Advertisement

ಜಿಎಸ್‌ಟಿ ಪಾವತಿಸಿ ಅಭಿವೃದ್ಧಿಗೆ ಕೈಜೋಡಿಸಿ; ಮೇಜರ್‌ ಪರಮದೀಪ್‌

12:56 PM Jul 02, 2022 | Team Udayavani |

ಬೆಳಗಾವಿ: ದೇಶದ ಜಿ.ಡಿ.ಪಿ ಮೌಲ್ಯ ಹೆಚ್ಚಿಸಲು ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಲು ಜಿ.ಎಸ್‌.ಟಿ ಪಾತ್ರ ಬಹಳ ದೊಡ್ಡದು. ದೇಶದಲ್ಲಿ ತೆರಿಗೆ ಪಾವತಿಸುವ ಅತೀ ಸರಳ ವಿಧಾನವಾಗಿದೆ. ಜಿ.ಎಸ್‌ .ಟಿ ವ್ಯಾಪ್ತಿಯಲ್ಲಿ ಬರುವ ಬೃಹತ್‌ ಹಾಗೂ ಮಧ್ಯಮ ಉದ್ದಿಮೆಗಳು ತೆರಿಗೆ ಪಾವತಿಸಿ ದೇಶದ ಬೆಳವಣಿಯಲ್ಲಿ ಕೈಜೋಡಿಸಬೇಕು ಎಂದು ವಿಂಗ್‌ ಕಮಾಂಡರ್‌ ಮೇಜರ್‌ ಪರಮದೀಪ್‌ ಸಿಂಗ್‌ ಬಾಜ್ವಾ ಹೇಳಿದರು.

Advertisement

ನಗರದ ಕೆ.ಎಲ್‌.ಇ ಶತಾಬ್ದಿ ಸಭಾಂಗಣದಲ್ಲಿ ಶುಕ್ರವಾರ ನಡೆದ 5ನೇ ವರ್ಷದ ಜಿ.ಎಸ್‌.ಟಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿಯ ಸಿ.ಜಿ.ಎಸ್‌.ಟಿ ಯಲ್ಲಿ ಕಳೆದ ವರ್ಷ 7,124 ಕೋಟಿ ರೂಪಾಯಿ ಸಂಗ್ರಹವಾಗಿತ್ತು. 2021-2022 ನೇ ಸಾಲಿನಲ್ಲಿ 10,172 ರೂ. ಹೆಚ್ಚಿನ ಜಿಎಸ್‌ ಟಿ ಸಂಗ್ರಹವಾಗಿದ್ದು ಇದರ ಹಿಂದೆ ಅಧಿಕಾರಿಗಳ ಪರಿಶ್ರಮ ಬಹಳಷ್ಟಿದೆ ಎಂದರು.

ಹೊಸ ತೆರಿಗೆ ಪದ್ಧತಿ ಅಳವಡಿಕೆ ಬಹಳ ಕಷ್ಟಕರವಾಗಿತ್ತು. 2017ರಲ್ಲಿ ಪ್ರಾರಂಭವಾದ ಜಿಎಸ್‌ಟಿ ವಿಧಾನ ಸತತ 5 ವರ್ಷಗಳಿಂದ ಸ್ಥಿರತೆ ಕಾಯ್ದುಕೊಂಡಿದೆ ಎಂದ ಅವರು, ಪ್ರತಿ ವರ್ಷ ಜಿಎಸ್‌ಟಿ ಹೆಚ್ಚು ಸಂಗ್ರಹವಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವದಲ್ಲಿ ದೇಶದ ಆರ್ಥಿಕತೆ ಬಲಪಡಿಸಲು ಜಿಎಸ್‌ಟಿ ಬಹಳ ಮುಖ್ಯವಾಗಿದೆ. ಜಪಾನ್‌, ಅಮೆರಿಕ ದಂತಹ ದೇಶಗಳಿಗೆ ಹೋಲಿಸಿದರೆ ಭಾರತ ದೇಶ ಕೂಡ ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ ಎಂದು ಪರಮದೀಪ್‌ ಸಿಂಗ್‌ ಬಾಜ್ವಾ ಹೇಳಿದರು.

ಜೆ.ಎಸ್‌.ಡಬ್ಲ್ಯೂ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ಗ್ರೂಪ್‌ ಮುಖ್ಯಸ್ಥ ವಿನೀತ ಅಗರ್ವಾಲ್‌ ಮಾತನಾಡಿ, ಯಾವುದೇ ಒಂದು ಯಶಸ್ಸಿಗೆ ಕಠಿಣ ಪರಿಶ್ರಮ ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಲ್ಲಿ ಜಿ.ಎಸ್‌.ಟಿ 2017ರಲ್ಲಿ ಜಾರಿಯಾಗಿದ್ದು, ಜಿಎಸ್‌ ಟಿ ಸಂಗ್ರಹಣೆಯು ಪ್ರತಿ ವರ್ಷಕ್ಕೆ ಏರಿಕೆಯಲ್ಲಿದೆ. ಮುಂಬರುವ ದಿನಗಳಲ್ಲಿ ದೇಶದಲ್ಲಿನ ವ್ಯಾಪಾರ ಉದ್ಯಮಗಳ ಬೆಳವಣಿಗೆಯಿಂದ ಪ್ರತಿ ವರ್ಷದಂತೆ ಜಿ.ಎಸ್‌.ಟಿ ಏರಿಕೆ ಪ್ರಮಾಣದಲ್ಲಿ
ಸಂಗ್ರಹವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿ.ಎಸ್‌.ಟಿ ಇದು ವಿವಿಧ ಮಾದರಿಯ ತೆರಿಗೆ ಪಾವತಿಸುವ ವಿಧಾನವಲ್ಲ. ಬೃಹತ್‌ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೆ ತೆರಿಗೆ ಪಾವತಿಸುವ ಸರಳ ಮಾದರಿಯ ವಿಧಾನವಾಗಿದೆ ಎಂದು ಹೇಳಿದರು. ತಮ್ಮ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಿ ಬರುವ ಲಾಭದಲ್ಲಿ ಪ್ರಾಮಾಣಿಕತೆಯಿಂದ ತೆರಿಗೆ ಪಾವತಿಸುವುದು ಉದ್ಯಮಿಗಳ ಕರ್ತವ್ಯ ವಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಉದ್ಯಮಿಗಳು ನೀಡುವ ಕೊಡುಗೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ತೆರಿಗೆ ಆಯುಕ್ತ ಬಸವರಾಜ ನಳೆಗಾವೆ ಅವರು ಪರಿಸರ, ಕ್ರೀಡೆ, ಉದ್ಯಮಶೀಲತೆ, ಮಹಿಳೆಯರ ಸಬಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿನ ಮಹಿಳಾ ಸಾಧಕರನ್ನು ಗುರುತಿಸಲು ಈ ಸಂದರ್ಭವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು. ಕಳೆದ ಐದು ವರ್ಷಗಳಲ್ಲಿ ಜಿಎಸ್‌ಟಿ ಕಾನೂನು ವಿಕಸನಗೊಂಡಿದ್ದು ಮತ್ತು ತೆರಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತಗ್ಗಿಸಿದೆ.

ತೆರಿಗೆ ಅನುಸರಣೆಗೆ ಸಂಬಂಧಿಸಿದಂತೆ ತೆರಿಗೆದಾರರ ಕುಂದುಕೊರತೆಗಳನ್ನು ಪರಿಹರಿಸಲಾಗುವದು ಎಂದು ಹೇಳಿದರು. ಕೆ.ಎಲ್‌. ಇ ವಿಶ್ವವಿದ್ಯಾಲಯದ ಕುಲಪತಿ ಡಾ| ವಿವೇಕ ಸಾವೋಜಿ, ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧಿಕಾರಿಗಳು, ವಿವಿಧ ಕಂಪನಿಯ ಮಾಲೀಕರು, ಉದ್ಯಮಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next