ಮಹಾಲಿಂಗಪುರ: ಮನೆಯ ಕಂಪ್ಯೂಟರ್ ಪಹಣಿ ಪತ್ರ ಪೂರೈಕೆಗಾಗಿ 20 ಸಾವಿರ ಲಂಚದ ಬೇಡಿಕೆ ಇಟ್ಟ ಪಿಡಿಓ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಸೈದಾಪೂರದಲ್ಲಿ ನಡೆದಿದೆ.
ಮಹಾಲಿಂಗಪುರ ಪಟ್ಟಣದ ಖಾಸಗಿ ಹೊಟೀಲ್‌ನಲ್ಲಿ 3 ಸಾವಿರ ಲಂಚ ಸ್ವೀಕರಿಸುವ ವೇಳೆ, ಬಾಗಲಕೋಟೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು ಈ ವೇಳೆ, ರಬಕವಿ-ಬನಹಟ್ಟಿ ತಾಲೂಕಿನ ಸೈದಾಪೂರ ಗ್ರಾಪಂ ಪಿಡಿಓ ಯಲ್ಲಪ್ಪ ಮಾಂಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಸಮೀಪದ ಸೈದಾಪೂರ ಗ್ರಾಮದ ಸೋಮನಾಯಕ ಮುತ್ತಪ್ಪ ನಾಯಕ ಅವರು ನೀಡಿದ ದೂರಿನ ಮೇಲೆ ಬಾಗಲಕೋಟೆ ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಬಾಗಲಕೋಟೆ ಎಸಿಬಿ ಡಿವೈಎಸ್‌ಪಿ ಸುರೇಶರಡ್ಡಿ ನೇತೃತ್ವದ ಎಸಿಬಿ ತಂಡವು ಮಂಗಳವಾರ ಮುಂಜಾನೆ ಪಿಡಿಓ ಅವರು ಮನೆಯ ಕಂಪ್ಯೂಟರ್ ಪಹಣಿ ಪತ್ರಕ್ಕಾಗಿ 3 ಸಾವಿರ ಲಂಚವನ್ನು ಸ್ವೀಕರಿಸುವ ವೇಳೆ ಟ್ರ್ಯಾಪ್ ಮಾಡಿ, ದಾಖಲೆ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ : ಸೈದಾಪೂರ ಗ್ರಾಮದ ನಿವಾಸಿ ಸೋಮನಾಯಕ ಮುತ್ತಪ್ಪ ನಾಯಕ ಅವರ ಮಾವನಾದ ಅರ್ಜುನ ನಾಯ್ಕಪ್ಪ ನಾಯ್ಕರ ಅವರು ಸೈದಾಪೂರ ಗ್ರಾಪಂ ಆಸ್ತಿ ನಂ.550ನೇದ್ದರ ಕಟ್ಟಿದ ಮನೆಯನ್ನು ಖರೀದಿ ಮಾಡಿಕೊಂಡು, ಸದರಿ ಮನೆಯನ್ನು ಗ್ರಾಪಂನಲ್ಲಿ ನೋಂದಾಯಿಸಿಕೊಂಡು ಕಂಪ್ಯೂಟರ್ ಪಹಣಿ ಪತ್ರ ಪೂರೈಸಲು ಸೈದಾಪೂರ ಗ್ರಾಪಂ ಪಿಡಿಓ ಯಲ್ಲಪ್ಪ ಮಾಂಗ ಅವರಿಗೆ 2021ರ ಆಗಸ್ಟ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಉತಾರೆಗಾಗಿ ಪಿಡಿಓ ಹತ್ತಾರು ಸಲ ಮಾಂಗ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ, ಪಿಡಿಓ ಯಲ್ಲಪ್ಪ ಅವರು ಮನೆಯ ಕಂಪ್ಯೂಟರ್ ಪಹಣಿ ಪತ್ರ ಪೂರೈಸಲು 20 ಸಾವಿರ ಲಂಚವನ್ನು ಕೇಳಿ, ಕೊನೆಗೆ 14 ಸಾವಿರ ಲಂಚದ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ.
ನಂತರ ನಾಯ್ಕರ್ ಅವರ ಕಡೆಯಿಂದ ಪಿಡಿಓ 10 ಸಾವಿರ ಲಂಚದ ಹಣವನ್ನು ಪಡೆದರೂ ಸಹ ಪಹಣಿ ಪತ್ರವನ್ನು ಪೂರೈಸಿಲ್ಲ. ಜನವರಿ 24ರಂದು ಸೋಮನಾಯಕ ಮುತ್ತಪ್ಪ ನಾಯಕ ಅವರು ಮತ್ತೇ ಪಿಡಿಓ ಅವರಿಗೆ ಭೇಟಿಯಾಗಿ ಮನೆಯ ಪಹಣಿ ಪತ್ರ ಕುರಿತು ವಿಚಾರಿಸಿದಾಗ, ಬಾಕಿ ಉಳಿದ 3 ಸಾವಿರ ಹಣವನ್ನು ತಂದು ಕೊಟ್ಟು ಮಂಗಳವಾರ ಪಹಣಿ ಪತ್ರ ಒಯ್ಯಲು ಪಿಡಿಓ ಯಲ್ಲಪ್ಪ ಮಾಂಗ ಹೇಳಿದ್ದಾರೆ.
ಗ್ರಾಪಂನಿಂದ ಮನೆಯ ಒಂದು ಕಂಪ್ಯೂಟರ್ ಪಹಣಿ ಪತ್ರ ಪೂರೈಸಲು 5 ತಿಂಗಳ ಕಾಲ ಅಲೆದಾಡಿಸಿದ್ದು ಹಾಗೂ 13 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟ ಕಾರಣ, ಪಿಡಿಓ ಯಲ್ಲಪ್ಪ ಮಾಂಗ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಬಾಗಲಕೋಟೆ ಎಸಿಬಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಬಾಗಲಕೋಟೆ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಿಓಗೆ ನ್ಯಾಯಾಂಗ ಬಂಧನ : ಮಂಗಳವಾರ ಮುಂಜಾನೆ 10-30ಕ್ಕೆ ಮಹಾಲಿಂಗಪುರ ಪಟ್ಟಣದ ಮಾಲಸ ಮಾಂಗಲ್ಯ ಹೋಟೆಲ್‌ನಲ್ಲಿ ಒಂದುಗಂಟೆಗಳ ಕಾಲ ವಿಚಾರಣೆ ನಡೆಸಿ ಎಸಿಬಿ ಅಧಿಕಾರಿಗಳ ತಂಡವು ನಂತರ ಸೈದಾಪೂರ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ಸಂಜೆ 4-30 ವರೆಗೂ ಗ್ರಾಪಂನಲ್ಲಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಪಿಡಿಓ ಅವರ ವಿಚಾರಣೆ ನಡೆಸಿ, ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡು, ಪಿಡಿಓ ಯಲ್ಲಪ್ಪ ಮಾಂಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಕ್ಕಾಗಿ ಬಾಗಲಕೋಟೆಗೆ ಕರೆದುಕೊಂಡು ಹೋದರು.
ದಾಳಿಯಲ್ಲಿ ಬಾಗಲಕೋಟೆ ಎಸಿಬಿ ಡಿಎಸ್‌ಪಿ ಸುರೇಶರಡ್ಡಿ ಎಂ.ಎಸ್, ಪೊಲೀಸ್ ಇನ್ಸಪೆಕ್ಟರ್‌ಗಳಾದ ವಿಜಯಮಹಾಂತೇಶ ಮಠಪತಿ, ಸಮೀರ ಮುಲ್ಲಾ, ಸಿಬ್ಬಂದಿಗಳಾದ ಎಚ್.ಎಸ್.ಹೂಗಾರ, ಸಿ.ಎಸ್.ಅಚನೂರು, ಬಿ.ವ್ಹಿ.ಪಾಟೀಲ, ಎಸ್.ಆರ್.ಚುರ್ಚ್ಯಾಳ, ಜಿ.ಜಿ.ಕಾಖಂಡಕಿ, ಶಾರದಾ ಎನ್.ರಾಠೋಡ, ಸಿದ್ದು ಸುನಗದ, ಬಿ.ಎಚ್.ಮುಲ್ಲಾ, ಎನ್.ಎ.ಪೂಜಾರಿ ಸೇರಿದಂತೆ ಹಲವರು ಇದ್ದರು.