‘ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ, ಪಯಣಿಗ ನಾನಮ್ಮ…’ -ಇದು “ಶುಭಮಂಗಳ’ ಚಿತ್ರದ ಹಾಡು. ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ “ಪಯಣಿಗರು’ ಚಿತ್ರ. ಹೌದು “ಪಯಣಿಗರು’ ಕೂಡ ಸ್ನೇಹಿತರ ಜೊತೆ ಸಾಗುವ ಚಿತ್ರ. ಆರು ಮಂದಿ ಗೆಳೆಯರು ಕಡಲ ಕಡೆ ಪಯಣ ಬೆಳೆಸುತ್ತಾರೆ. ಬದುಕಿನಲ್ಲಿ ಎಲ್ಲರೂ ಇಲ್ಲಿ ಪಯಣಿಗರೇ. ಚಿತ್ರದಲ್ಲೊಂದು ಸೂಕ್ಷ್ಮ ಸಂವೇದನೆಯ ವಿಷಯವಿದೆ. ಕಾಡುವ ಅಂಶಗಳೂ ಇವೆ. ಸದ್ದಿಲ್ಲದೆಯೇ ಮುಗಿದಿರುವ “ಪಯಣಿಗರು’ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಹಾಡು ಮತ್ತು ಟ್ರೇಲರ್‌ವೊಂದನ್ನು ಪ್ರದರ್ಶಿಸಲಾಯಿತು.
“ಸಡಗರ’ ಮತ್ತು “ದಿಲ್‌ರಾಜ’ ನಂತರ ರಾಜ್‌ಗೋಪಿ ನಿರ್ದೇಶಿಸುತ್ತಿರುವ ಮೂರನೇ ಚಿತ್ರವಿದು. ಸಮಾನ ಮನಸ್ಸಿನ ಗೆಳೆಯರು ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಮೊದಲ ಸಲ ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ ತಮ್ಮ ಸಿನಿಮಾ ಪಯಣದ ಅನುಭವ ಹಂಚಿಕೊಂಡಿತು. ಮೊದಲು ಮಾತಿಗಿಳಿದದ್ದು ನಿರ್ದೇಶಕ ರಾಜ್‌ಗೋಪಿ. ‘ಈ ಕಥೆ ಹುಟ್ಟಿದ್ದೇ ಅಚ್ಚರಿ. ಜರ್ನಿ ಸ್ಟೋರಿ ಸಾಕಷ್ಟು ಬಂದಿವೆ. ಆ ಪೈಕಿ ಹೊಸದೇನಾದರೂ ಕೊಡಬೇಕು ಅಂತ ಹೊರಟಾಗ ‘ಪಯಣಿಗರು’ ಚಿತ್ರದಲ್ಲಿ ವಿಶೇಷ ಮತ್ತು ಅಪರೂಪದ ಎನಿಸುವ ಅಂಶಗಳನ್ನು ಪೋಣಿಸಿ ಮಾಡಿದ ಚಿತ್ರವಿದು. ಇಲ್ಲಿ ಹೀರೋಗಳೆಂಬುದು ಇಲ್ಲ. ಕಥೆಯೇ ಹೀರೋ. ಹಾಗಾಗಿ ಚಿತ್ರದಲ್ಲಿ 40 ಪ್ಲಸ್ ಗೆಳೆಯರೆಲ್ಲಾ ಸೇರಿ ಗೋವಾಗೆ ಹೋಗಲು ನಿರ್ಧರಿಸುತ್ತಾರೆ. ಮನೆಯಲ್ಲಿ ಪತ್ನಿಯರ ವಿರೋಧದ ನಡುವೆಯೂ ಜರ್ನಿ ಮುಂದುವರೆಸುತ್ತಾರೆ. ಒಬ್ಬೊಬ್ಬರದು ಒಂದೊಂದು ವ್ಯಕ್ತಿತ್ವ. ಅಂತಹವರ ನಡುವೆ ಆ ಜರ್ನಿ ಹೇಗೆ ಸಾಗುತ್ತೆ, ಅವರು ಗೋವಾ ತಲುಪುವ ಮಧ್ಯೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ. ವಿಶೇಷವಾಗಿ ಒಂದು ಘಟನೆ ನಡೆದುಹೋಗುತ್ತೆ. ಆ ಬಳಿಕ ಅವರ ನಡುವಿನ ಮುನಿಸು, ಹಾರಾಟ, ಕಿರುಚಾಟಗಳೆಲ್ಲಾ ಹೇಗೆ ತಣ್ಣಗಾಗುತ್ತವೆ ಎಂಬುದು ಕಥೆ. ಇಡೀ ಚಿತ್ರ ಬೆಂಗಳೂರು ಟು ಗೋವಾವರೆಗೆ ನಡೆದಿದೆ. ಅದರಲ್ಲೂ ಶೇ.80 ರಷ್ಟು ಕಾರಿನಲ್ಲೇ ನಡೆಯಲಿದೆ. ಚಿತ್ರೀಕರಣ ನಡೆಸಿದ್ದು ಸಾಹಸವಾಗಿತ್ತು. ಇಲ್ಲಿ ಜೀವನ ಅಂದುಕೊಂಡಂಗೆ ನಡೆಯಲ್ಲ. ಯಾವಾಗ, ಏನು ಬೇಕಾದರೂ ನಡೆಯಬಹುದು. ಅಂತಹ ಘಟನೆಯೊಂದು ನಡೆದು ಹೋದ ನಂತರದ ಎಫೆಕ್ಟ್ ಚಿತ್ರದ ಹೈಲೈಟ್’ ಎನ್ನುತ್ತಾರೆ ನಿರ್ದೇಶಕರು.
ಸಂಗೀತ ನಿರ್ದೇಶಕ ವಿನು ಮನಸು ಅವರಿಗೆ ತುಂಬಾ ಖುಷಿ ಕೊಟ್ಟ ಚಿತ್ರವಂತೆ ಇದು. “ಇದೊಂದು ಮನುಷ್ಯನ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಸಿನಿಮಾ. ಅದರಲ್ಲೂ ಪ್ರತಿಯೊಬ್ಬರ ಲೈಫಲ್ಲೂ ಎದುರಾಗುವಂತಹ ಸಂದರ್ಭಗಳು ಇಲ್ಲಿವೆ. ಸಿನಿಮಾ ನೋಡಿದ ಮೇಲೂ ಕಾಡುವಂತಹ ಅನೇಕ ಅಂಶಗಳು ಇಲ್ಲಿವೆ. ಕೆ.ಕಲ್ಯಾಣ್ ಬರೆದ “ಬರೀ ದೇಹವಲ್ಲ..’ ಎಂಬ ಹಾಡು ಬದುಕಿನ ಸತ್ಯವನ್ನು ಹೇಳುತ್ತದೆ. ನನ್ನ ಸಂಗೀತದಲ್ಲಿ ಅಂಥದ್ದೊಂದು ಹಾಡು ಸಿಕ್ಕಿದ್ದು ಅದೃಷ್ಟ’ ಎಂದರು ವಿನು ಮನಸು.
ಲಕ್ಷ್ಮಣ್ ಶಿವಶಂಕರ್ ಇಲ್ಲಿ ಜೀವನ್ ಎಂಬ ಪಾತ್ರ ಮಾಡಿದ್ದಾರಂತೆ. ಲೈಫ್ಗೆ ಹತ್ತಿರವಾಗಿರುವಂತಹ ಪಾತ್ರವದು. ಗೆಳೆಯರ ಗುಂಪಲ್ಲಿ ಸದಾ ಕ್ಯಾತೆ ತೆಗೆಯುವಂತಹ ಪಾತ್ರ. ಅಶ್ವಿನ್ ಹಾಸನ್ ಅವರಿಗೂ ಇಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಎಂಜಿನಿಯರಿಂಗ್ ಬಿಟ್ಟು ಐದು ವರ್ಷ ಈ ರಂಗದಲ್ಲಿ ಹುಡುಕಾಟ ನಡೆಸಿದವನಿಗೆ ನಂಬಿಕೆ ಇಟ್ಟು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ನಿತ್ಯಾನಂದ ಎಂಬ ಮಜವಾದ ಪಾತ್ರ ನನ್ನದು ಎಂದರು ಅಶ್ವಿನ್ ಹಾಸನ್.
ರಾಘವೇಂದ್ರ ನಾಯಕ್ ಅವರಿಲ್ಲಿ ಕಳೆದ 16 ವರ್ಷಗಳಿಂದಲೂ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಟನೆಯನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಅವರಿಗೆ ‘ಪಯಣಿಗರು’ ಒಂದೊಳ್ಳೆಯ ಹೆಸರು ತಂದುಕೊಡುತ್ತೆ ಎಂಬ ನಂಬಿಕೆ ಇದೆ. ಇಲ್ಲಿ ಅವರು ಲೆಕ್ಚರರ್ ಪಾತ್ರ ಮಾಡಿದ್ದಾರಂತೆ. ಐವರು ತರಲೆ ಗಂಡಸರ ಜೊತೆ ಹಿರಿಯ ವ್ಯಕ್ತಿ ನಾಗರಾಜ್ ರಾವ್ ಇಲ್ಲಿ ರಾಮಪ್ಪ ಪಾತ್ರ ಮಾಡಿದ್ದಾರೆ. ಉಳಿದಂತೆ ಸುಧೀರ್ ಮತ್ತು ರಾಘವೇಂದ್ರ ಬೂದನೂರು ನಟಿಸಿದ್ದಾರೆ.