Advertisement

ಪಯಸ್ವಿನಿ ಕೆಸರುಮಯ: ನೀರು ಪೂರೈಕೆ ಬಂದ್‌

10:10 AM Aug 22, 2018 | Team Udayavani |

ಸುಳ್ಯ: ಅಬ್ಬರದ ಮಳೆಯಿಂದ ಕೊಡಗು ಜಿಲ್ಲೆ ನಲುಗಿದ ಬೆನ್ನಲ್ಲೇ ಅದಕ್ಕೆ ತಾಗಿಕೊಂಡಿರುವ ಸುಳ್ಯ ನಗರಕ್ಕೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಪಯಸ್ವಿನಿ ನದಿ ನೀರಿನಲ್ಲಿ ಕೆಸರು ಬೆರೆತಿದ್ದು, ನೀರೆತ್ತಿ, ಟ್ಯಾಂಕ್‌ ಮೂಲಕ ಹರಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೊಳವೆ ಬಾವಿ ಬಳಸಿ ನೀರು ಪೂರೈಸುವ ಪ್ರಯತ್ನ ನಡೆದರೂ ನಗರದ ಆವಶ್ಯಕತೆಗೆ ತಕ್ಕಂತೆ ನೀರು ವಿತರಿಸಲು ಸಾಧ್ಯವಾಗುತ್ತಿಲ್ಲ.

Advertisement

ನದಿ ನೀರು ಕೆಸರು ರಾಡಿಯಾಗಿ ಬದಲಾಗಿರುವ ಕಾರಣ ಜನರ ಆರೋಗ್ಯದ ದೃಷ್ಟಿಯಿಂದ ನದಿ ಮೂಲದ ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ನ.ಪಂ. ಹೇಳಿದೆ. ನಗರದ ಮನೆ, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಿಗೆ ಶುದ್ಧ ನೀರಿನ ಅಭಾವ ಕಾಡಿದೆ. ಶುದ್ಧೀಕರಣದ ವ್ಯವಸ್ಥೆ ಸಮರ್ಪಕ ಆಗಿರದ ಕಾರಣ ಪಯಸ್ವಿನಿ ತಾನಾಗಿಯೇ ತಿಳಿಯಾಗುವ ತನಕ ಜನರು ಶುದ್ಧ ನೀರಿಗಾಗಿ ಕಾಯಬೇಕಾದ ಸ್ಥಿತಿ ಬಂದೊದಗಿದೆ.

ಕೆಸರು ಹರಿಯುತ್ತಿದೆ
ಜೋಡುಪಾಲ ಮತ್ತು ಆಸುಪಾಸಿನ ಕಾಡಿನಲ್ಲಿ ಅಪಾರ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾದ ಬಳಿಕ ಕೆಸರು ತುಂಬಿದ ನೀರು ಪಯಸ್ವಿನಿ ನದಿಯಲ್ಲಿ ಹರಿಯುತ್ತಿದೆ. ಶುಕ್ರವಾರ ಬೆಳಗ್ಗೆ ಏಕಾಏಕಿ ಕೆಸರೇ ಹರಿದು ಬರುತ್ತಿರುವ ತರಹ ನದಿ ತುಂಬಿ ಹೋಗಿತ್ತು. ಅದು ಮಂಗಳವಾರವೂ ಮುಂದುವರಿದೆ. ಕೆಸರು ನೀರು ನದಿಯಲ್ಲಿ ತುಂಬಿದೆ. ಪಯಸ್ವಿನಿ ನದಿ ನೀರನ್ನು ನಂಬಿದ ಸಾವಿರಾರು ಮಂದಿಗೆ ಆರೋಗ್ಯದ ಆತಂಕ ಉಂಟಾಗಿದೆ.

ಶುದ್ಧೀಕರಣದ ಲೋಪ
ನೀರು ಶುದ್ಧೀಕರಣದಲ್ಲಿನ ಲೋಪವೇ ಇದಕ್ಕೆ ಕಾರಣ. ಇದು ಹಲವು ವರ್ಷಗಳ ಆರೋಪ. 50 ವರ್ಷಗಳ ಹಿಂದಿನ ಜನ ಸಂಖ್ಯೆಗೆ ತಕ್ಕಂತೆ ನಿರ್ಮಿಸಿದ ಘಟಕದಿಂದ ಜನಸಂಖ್ಯೆಯ ಬೇಡಿಕೆಗೆ ತಕ್ಕಂತೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ನೀರಿನ ಶುದ್ಧೀಕರಣವೂ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡಿದೆ. ನ.ಪಂ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೆಸರಿನ ಅಂಶ ಹೆಚ್ಚಾಗಿದೆ. ನದಿ ನೀರು ತಿಳಿಯಾಗದೆ ಪೂರೈಸುವ ಕಷ್ಟ ಎಂದಿದ್ದಾರೆ.

ಕಲ್ಲುಮಟ್ಲು ಪಂಪ್‌ಹೌಸ್‌ ಬಳಿಯಲ್ಲಿ 50 ಎಚ್‌ಪಿಯ 1 ಮತ್ತು 45 ಎಚ್‌ಪಿ ಧಾರಣ ಸಾಮರ್ಥ್ಯದ 2 ಪಂಪ್‌ ಬಳಸಿ, ನೀರನ್ನು ಸಂಗ್ರಹಿಸಿ ಪಂಪ್‌ ಹೌಸ್‌ ಬಾವಿಗೆ, ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ಪೂರೈಸುವುದು ರೂಢಿ. ಬಳಿಕ ಘಟಕದಲ್ಲಿ ಶುದ್ಧೀಕರಣಗೊಂಡು, 1 ಲಕ್ಷ ಗ್ಯಾಲನ್‌ ಮತ್ತು 50 ಸಾವಿರ ಗ್ಯಾಲನ್‌ ಟ್ಯಾಂಕಿ ಮೂಲಕ ನಗರಕ್ಕೆ ನೀರು ಹರಿಯುತ್ತದೆ. ಇನ್ನೊಂದು ಪೈಪು ಮೂಲಕ ಕುರುಂಜಿಗುಡ್ಡೆ ಟ್ಯಾಂಕಿಗೆ ಹರಿಸಿ, ಅಲ್ಲಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಗಳಿಗೆ ನಳ್ಳಿ ಸಂಪರ್ಕದ ಮುಖಾಂತರ ನೀರು ಪೂರೈಸುವ ವ್ಯವಸ್ಥೆ ಇದೆ. ಇದರ ಬಲ ವರ್ಧಿಸದಿದ್ದರೆ ಸಮಸ್ಯೆ ನೀಗದು ಅನ್ನುವುದು ನಗರವಾಸಿಗಳ ಮಾತು.

Advertisement

ಸಾಂಕ್ರಾಮಿಕ ರೋಗ ಭೀತಿ
ಈ ಹಿಂದೆ ಸುಳ್ಯವನ್ನು ಕಾಡಿದ ಸಾಂಕ್ರಾಮಿಕ ರೋಗ ಮತ್ತೆ ವಕ್ಕರಿಸುವ ಆತಂಕವಿದೆ. ಕಲುಷಿತ ನೀರು ಕುಡಿದು ಅನಾರೋಗ್ಯ ಉಂಟಾಗಬಹುದು. ನೂರಾರು ಹೊಟೇಲ್‌, ಸಾವಿರಾರು ಮನೆ, ಹತ್ತಾರು ಶಾಲಾ ಕಾಲೇಜು, ಆಸ್ಪತ್ರೆಗಳು ಇರುವ ನಗರದಲ್ಲಿ ಶುದ್ಧ ನೀರಿನ ಪೂರೈಕೆ ಅಗತ್ಯವಾಗಿದೆ. ಪಯಸ್ವಿನಿ ನದಿಯಿಂದಲೇ ನೇರ ಬಳಕೆ ಮಾಡುವವರಿಗೂ ಸಮಸ್ಯೆ ಕಾಡಿದೆ. ನದಿ ಸಮೀಪದ ಮನೆ ಬಾವಿ ನೀರೂ ಕೆಂಬಣ್ಣಕ್ಕೆ ತಿರುಗಿದೆ.

ಜಾಕ್‌ವೆಲ್‌ ಜಾಮ್‌
ಪಯಸ್ವಿನಿ ನದಿಯಿಂದ ನಾಗಪಟ್ಟಣ ಸಮೀಪದ ಕಲ್ಲುಮುಟ್ಲು ಪಂಪ್‌ ಹೌಸ್‌ ಮೂಲಕ ನಗರಕ್ಕೆ ನೀರು ಪೂರೈಕೆ ಆಗುತ್ತದೆ. ಪಂಪ್‌ ಹೌಸ್‌ಗೆ ನೀರೆತ್ತುವ ಜಾಕ್‌ ವೆಲ್‌ನಲ್ಲಿ ಕೆಸರು ತುಂಬಿ ಕೈ ಕೊಟ್ಟಿದೆ. ಎರಡು ದಿನಗಳಿಂದ ನೀರೆತ್ತುವುದನ್ನು ನಿಲ್ಲಿಸಲಾಗಿದೆ. ಟ್ಯಾಂಕಿಯಲ್ಲಿ ಸಂಗ್ರಹಗೊಂಡ ನೀರು ಮಲಿನವಾಗಿದೆ. ಮಂಗಳವಾರ ಟ್ಯಾಂಕಿ ಶುಚಿಗೊಳಿಸುವ ಕೆಲಸ ಆರಂಭಗೊಂಡಿದೆ. 

ತಾತ್ಕಾಲಿಕ ಪ್ರಯತ್ನ 
ನದಿ ನೀರಿನ ಶುದ್ಧೀಕರಣ ಅಸಾಧ್ಯ. ಈ ಕಾರಣಕ್ಕೆ ನದಿಯಿಂದ ನೀರೆತ್ತುವಿಕೆ ನಿಲ್ಲಿಸಲಾಗಿದೆ. ಜನರಿಗೆ ಸಮಸ್ಯೆ ಆಗಿರುವುದು ನಿಜ. ಆದರೆ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ. ಕೊಳವೆ ಬಾವಿ ಹಾಗೂ ಕೇರ್ಪಳದ ಖಾಸಗಿ ಕೆರೆಗೆ ಪಂಪ್‌ ಅಳವಡಿಸಿ ನೀರು ಒದಗಿಸುವ ಪ್ರಯತ್ನ ಮಾಡುತ್ತೇವೆ. ಟ್ಯಾಂಕರ್‌ ಮೂಲಕವೂ ನೀರು ಪೂರೈಸಲಾಗುವುದು.
 - ಚಂದ್ರಕುಮಾರ್‌
ಮುಖ್ಯಾಧಿಕಾರಿ, ನ.ಪಂ.ಸುಳ್ಯ 

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next