ಬೆಳಗಾವಿ: ಅಕ್ಷರ ದಾಸೋಹ ಯೋಜನೆಯಡಿ ಶಾಲೆಯಲ್ಲಿ ಅಡುಗೆ ಮಾಡುವ ನೌಕರರಿಗೆ ಸೂಕ್ತ ವೇತನ, ಪಿಂಚಣಿ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದು, ವಿವಿಧ ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ| ಬಿ.ಆರ್. ಅಂಬೇಡ್ಕರ್ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸುತ್ತಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಪ್ರತಿಭಟನಾನಿರತ ಸಂಘದ ಸದಸ್ಯರು, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಶ್ರಮಿಸುತ್ತಿರುವ ಮಹಿಳೆಯರಿಗೆ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ. ಅಡುಗೆ ನೌಕರರಿಗೆ ಸಮಾನ ವೇತನ ಇಲ್ಲದೇ ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಪ್ರತಿ ತಿಂಗಳು ಕೇವಲ 2600 ರೂ. ವೇತನ ನೀಡುತ್ತಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಸಿಗದೇ ವಂಚಿರಾಗುವಂತಾಗಿದೆ ಎಂದು ಆರೋಪಿಸಿದರು.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಸುಮಾರು 1.18 ಲಕ್ಷ ಬಡ ಮಹಿಳೆಯರು ಕೆಲಸ ಮಾಡುತ್ತಿದ್ದು, ಸರಿಯಾದ ಸಂಬಳ, ಪಿಂಚಣಿ ಇಲ್ಲದೇ ಉಪಜೀವನ ಕಷ್ಟಕರವಾಗಿದೆ. ಸಮಾನ ವೇತನ, ಎಲ್ ಐಸಿ ಮೂಲಕ ಪಿಂಚಣಿ ನೀಡುವ ಮೂಲಕ ಬಡ ನೌಕರರಿಗೆ ಭದ್ರತೆ ಒದಗಿಸಬೇಕು. ಕೆಲ ತಿಂಗಳುಗಳಿಂದ ನೌಕರರಿಗೆ ವೇತನ ತಡೆ ಹಿಡಿದಿರುವುದು ಸರಿ ಅಲ್ಲ. ಕೂಡಲೇ ಎಲ್ಲ ಜಿಲ್ಲೆಗಳಲ್ಲಿರುವ ಅಕ್ಷರ ದಾಸೋಹ ನೌಕರರ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ್ ಪಿಂಚಣಿ ಯೋಜನೆಯಡಿ ಅಡುಗೆ ನೌಕರರಿಗೆ ಪಿಂಚಣಿ ನೀಡಲು ಮುಂದಾಗಿದೆ. ಆದರೆ ಇದರಿಂದ ನೌಕರರಿಗೆ ಯಾವುದೇ ಸೌಲಭ್ಯ ಸಿಗಲು ಸಾಧ್ಯವಿಲ್ಲ. ಈ ಯೋಜನೆ ಪ್ರಕಾರ ಕೇವಲ 18ರಿಂದ 40 ವರ್ಷದೊಳಗಿನವರಿಗೆ ಮಾತ್ರ ಈ ಪಿಂಚಣಿ ಸೌಲಭ್ಯ ಸಿಗುತ್ತದೆ. ಆದರೆ ಹೆಚ್ಚಿನ ಸಂಖ್ಯೆಯ ನೌಕರರು 40 ವರ್ಷದ ಮೇಲ್ಪಟ್ಟಿದ್ದರಿಂದ ಕೂಡಲೇ ಯೋಜನೆಯನ್ನು ಕೈಬಿಟ್ಟು ಎಲ್‌ಐಸಿ ಆಧಾರಿತ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಜಿ.ಎಂ. ಜೈನೇಖಾನ್, ತುಳಸಮ್ಮ ಮಾಳದಕರ, ಸುಮನ ಗಡಾದ, ಎಲ್.ಎಸ್. ನಾಯಕ, ಶಕುಂತಲಾ ಉರಣೆ, ಮಾಶಾಬಿ ಢಾಲಾಯತ್, ಸುಮತಿ ಕೊಲ್ಲಾಪುರೆ, ಭಾರತಿ ಜೋಗನ್ನವರ, ರಾಜಶ್ರೀ ಕವಳಿಕಟ್ಟಿ ಸೇರಿದಂತೆ ಅಡುಗೆ ನೌಕರರು ಇದ್ದರು.