Advertisement

ಮುಂಗಾರು ಪೂರ್ವದಲ್ಲೇ ಮೈದುಂಬಿದ ಪಯಸ್ವಿನಿ

03:10 AM May 31, 2018 | Team Udayavani |

ಸುಳ್ಯ: ಭಾಗಮಂಡಲ ಭಾಗದಲ್ಲಿ ಭರ್ಜರಿ ಮಳೆ ಸುರಿದ ಹಿನ್ನೆಲೆಯಲ್ಲಿ ಸುಳ್ಯ ನಗರದ ಸನಿಹದಲ್ಲಿ ಹಾದು ಹೋಗಿರುವ ಪಯಸ್ವಿನಿ ಮುಂಗಾರು ಪೂರ್ವದಲ್ಲಿಯೇ ತುಂಬಿ ಹರಿದು ಕೃಷಿಕರ ಮೊಗದಲ್ಲಿ ಸಂತಸ ಮೂಡಿದೆ. ಮಡಿಕೇರಿ ತಾಲೂಕಿನ ಭಾಗಮಂಡಲದ ಪಶ್ಚಿಮ ದಿಕ್ಕಿನಲ್ಲಿ ಉಗಮಗೊಂಡು ಜೋಡುಪಾಲದ ಮೂಲಕ ಅರಂತೋಡು, ಸುಳ್ಯ ನಗರ, ಪೈಚಾರು, ಜಾಲೂÕರು, ಪಂಜಿಕಲ್ಲು, ದೇವರಗುಂಡ ಮುರೂರು ಮೂಲಕ ಸಾಗಿ ಕೇರಳ ಸೇರುತ್ತದೆ. ಬೇಸಗೆ ಕಾಲದಲ್ಲಿ ಈ ನದಿ ತಟದೊದ್ದಗಿನ ಕೃಷಿಕರಿಗೆ ಪಯಸ್ವಿನಿಯೇ ಜೀವಧಾರೆ. ಸುಳ್ಯದ ನಗರಕ್ಕೆ ಕುಡಿಯುವ ನೀರಿಗೂ ಇದೆ ಮೂಲವಾಗಿದೆ.

Advertisement

ಜೀವಕಳೆ
ಎರಡು ವರ್ಷದ ಹಿಂದೆ ಎಪ್ರಿಲ್‌, ಮೇ ತಿಂಗಳಿನಲ್ಲಿ ಪಯಸ್ವಿನಿ ಸಂಪೂರ್ಣ ಬತ್ತಿ ಬರಡಾಗಿತ್ತು. ಆಗ ಕುಡಿಯುವ ನೀರಿಗೂ ಬರ ಬರುವ ಸಂದರ್ಭ ಎದುರಾಗಿತ್ತು. ಜೂನ್‌ ಮೊದಲ ವಾರದಲ್ಲಿ ಮಳೆಯಾದ ಕಾರಣ, ಆತಂಕ ದೂರವಾಗಿತ್ತು. ಆ ವರ್ಷ ಜುಲೈ ಅನಂತರವೇ ಮಳೆ ಹೆಚ್ಚಳಗೊಂಡು ನದಿಯಲ್ಲಿ ನೀರಿನ ಹರಿವು ಕಂಡಿತ್ತು. ಕಳೆದ ವರ್ಷವೂ ಬಿಸಿಲಿನ ತಾಪ ಮೇ ಅಂತ್ಯದ ತನಕ ಇದ್ದು, ಮಳೆ ಬಂದಿದ್ದರೂ, ನೀರಿನ ಮಟ್ಟ ಹೆಚ್ಚಳಗೊಂಡಿರಲಿಲ್ಲ.

ಮುಂಗಾರು ಪೂರ್ವ ಮಳೆ
ಈ ಬಾರಿ ಮಾರ್ಚ್‌, ಎಪ್ರಿಲ್‌, ಮೇ ತಿಂಗಳಿನಲ್ಲಿ ಮಳೆಯಾಗಿದೆ. ಪಯಸ್ವಿನಿ ಉಗಮದ ಸ್ಥಳದಲ್ಲಿ ಮುಂಗಾರು ಪೂರ್ವ ಮಳೆ ನಿರೀಕ್ಷೆಗೂ ಮೀರಿ ಸುರಿದ ಕಾರಣ, ಮೇ ಮೊದಲ ವಾರದಲ್ಲಿಯೇ ನದಿ ಹರಿವು ಹೆಚ್ಚಾಗಿತ್ತು. ಮೇ 9ರಂದು ಸುರಿದ ಮಳೆಯಿಂದ ನಗರದ ಕುಡಿಯುವ ನೀರಿನ ಪೂರೈಕೆಗಾಗಿ ನಾಗಪಟ್ಟಣದ ಬಳಿ ನಿರ್ಮಿಸಲಾದ ಮರಳಿನ ಕಟ್ಟದಿಂದ ಹೊರ ಹರಿವು ಕಂಡಿತ್ತು. ಮಾರ್ಚ್‌ನಲ್ಲಿ 49 ಮಿ.ಮೀ., ಎಪ್ರಿಲ್‌ನಲ್ಲಿ 125 ಮಿ.ಮೀ., ಮೇ ತಿಂಗಳಲ್ಲಿ 516 ಮಿ.ಮೀ. ಮಳೆ ಸುರಿದಿದೆ. ಇವೆಲ್ಲವೂ ನದಿಯ ನೀರಿನ ಮಟ್ಟ ಹೆಚ್ಚಳಕ್ಕೆ ಪೂರಕವಾಗಿವೆ.

ನೀರಿನ ಸೆಲೆ
ಕೆಲ ದಿನಗಳಿಂದ ಮಳೆಯಾದ ಪರಿಣಾಮ ಕೆಲವೆಡೆ ಬಾವಿ, ಕೆರೆಯಲ್ಲಿ ನೀರಿನ ಸೆಲೆ ಕಂಡಿದೆ. ಸಣ್ಣ ಪುಟ್ಟ ತೋಡು, ಹೊಳೆಗಳಲ್ಲಿಯು ಕೆಂಬಣ್ಣದ ನೀರು ಹರಿದಿದೆ. ಮಳೆ ನಿರಂತರವಾಗಿ ಸುರಿದರೆ, ನೀರಿನ ಮೂಲಗಳು ಭರ್ತಿ ಆಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next