Advertisement

ಭಾರತ-ಪಾಕ್‌ ದ್ವಿಪಕ್ಷೀಯ ಸರಣಿ: ಮೇ 29 ದುಬಾೖಯಲ್ಲಿ ಸಭೆ

10:24 AM May 26, 2017 | Team Udayavani |

ದುಬಾೖ: ಮುರಿದು ಬಿದ್ದಿರುವ ಭಾರತ-ಪಾಕಿಸ್ಥಾನ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯನ್ನು ಪುನರಾರಂಭಿಸುವ ಪ್ರಯತ್ನವಾಗಿ ಎರಡೂ ದೇಶಗಳ ಕ್ರಿಕೆಟ್‌ ಮಂಡಳಿಗಳು ಮೇ 29ರಂದು ದುಬಾೖಯಲ್ಲಿ ಸಭೆ ಸೇರಲಿವೆ. 

Advertisement

ಈ ಸಂದರ್ಭದಲ್ಲಿ 2014ರ “ತಿಳಿವಳಿಕೆ ಒಡಂಬಡಿಕೆ’ಗೆ ಸಹಿ ಹಾಕಿ ಬಳಿಕ ಇದನ್ನು ಉಲ್ಲಂಘಿಸಿದ ಭಾರತದ ಕ್ರಮ ಚರ್ಚೆಗೆ ಬರಲಿದೆ.

2015-2023ರ ಅವಧಿಯಲ್ಲಿ ಪಾಕಿಸ್ಥಾನದ ವಿರುದ್ಧ 6 ದ್ವಿಪಕ್ಷೀಯ ಸರಣಿಗಳನ್ನಾಡುವ ಒಡಂಬಡಿಕೆ ಯೊಂದಕ್ಕೆ ಭಾರತ ಸಹಿ ಹಾಕಿತ್ತು. ಆದರೆ ಈ ರಾಷ್ಟ್ರಗಳ ನಡುವೆ ಈವರೆಗೆ ಒಂದೂ ಸರಣಿ ಏರ್ಪಟ್ಟಿಲ್ಲ. 

ಇದರಿಂದ ತನಗೆ ಭಾರೀ ನಷ್ಟ ಸಂಭವಿಸಿದ್ದು, ಇದನ್ನು ತುಂಬಿಸಿ ಕೊಡುವಂತೆ ಪಿಸಿಬಿ ಇತ್ತೀಚೆಗೆ ಬಿಸಿಸಿಐಗೆ ಪತ್ರ ವೊಂದನ್ನು ಹಾಕಿತ್ತು. ಜತೆಗೆ “ತಿಳಿವಳಿಕೆ ಒಡಂಬಡಿಕೆ’ಗೆ ಸಹಿ ಹಾಕಿದ ವಿಷಯವನ್ನೂ ನೆನಪಿಸಿತ್ತು. ಆದರೆ ಬಿಸಿಸಿಐ ಇದೆಲ್ಲವನ್ನೂ ಸಾರಾಸಗಟಾಗಿ ತಳ್ಳಿಹಾಕಿತ್ತು.

ತಿಳಿವಳಿಕೆ ಒಡಂಬಡಿಕೆ ಎನ್ನುವುದು “ಕೇವಲ ಒಂದು ಪತ್ರ’, ಇದೇನೂ ಅಧಿಕೃತ ಒಪ್ಪಂದವಲ್ಲ ಎಂದು ಬಿಸಿಸಿಐ ಕೇಂದ್ರ ಸರಕಾರಕ್ಕೆ ತಿಳಿಸಿತ್ತು. ಪಿಸಿಬಿ ಅಧ್ಯಕ್ಷ ಶಹರ್ಯಾರ್‌ ಖಾನ್‌ ಅವರಿಗೂ ಇದನ್ನೇ ತಿಳಿಸಿದ್ದಾಗಿ ಬಿಸಿಸಿಐ ಉಸ್ತುವಾರಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೇಳಿದ್ದರು. ಇವರಿಬ್ಬರೂ ಮೇ 29ರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

“ನಾವೇನೋ ಸರಣಿ ನಡೆಸಲು ಮುಂದಾಗ ಬಹುದು. ಆದರೆ ಇದಕ್ಕೆ ಸೂಕ್ತವಾದ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಅಲ್ಲದೆ ಭಾರತ ಸರಕಾರದ ಅನುಮತಿ ಇಲ್ಲದೇ ಈ ನಿಟ್ಟಿನಲ್ಲಿ ಮುಂದು ವರಿಯುವುದು ಅಸಾಧ್ಯ. ಪಿಸಿಬಿ ಪತ್ರ ಹಾಕಿದ ಬಳಿಕ ನಾವು ಕೇಂದ್ರ ಸರಕಾರಕ್ಕೆ ಲಿಖೀತ ವರದಿಯೊಂದನ್ನು ನೀಡಿದ್ದೇವೆ. ಮುಂದಿನ ಬೆಳವಣಿಗೆ ಕುರಿತು ನಿರೀಕ್ಷೆಯಲ್ಲಿದ್ದೇವೆ…’ ಎಂದಿದ್ದಾರೆ ಚೌಧರಿ.

Advertisement

Udayavani is now on Telegram. Click here to join our channel and stay updated with the latest news.

Next