದವನ್ನು ಮಾಡಿಕೊಂಡಿದ್ದವು.

ಈ ಎರಡೂ ಒಪ್ಪಂದಗಳನ್ನು ನಾಗಾಲ್ಯಾಂಡ್‌ನ‌ ಎಲ್ಲ ಬುಡಕಟ್ಟು ಜನಾಂಗಗಳ ನಾಯಕರು, ಬುಡಕಟ್ಟು ಜನಾಂಗಕ್ಕೆ ಸೇರದಿರುವ ಜನಾಂಗಗಳ ನಾಯಕರು (ನಾಗಾಲ್ಯಾಂಡ್‌ ಜಿಪಿ ಫೆಡರೇಷನ್‌), ನಾಗಾಲ್ಯಾಂಡ್‌ ಟ್ರೈಬ್ಸ್ ಕೌನ್ಸಿಲ್‌, ಚರ್ಚ್‌ಗಳ ನಾಯಕರು ಹಾಗೂ ನಾಗರಿಕ ಸಮಾಜದ ನಾಯಕರೊಂದಿಗೆ ಚರ್ಚಿಸಿ ಅವರು ಹೊಂದಿದ್ದ ಅನುಮಾನಗಳನ್ನು ಪರಿಹರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಅಂತಿಮ ಒಪ್ಪಂದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ರಾಜ್ಯಪಾಲ ರವಿ ಅವರು ತಿಳಿಸಿದ್ದಾರೆ.

Advertisement

ಎನ್‌ಎಸ್‌ಸಿಎನ್‌- ಐಎಂ ಅಪಸ್ವರ
ಅಂತಿಮ ಒಪ್ಪಂದಕ್ಕೆ ಪ್ರತ್ಯೇಕತೆಯ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ನ್ಯಾಶನಲಿಸ್ಟ್‌ ಸೋಶಿಯಲಿಸ್ಟ್‌ ಕೌನ್ಸಿಲ್‌ ಆಫ್ ನಾಗಾಲ್ಯಾಂಡ್‌ನ‌ (ಎನ್‌ಎಸ್‌ಸಿಎನ್‌) ಆಂತರಿಕ ಗುಂಪುಗಳಾದ ಎನ್‌ಎಸ್‌ಸಿಎನ್‌ (ಯು), ಎನ್‌ಎಸ್‌ಸಿಎನ್‌ (ಆರ್‌), ಎನ್‌ಎಸ್‌ಸಿಎನ್‌ (ಕೆ) ಗುಂಪುಗಳು ಒಪ್ಪಂದಕ್ಕೆ ಸಹಿ ಹಾಕಲಿವೆ. ಆದರೆ ಅದೇ ಸಂಘಟನೆಯ ಐಸಾಕ್‌ ಮುವಿಯಾ ನೇತೃತ್ವದ ಎನ್‌ಎಸ್‌ಸಿಎನ್‌ (ಐಎಂ) ಗುಂಪು ಮಾತ್ರ ಒಪ್ಪಂದದಿಂದ ದೂರ ಉಳಿಯುವ ಸಾಧ್ಯತೆಗಳಿವೆ ಎಂದು ರವಿ ತಿಳಿಸಿದ್ದಾರೆ. ಎನ್‌ಎಸ್‌ಸಿಎನ್‌-ಐಎಂ ಗುಂಪು ನಾಗಾಲ್ಯಾಂಡ್‌ಗೆ ಪ್ರತ್ಯೇಕ ಧ್ವಜ ಹಾಗೂ ಪ್ರತ್ಯೇಕ ಸಂವಿಧಾನಕ್ಕಾಗಿ ಪಟ್ಟು ಹಿಡಿದಿದೆ. ಪ್ರತಿಯೊಂದು ರಾಜ್ಯಕ್ಕೆ ಪ್ರತ್ಯೇಕ ಧ್ವಜ ನೀಡಲು ಹಾಗೂ ಪ್ರತ್ಯೇಕ ಸಂವಿಧಾನಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಮೇಲಾಗಿ 2015, 2017ರ ಒಪ್ಪಂದಗಳಲ್ಲಿ ನಾಗಾಲ್ಯಾಂಡ್‌ಗೆ ಪ್ರತ್ಯೇಕ ಧ್ವಜವನ್ನಾಗಲಿ, ಪ್ರತ್ಯೇಕ ಸಂವಿಧಾನವನ್ನಾಗಲಿ ನೀಡುವ ಬಗ್ಗೆ ಎಲ್ಲೂ ಪ್ರಸ್ತಾವವಾಗಿಲ್ಲ. ಈ ಸತ್ಯ ಗೊತ್ತಿದ್ದರೂ, ಆ ಗುಂಪು ತರಲೆ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

1950ರಲ್ಲಿ ಆರಂಭ
ಸಾರ್ವಭೌಮತ್ವಕ್ಕಾಗಿ ಒತ್ತಾಯಿಸಿ 1950ರಲ್ಲಿ ನಾಗಾ ಹೋರಾಟಗಾರರು ಶುರು ಮಾಡಿದ ಆಂದೋಲನವಿದು. ಆಗಿನಿಂದಲೂ ಇದು ವಿವಿಧ ಆಯಾಮಗಳನ್ನು ಪಡೆದುಕೊಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next