Advertisement

10ರೊಳಗೆ ಕಬ್ಬಿನ ಬಾಕಿ ಹಣ ಪಾವತಿಸಿ

10:54 AM Jul 02, 2019 | Team Udayavani |

ಬೀದರ: ಜುಲೈ 10ರ ಒಳಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಹಣ ಪಾವತಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಕಾರ್ಖಾನೆಗಳ ಮುಖ್ಯಸ್ಥರಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಬ್ಬು ಸರಬರಾಜು ಮಾಡಿದ ರೈತರು, ಸಕ್ಕರೆ ಕಾರ್ಖಾನೆಯ ಮಾಲೀಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಕಾರಣ ನೀಡದೇ ಎಲ್ಲ ರೈತರಿಗೆ ಪ್ರತಿ ಟನ್‌ ಕಬ್ಬಿಗೆ 1,900 ಹಣ ಪಾವತಿ ಮಾಡಬೇಕು. ಎಫ್‌ಆರ್‌ಪಿ ದರವನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಸೂಚಿಸಿದರು.

ವಿವಿಧ ಬ್ಯಾಂಕ್‌ ವ್ಯವಸ್ಥಾಪಕರು ಹಾಗೂ ಅಧ್ಯಕ್ಷರು ಮಾಹಿತಿ ನೀಡಿದರು. ಈ ವೇಳೆ ಮಹಾತ್ಮಾ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಹಣ ಪಾವತಿಸಿದೆ ಎಂದು ಮಾಹಿತಿ ನೀಡಿದರು. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ 9.33 ಕೋಟಿ, ಬೀದರ ಸಹಕಾರ ಸಕ್ಕರೆ ಕಾರ್ಖಾನೆ 4.86 ಕೋಟಿ, ಭಾಲ್ಕೇಶ್ವರ ಶುಗರ್ 12.12 ಕೋಟಿ ಬೀದರ ಕಿಸಾನ್‌ ಸಕ್ಕರೆ ಕಾರ್ಖಾನೆ 12.92 ಕೋಟಿ, ಭವಾನಿ ಶುಗರ್ 1.74 ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಸಂಸದ ಭಗವಂತ ಖೂಬಾ, ಎಂಎಲ್ಸಿ ಅರವಿಂದಕುಮಾರ ಅರಳಿ ಅವರು, ಪ್ರತಿ ವರ್ಷ ಕಬ್ಬು ಬೆಳೆಗಾಗರರು ಬಾಕಿ ಹಣಕ್ಕಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿವರ್ಷ ಕಬ್ಬಿನ ಹಣಕ್ಕಾಗಿ ರೈತರು ಪರದಾಡುವ ಸ್ಥಿತಿ ಮರುಳಿ ಬರದಂತೆ ಸಹಕಾರ ಸಚಿವರು ಸೂಕ್ತ ನಿರ್ದೇಶನ ನೀಡಬೇಕು. ಕಾನೂನು ಕ್ರಮದಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ರೈತರಿಗೆ ಪ್ರತಿಟನ್‌ ಕಬ್ಬಿಗೆ 2,200 ನೀಡುವಂತೆ ತಿಳಿಸಿದ್ದರು. ಆದರೆ, ಅದು ಅನುಷ್ಠಾನವಾಗಿಲ್ಲ. ಇದೀಗ ಮುಂದಿನ 10 ದಿನಗಳಲ್ಲಿ ಎಲ್ಲ ರೈತರ ಬಾಕಿ ಹಣ ಪಾವತಿಗೆ ಕ್ರಮ ವಹಿಸಬೇಕು. ಯಾವ ಕಾರ್ಖಾನೆ ರೈತರ ಹಣ ಪಾವತಿ ಮಾಡಲು ಮುಂದಾಗುವುದಿಲ್ಲವೊ ಅಂತ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಿ ರೈತರ ಹಣ ಪಾವತಿಗೆ ಜಿಲ್ಲಾಡಳಿತ ಮುಂದಾಬೇಕು ಎಂದು ಒತ್ತಾಯಿಸಿದರು.

Advertisement

ಈ ಮಧ್ಯೆ ರೈತರು ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಸಂದರ್ಭದಲ್ಲಿ ಸಕ್ಕರೆ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಅದು ಯಾವ ಕಾರಣಕ್ಕೆ ಉತ್ಪಾದನೆ ಕಡಿಮೆ ಆಗುತ್ತಿದೆ ಎಂದು ಪ್ರಶ್ನಿಸಿದರು.

ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಒಣಗಿದ ಕಬ್ಬು ತಂದು ಸಕ್ಕರೆ ಮಾಡಿದರೆ ಇಳುವರಿ ಕಡಿಮೆ ಬರುತ್ತದೆ. ಈ ಕುರಿತು ಈಗಾಗಲೇ ಅಧಿಕಾರಿಗಳ ತಂಡ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ್ದಾರೆ ಎಂದು ರೈತರಿಗೆ ಉತ್ತರಿಸಿದರು. ಆದರೆ, ಅಧ್ಯಕ್ಷರ ಮಾತಿಗೆ ಒಪ್ಪದ ರೈತರು, ಎಲ್ಲ ಕಾರ್ಖಾನೆಗಳಿಗೆ ಸಮನಾದ ಕಬ್ಬು ಪೂರೈಕೆ ಆಗಿದೆ. ಒಂದು ಕಾರ್ಖಾನೆಯಲ್ಲಿ ಹೆಚ್ಚು ಉತ್ಪಾದನೆ ಬಂದರೆ, ಇನ್ನೊಂದು ಕಾರ್ಖಾನೆಯಲ್ಲಿ ತೀರ ಕಡಿಮೆ ಇಳುವರಿ ಬರುವುದು ಯಾಕೆ. ತನಿಖೆ ನಡೆಸಿದ ಅಧಿಕಾರಿಗಳು ಪಾರರ್ದಕತೆ ಕಾಪಾಡಿಲ್ಲ ಎಂದು ಆರೋಪಿಸಿದರು.

ಮಹಾರಾಷ್ಟ್ರದ ಬೆಲೆ ನೀಡಿ: ಸಂಸದ ಭಗವಂತ ಖೂಬಾ ಮಾತನಾಡಿ, ಮುಂದಿನ ಹಂಗಾಮಿನಲ್ಲಿ ನೆರೆಯ ರಾಜ್ಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ನೀಡುವ ಬೆಲೆಯನ್ನು ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ನೀಡಬೇಕು. ಯಾವ ಕಾರ್ಖಾನೆಗಳು ಸೂಕ್ತ ಬೆಲೆ ನೀಡಲು ಮುಂದಾಗುವುದಿಲ್ಲವೊ ಅಂತಹ ಕಾರ್ಖಾನೆಗಳಿಗೆ ಜಿಲ್ಲೆಯ ರೈತರು ಕಬ್ಬು ಪೂರೈಕೆ ಮಾಡುವುದಿಲ್ಲ. ಅಂತಹ ಕಾರ್ಖಾನೆಗಳ ವಿರುದ್ಧ ರೈತರು ದಂಗೆ ಎಂದು ಪ್ರತಿಭಟನೆ ಕೂಡ ನಡೆಸಬಹುದು ಎಂದು ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರಿಗೆ ಎಚ್ಚರಿಸಿದರು. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಲ್ಲಿ ಕಬ್ಬು ಕಟ್ಟಾವಿಗೆ ಬರುತ್ತಿದ್ದಾರೆ. 2,100 ಬೆಲೆ ನೀಡುತ್ತಿದ್ದಾರೆ. ಆದರೆ, ನಮ್ಮ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಉಳಿಯಬೇಕು ಎಂಬ ನಿಟ್ಟಿನಲ್ಲಿ ಇಲ್ಲಿನ ರೈತರು ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಇದೀಗ ಯಾವ ಕಾರ್ಖಾನೆ ಹೆಚ್ಚು ಬೆಲೆ ನೀಡುತ್ತದೊ ಆ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಸುತ್ತಾರೆ ಎಂಬುದನ್ನು ಸಕ್ಕರೆ ಕಾರ್ಖಾನೆ ಮುಖ್ಯಸ್ಥರು ತಿಳಿದುಕೊಳ್ಳಬೇಕು ಎಂದರು.

ರೈತರು ಭಿಕ್ಷುಕರೆ?: ಈ ವೇಳೆ ರೈತ ಮುಖಂಡರು ಮಾತನಾಡಿ, ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು ರೈತರನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ. ಕಬ್ಬು ಕಟ್ಟಾವು ಮಾಡಿದ ನಂತರ ನಿಗದಿತ ಅವಧಿಯಲ್ಲಿ ಯಾವ ಕಾರ್ಖಾನೆಗಳೂ ಹಣ ಪಾವತಿ ಮಾಡುತ್ತಿಲ್ಲ. ಕಬ್ಬು ಸಾಗಿಸಿ ವರ್ಷ ಕಳೆದರೂ ಕೂಡ ಕಾರ್ಖಾನೆಯವರು ಹಣ ನೀಡಲು ಮುಂದಾಗುತ್ತಿಲ್ಲ. ರೈತರನ್ನು ಭಿಕ್ಷುಕರಂತೆ ಕಾಣುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಎಂಡಿಗಳ ನೇಮಕ: ಇದೇ ವೇಳೆ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ್‌ ಮೊಬೈಲ್ ಮೂಲಕ ಅಧಿಕಾರಿಗೆ ಕರೆ ಮಾಡಿ, ರಾಜ್ಯದ ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಖಾಲಿ ಇರುವ ವ್ಯವಸ್ಥಾಪಕರ ಸಂಖ್ಯೆ ಹಾಗೂ ಖಾಸಗಿ ವ್ಯಕ್ತಿಗಳನ್ನು ತೆಗೆದುಕೊಂಡಿರುವ ವ್ಯವಸ್ಥಾಪಕರ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು. ಎಲ್ಲ ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರಿ ಅಧಿಕಾರಿಗಳನ್ನೆ ವ್ಯವಸ್ಥಾಪರನ್ನಾಗಿ ಮಾಡುವ ಉದ್ದೇಶ ಇದೆ ಎಂದು ಸಚಿವರು ತಿಳಿಸಿದರು.

ಕ್ರೀಡಾ ಸಚಿವ ರಹೀಂ ಖಾನ್‌, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ, ಜಿಲ್ಲಾಧಿಕಾರಿ ಡಾ|ಎಚ್.ಆರ್‌. ಮಹಾದೇವ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಡಾ| ಶಂಕರ್‌ ವಣಕ್ಯಾಳ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ್‌ ನಾಗಮಾರಪಳ್ಳಿ, ದತ್ತಾತ್ರೇಯ ಬಾಚಪಳ್ಳಿ, ಬೀದರ್‌ ಕಿಸಾನ್‌ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಸೀಮೋದ್ದೀನ್‌ ಪಟೇಲ್, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಖಾಸೀಂ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next