Advertisement

ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಪಿ.ಸಿ.ಮೋಹನ್‌

06:36 AM May 24, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ಬಿಜೆಪಿ ಪ್ರಬಲ ಪೈಪೋಟಿಯಿಂದಾಗಿ ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್‌ 70, 968 ಮತಗಳ ಅಂತರದಿಂದ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಅವರನ್ನು ಪರಾಭವಗೊಳಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ.

Advertisement

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ 6,02,853 ಮತಗಳಿಸಿದರೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ 5,31,885 ಮತ ಪಡೆದಿದ್ದಾರೆ. ಇದೇ ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್‌ ರಾಜ್‌ 28,906 ಮತಗಳಿಂದ ಮೂರನೇ ಸ್ಥಾನ ಗಳಿಸಿದ್ದಾರೆ. ಉತ್ತಮ್‌ ಪ್ರಜಾಕೀಯ ಪಕ್ಷದ ಮೆಲ್ಲೆಗಟ್ಟಿ ಶ್ರೀದೇವಿ 4, 271 ಮತಗಳಿಂದ ನಾಲ್ಕನೇ ಸ್ಥಾನ ಹಾಗೂ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಎಂ.ಕೆ.ಪಾಷಾ 3,889 ಮತಗಳಿಂದ 5ನೇ ಸ್ಥಾನ ಪಡೆದ್ದಾರೆ. ಇನ್ನು 10,755 ಮತದಾರರು ನೋಟ ಗುಂಡಿ ಒತ್ತುವ ಮೂಲಕ ಯಾವುದೇ ಅಭ್ಯರ್ಥಿಗಳಿಗೆ ಮತ ಹಾಕದೆ ದೂರ ಉಳಿದಿದ್ದಾರೆ.

13ನೇ ಸುತ್ತಿನ ನಂತರ ಬದಲಾದ ಚಿತ್ರಣ: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಮತ ಏಣಿಕೆ ಕಾರ್ಯ ನಡೆಯುತ್ತಿದ್ದ ನಗರದ ಮೌಂಟ್‌ಕಾರ್ಮಲ್‌ ಕಾಲೇಜಿನಲ್ಲಿ ಬಳಿ ಬೆಳಗ್ಗೆ 7 ಗಂಟೆಗೆ ಬಿಜೆಪಿ ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿದ್ದರು. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಮೊದಲ ಸುತ್ತಿನಿಂದ 12ನೇ ಸುತ್ತಿನವರೆಗೂ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ 8 ರಿಂದ 10 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಅಂತೆಯೇ ಕೈ ಪಾಳಯದಲ್ಲಿ ಸಂಸತ ಮೂಡಿತ್ತು. ಆದರೆ, 13 ಸುತ್ತಿನ ಫ‌ಲಿತಾಂಶ ಬಂದ ಕೂಡಲೇ ಪಿ.ಸಿ.ಮೋಹನ್‌ 26 ಸಾವಿರ ಮತಗಳ ಮುನ್ನಡೆ ಪಡೆದುಕೊಂಡು ಕಮಲಪಾಳಯದಲ್ಲಿ ಗೆಲುವಿನ ಆಸೆ ಗರಿಗೆದರಿತು.

ಅಲ್ಲಿಂದ ಫ‌ಲಿತಾಂಶದ ಚಿತ್ರಣವೇ ಬದಲಾಯಿತು. 13ನೇ ಸುತ್ತಿನಿಂದ ಮುನ್ನಡೆ ಕಾಯ್ದುಕೊಂಡ ಪಿ.ಸಿ.ಮೋಹನ್‌ ಅಂತಿಮವಾಗಿ 70, 968 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. 2014ರ ಚುನಾವಣೆ ವೇಳೆ ಪಿ.ಸಿ.ಮೋಹನ್‌ 1,37,500 ಮತಗಳ ಅಂತರದಲ್ಲಿ ರಿಜ್ವಾನ್‌ ಅರ್ಷದ್‌ ವಿರುದ್ಧ ಜಯಭೇರಿ ಬಾರಿಸಿದ್ದರು. ಆದರೆ, 2019ರಲ್ಲಿ 70,968 ಮತಗಳ ಅಂತದಿಂದ ಗೆಲವು ಸಾಧಿಸಿದ್ದಾರೆ. ಈ ಮೂಲಕ ಕಳೆದ ಬಾರಿಗಿಂತ ಈ ಬಾರಿ ಗೆಲುವಿನ ಅಂತ ಅರ್ಧಕ್ಕೆ ಕುಸಿದಂತಾಗಿದೆ.

ಈ ಬಾರಿ ಕೇಂದ್ರದಿಂದ ಸಾಕಷ್ಟು ಯೋಜನೆಗಳನ್ನು ರಾಜ್ಯಕ್ಕೆ ತರುವ ಮೂಲಕ ಮತ್ತಷ್ಟು ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 3ನೇ ಬಾರಿ ವಿಶ್ವಾಸವಿಟ್ಟು ಗೆಲ್ಲಿಸಿದ‌ ಜನತೆಗೆ ಧನ್ಯವಾದ.
-ಪಿ.ಸಿ.ಮೋಹನ್‌, ಬಿಜೆಪಿ ಅಭ್ಯರ್ಥಿ

Advertisement

ಕ್ಷೇತ್ರದ ಜತೆ ನಿರಂತರ ಸಂಪರ್ಕ ಮುಂದುವರಿಸು ತ್ತೇನೆ. ಪಿ.ಸಿ.ಮೋಹನ್‌ ಗೆಲುವಿಗೆ ಅಭಿನಂದಿಸುತ್ತೇನೆ. ಅಭಿವೃದ್ಧಿಯಲ್ಲಿ ಮೋಹನ್‌ಗೆ ಬೆಂಬಲ ನೀಡಿ, ನಗರಕ್ಕೆ ಶ್ರಮಿಸುತ್ತೇನೆ.
-ರಿಜ್ವಾನ್‌ ಅರ್ಷದ್‌, ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ

ಬೆಂ. ಕೇಂದ್ರ ( ಬಿಜೆಪಿ)
-ವಿಜೇತರು ಪಿ.ಸಿ. ಮೋಹನ್‌
-ಪಡೆದ ಮತ 6,02,853
-ಎದುರಾಳಿ ರಿಜ್ವಾನ್‌ ಅರ್ಷದ್‌ (ಜೆಡಿಎಸ್‌)
-ಪಡೆದ ಮತ 5,31,885
-ಗೆಲುವಿನ ಅಂತರ 70,968

ಗೆಲುವಿಗೆ 3 ಕಾರಣ
-ಸಂಸದರ ಅನುದಾನದಲ್ಲಿ ಅಭಿವೃದ್ಧಿ, ಉಪನಗರ ರೈಲು ಯೋಜನೆ ಹೋರಾಟ
-ಮೋದಿ ಅಲೆ ಹಾಗೂ ಬಿಜೆಪಿ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಿಂದ ಬಹುಮತ
-ಕ್ಷೇತ್ರದಲ್ಲಿನ ಅನ್ಯಭಾಷಿಕರ ಜತೆ ಉತ್ತಮ ಒಡನಾಟ

ಸೋಲಿಗೆ 3 ಕಾರಣ
-ಕಾಂಗ್ರೆಸ್‌ ನಾಯಕರ ನಡುವೆ ಸಮನ್ವಯದ ಕೊರತೆ.
-ಚಾಮರಾಜಪೇಟೆ, ಶಿವಾಜಿ ನಗರ, ಸರ್ವಜ್ಞನಗರ ವಿಧಾನ ಸಭೆ ಕ್ಷೇತ್ರದಿಂದ ನಿರೀಕ್ಷಿತ ಮತ “ಕೈ’ಗೆ ಬಂದಿಲ್ಲ.
-ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್‌ ರಾಜ್‌ ಸ್ಪರ್ಧೆ.

Advertisement

Udayavani is now on Telegram. Click here to join our channel and stay updated with the latest news.

Next