ಬೆಂಗಳೂರು: ತರಕಾರಿ, ಹಾಲು, ಶಾಪಿಂಗ್, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿರುವಂತೆ ಬಿಎಂಟಿಸಿ ಬಸ್‌ಗಳಲ್ಲೂ ಇನ್ನು ಪೇಟಿಎಂ ಬರಲಿದೆ! ಅಂದರೆ ನಗದು ಇಲ್ಲದೆ, ಬಸ್‌ಗಳಲ್ಲೇ ಪೇಟಿಎಂ ಮೂಲಕ ಬಿಎಂಟಿಸಿಗೆ ನೇರವಾಗಿ ಹಣ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸಬಹುದು. ಶೀಘ್ರದಲ್ಲೇ ಈ ವಿನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಾಯೋಗಿಕವಾಗಿ ವೋಲ್ವೊ ಬಸ್‌ಗಳಲ್ಲಿ ಅದರಲ್ಲೂ ಹೆಚ್ಚು ಐಟಿ-ಬಿಟಿ ಉದ್ಯೋಗಿಗಳು ಓಡಾಡುವ ಮಾರ್ಗಗಳಲ್ಲಿ ಈ ಸೇವೆ ಪರಿಚಯಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಿಂತನೆ ನಡೆಸಿದೆ.
ಇದರ ಮುಖ್ಯ ಉದ್ದೇಶ ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಎಲ್ಲವೂ ಡಿಜಿಟಲ್ ಪಾವತಿ ಆಗುವುದರಿಂದ ಹಣದ ನಿರ್ವಹಣೆ ಸುಲಭ ಮತ್ತು ಪಾರದರ್ಶಕವಾಗಲಿದೆ. ಜತೆಗೆ ಈ ಹಣ ನಿರ್ವಹಣೆಯ ಸಮಯ ಅರ್ಧಕ್ಕರ್ಧ ಉಳಿತಾಯ ಆಗಲಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕಾರ್ಯನಿರ್ವಹಣೆ ಹೇಗೆ?: ಕಂಡಕ್ಟರ್ ಟಿಕೆಟ್ ಕೊಡಲಿಲ್ಲ, ಚಿಲ್ಲರೆ ಇಲ್ಲದ ಕಾರಣ ಬಸ್‌ನಿಂದ ಕೆಳಗಿಳಿಸಿದರು, ಸಂಗ್ರಹವಾದ ಹಣ ಬ್ಯಾಂಕ್‌ಗೆ ಕಟ್ಟುವುದು ಸೇರಿದಂತೆ ಪೇಟಿಎಂ ವ್ಯವಸ್ಥೆಯಿಂದ ಇದಾವುದರ ಕಿರಿಕಿರಿಯೂ ಇಲ್ಲಿ ಇರುವುದಿಲ್ಲ. ಬಸ್ ಏರಿದ ತಕ್ಷಣ ಪ್ರಯಾಣಿಕರು ತಮ್ಮಲ್ಲಿರುವ ಪೇಟಿಎಂ ಓಪನ್ ಮಾಡುತ್ತಾರೆ. ಅದರಲ್ಲಿ ಬೆಸ್ಕಾಂ ಬಿಲ್ಲಿಂಗ್ ಮತ್ತಿತರ ಪಟ್ಟಿ ಬರುತ್ತದೆ. ಅದರಲ್ಲಿ ಬಿಎಂಟಿಸಿ ಕೂಡ ಇರಲಿದೆ. ಅದನ್ನು ಕ್ಲಿಕ್ ಮಾಡಿ, ಪ್ರಯಾಣದ ಮಾರ್ಗ (ಎಲ್ಲಿಂದ-ಎಲ್ಲಿಗೆ) ಸೂಚಿಸಿದರೆ ಸಾಕು, ಅಟೋಮೆಟಿಕ್ ಆಗಿ ಹಣ ಕಡಿತಗೊಂಡು ಇ-ಟಿಕೆಟ್ ಸೃಷ್ಟಿಯಾಗುತ್ತದೆ.
ಕಂಡಕ್ಟರ್‌ಗೆ ಮೊಬೈಲ್ ಡಿವೈಸ್: ಪ್ರಯಾಣಿಕರು ಟಿಕೆಟ್ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಲು ಓಲಾ-ಉಬರ್ ಚಾಲಕರಿಗೆ ನೀಡಿರುವಂತೆ ನಿರ್ವಾಹಕರಿಗೂ ಮೊಬೈಲ್ ಡಿವೈಸ್‌ಗಳನ್ನು ನೀಡಲಾಗಿರುತ್ತದೆ. ಅದನ್ನು ಪ್ರಯಾಣಿಕರ ಮೊಬೈಲ್ ಹತ್ತಿರ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಕ್ಯುಆರ್ ಕೋಡ್ ಮೂಲಕ ಸ್ಕ್ಯಾನ್ ಆಗಿ ತಕ್ಷಣ ಟಿಕೆಟ್ ಬಣ್ಣ ಬದಲಾಗುತ್ತದೆ. ಹೀಗೆ ಬಣ್ಣ ಬದಲಾದ ಟಿಕೆಟ್ ಅನ್ನು ಪ್ರಯಾಣಿಕರು ಮತ್ತೆ ಬಳಸಲು ಅವಕಾಶ ಇರುವುದಿಲ್ಲ. ಜಿಯೊ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ನಿರ್ವಾಹಕರಿಗೆ ಈ ಕಂಪೆನಿಯು ಡಿವೈಸ್‌ಗಳನ್ನು ನೀಡಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಎಲ್ಲೆಡೆ ಇ-ವ್ಯಾಲೆಟ್ ಟ್ರೆಂಡ್ ಶುರುವಾಗಿದೆ. ಹಾಲು-ತರಕಾರಿ ಅಂಗಡಿಗಳಲ್ಲೂ ಪೇಟಿಎಂ ಬಳಕೆ ಇದೆ. “ನಮ್ಮ ಮೆಟ್ರೋ’ ಡಿಜಿಟಲ್ ಆಗಿದೆ. ಹೀಗಿರುವಾಗ, ಐಟಿ ರಾಜಧಾನಿಯ “ಸಂಚಾರ ನಾಡಿ’ ಬಿಎಂಟಿಸಿಯಲ್ಲೂ ಈ ಪ್ರಯೋಗ ಮಾಡಲಾಗುತ್ತಿದೆ. ಆದರೆ, ಬಸ್‌ಗಳಲ್ಲಿ ನಿತ್ಯ 50 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುತ್ತಾರೆ. ಹಾಗಾಗಿ, ಆರಂಭದಲ್ಲಿ ಕಷ್ಟ ಆಗಬಹುದು. ಆದರೆ, ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್) ಬಂದಾಗಲೂ ಈ ರೀತಿಯ ಅಪಸ್ವರ ಕೇಳಿಬಂದಿತ್ತು. ಈಗ ಅದಕ್ಕೆ ಜನ ಹೊಂದಿಕೊಂಡಿದ್ದಾರೆ. ಅಷ್ಟಕ್ಕೂ ಭವಿಷ್ಯದಲ್ಲಿ ನಿರ್ವಾಹಕರ ಅವಶ್ಯಕತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ ಆಗಲಿದೆ ಎಂದೂ ಬಿಎಂಟಿಸಿ ಐಟಿ ವಿಭಾಗದ ಉನ್ನತ ಅಧಿಕಾರಿಯೊಬ್ಬರು ಹೆಳಿದರು.
ಪ್ರಯಾಣಿಕರ ಮೇಲೆ “ಬೀ-ಕಾನ್’ ಕಣ್ಣು!: “ಟಿಕೆಟ್ ಪಡೆದು ಪ್ರಯಾಣಿಸುವಂತೆ ಬಸ್‌ಗಳಲ್ಲಿ ಫಲಕ ಹಾಕಲಾಗಿರುತ್ತದೆ. ನಿರ್ವಾಹಕರು ಪದೇ ಪದೇ ಟಿಕೆಟ್ ತೊಗೊಳ್ಳಿ ಎಂದು ಕೂಗುತ್ತಿರುತ್ತಾರೆ. ಆದಾಗ್ಯೂ ಟಿಕೆಟ್ ಪಡೆಯದ ಜನ, ಸ್ವಯಂಪ್ರೇರಿತವಾಗಿ ಪೇಟಿಎಂ ಮೂಲಕ ಟಿಕೆಟ್ ಪಡೆಯುತ್ತಾರೆಯೇ’ ಎಂದು ಕೇಳಬಹುದು.
ಬಿಎಂಟಿಸಿ ಬಳಿ ಇದಕ್ಕೂ ಉತ್ತರ ಇದೆ. ಟಿಕೆಟ್‌ರಹಿತ ಪ್ರಯಾಣಿಕರ ಮೇಲೆ “ಬೀ-ಕಾನ್’ (ಬೀ ಅಂದರೆ ಜೇನುಹುಳು) ಎಂಬ ಸಾಫ್ಟ್ವೇರ್ ಕಣ್ಗಾವಲು ಇಡಲಿದೆ! ಸ್ಮಾರ್ಟ್‌ಫೋನ್ ಹೊಂದಿದ ಯಾವುದೇ ವ್ಯಕ್ತಿ ಬಸ್ ಏರುತ್ತಿದ್ದಂತೆ “ಬೀ-ಕಾನ್’ ಆ ಮೊಬೈಲ್‌ಅನ್ನು ಟ್ರ್ಯಾಕ್ ಮಾಡುತ್ತದೆ. ಸುಮಾರು 30 ಅಡಿ ದೂರದವರೆಗೂ ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.
ಇದರ ಸಹಾಯದಿಂದ ನಿಯಂತ್ರಣ ಕೊಠಡಿಯಲ್ಲಿ ಆ ಫೋನ್ ಮೇಲೆ ಕಣ್ಗಾವಲು ಇಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ವಾಸ್ತವವಾಗಿ ಟಿಕೆಟ್‌ರಹಿತ ಪ್ರಯಾಣಿಕರನ್ನು ಪತ್ತೆಹಚ್ಚುವ ಅತ್ಯುತ್ತಮ ವ್ಯವಸ್ಥೆ ಬಿಎಂಟಿಸಿಯಲ್ಲಿ ಇದುವರೆಗೂ ಇಲ್ಲ. ದೂರುಗಳ ಮೇರೆಗೆ ತಪಾಸಣಾ ಅಧಿಕಾರಿಗಳು ಕೆಲ ಬಸ್‌ಗಳನ್ನು ತಪಾಸಣೆಗೆ ಒಳಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಆಧಾರಿತ ತಪಾಸಣೆ ಪರ್ಯಾಯ ವ್ಯವಸ್ಥೆ ಆಗಬಲ್ಲದು.
* ವಿಜಯಕುಮಾರ್ ಚಂದರಗಿ