ಬೆಳ್ತಂಗಡಿ: ಆದಾಯ ತೆರಿಗೆಯ ಲೆಕ್ಕಾಚಾರ ಸಾಮಾನ್ಯ ನಾಗರಿಕನ ಪರಿಧಿಯಿಂದ ಹೊರಗಿದೆ ಎಂದರೆ ಅದು ನಮ್ಮ ತಪ್ಪು ತಿಳಿವಳಿಕೆ. ತೆರಿಗೆ ಲೆಕ್ಕಾಚಾರಗಳು ಕಷ್ಟಕರವೇನಲ್ಲ, ಅವುಗಳ ವಿಚಾರಗಳು ದೈನಂದಿನ ಚಟುವಟಿಕೆಗಳಿಂತ ಸ್ವಲ್ಪ ವಿಭಿನ್ನವಷ್ಟೆ ಎಂದು ಉಜಿರೆಯ ಎಸ್.ಡಿ.ಎಂ. ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಭಾನುಪ್ರಕಾಶ್ ತಿಳಿಸಿದರು. ಉಜಿರೆಯ ಸ್ನಾತಕೋತ್ತರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿ.ಎಸ್.ಟಿ. ಎಂಬ ಏಕರೂಪದ ತೆರಿಗೆ ಪದ್ಧತಿ ಜಾರಿಗೆ ಬಂದ ಮೇಲೆ ತೆರಿಗೆಗಳ್ಳರ ಸಂಖ್ಯೆ ಕಡಿಮೆಯಾಗಿದೆ. ಜಿ.ಎಸ್.ಟಿ. ತೆರಿಗೆ ಪದ್ಧತಿಯು ಅತ್ಯಂತ ಕಡಿಮೆ ದೋಷಗಳನ್ನು ಹೊಂದಿರುವ ವ್ಯವಸ್ಥೆಯಾಗಿದ್ದು, ಆರ್ಥಿಕಾಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ಇತ್ತೀಚಿನ ಕೇಂದ್ರ ಸರಕಾರದ ಬಜೆಟಿನ ಪ್ರಾಕಾರ ನಿಗದಿಯಾದ ಪರಿಷ್ಕೃತ ತೆರಿಗೆ ಪರಿಧಿಯ ಪ್ರಕಾರ ಆದಾಯ ತೆರಿಗೆಯ ಲೆಕ್ಕಾಚಾರವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಹೇಳಿದರು.
ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಗಣರಾಜ್ ಸ್ವಾಗತಿಸಿ, ವಿದ್ಯಾರ್ಥಿನಿ ಆಶ್ರಿತ ವಂದಿಸಿದರು. ಸಹಪ್ರಾಧ್ಯಾಪಕ ಡಾ| ಯುವರಾಜ್ ಉಪಸ್ಥಿತರಿದ್ದರು.