ಚಿತ್ರದುರ್ಗ: ಮಾರಕ ಕಾಯಿಲೆಗಳನ್ನು ನಿಯಂತ್ರಿಸಲು ಸರ್ಕಾರ ಹಲವಾರು ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡುವ ಮೂಲಕ ಇವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಬಿ.ವಿ.ನೀರಜ್ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಮದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಪೋಲಿಯೊ, ಬಿಸಿಜಿ, ಪೆಂಟಾ, ದಡಾರ, ಜಪಾನಿಸ್ ಎನ್‌ಸೆಫಾಲಿಟಿಸ್, ಧನುರ್ವಾಯು ಮತ್ತಿತರ ಮಾರಕ ರೋಗಗಳ ವಿರುದ್ಧ ಲಸಿಕೆ ನೀಡುವುದರ ಮೂಲಕ ಮಕ್ಕಳ ಆರೋಗ್ಯ ರಕ್ಷಣೆ ಮಾಡಲಾಗುತ್ತಿದೆ. ಅಲ್ಲದೆ ಮುಂದೆ ಮಕ್ಕಳಿಗೆ ಮಾರಕ ರೋಗಗಳು ತಗುಲದಂತೆ ಎಚ್ಚರ ವಹಿಸಲಾಗುತ್ತಿದೆ ಎಂದರು.
ಜಿಲ್ಲಾಸ್ಪತ್ರೆ, ನಗರ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಹಾಗೂ ಇತರೆ ಕ್ಷೇತ್ರ ಮಟ್ಟದ ಸಿಬ್ಬಂದಿಗಳ ಜ್ಞಾನ ವರ್ಧನೆಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಂಡು ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಪಿ.ಸಿ. ಕುಮಾರಸ್ವಾಮಿ, ಮಾರಕ ರೋಗಗಳಿಗೆ ಹಾಕಲಾಗುತ್ತಿರುವ ಲಸಿಕೆಗಳ ಸಂಗ್ರಹಣೆ, ನಿರ್ವಹಣೆ, ಶೀತಲೀಕರಣ ಬಗ್ಗೆ ಮತ್ತು ಲಸಿಕೆಗಳ ಉತ್ಪಾದನಾ ಸ್ಥಳದಿಂದ ಲಸಿಕೆ ನೀಡುವ ಸ್ಥಳದವರೆಗೂ ನಿರ್ವಹಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಬಳ್ಳಾರಿಯ ಎಸ್‌ಎಂಒ ಡಾ| ಶ್ರೀಧರ್, ಮಾರಕ ರೋಗಗಳಿಗೆ ಯಾವ ಸಂದರ್ಭದಲ್ಲಿ ಯಾವ ಲಸಿಕೆ ಹಾಕಬೇಕು, ಯಾವ ರೋಗಕ್ಕೆ ಯಾವ ತರಹದ ಲಸಿಕೆಗಳನ್ನು ನೀಡಬೇಕು ಎನ್ನುವ ವಿಧಾನ ಮತ್ತು ಮಾಹಿತಿಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳುವಂತೆ ಸಲಹೆ ನೀಡಿದರು. ಹೊಸದುರ್ಗ ತಾಲೂಕು ವೈದ್ಯಾಧಿಕಾರಿ ಡಾ| ಕವಿತಾ, ಆಯಾ ಆಸ್ಪತ್ರೆಗಳ ವ್ಯಾಪ್ತಿಯ ಕ್ಷೇತ್ರ ಮಟ್ಟದಲ್ಲಿ ಲಸಿಕೆಯ ಬೇಡಿಕೆ ಪಟ್ಟಿ ತಯಾರಿಸುವುದು, ಕ್ರಿಯಾಯೋಜನೆ ಸಿದ್ಧಪಡಿಸುವುದರ ಬಗ್ಗೆ ತಿಳಿಸಿಕೊಟ್ಟರು.
ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯಶಾಸ್ತ್ರ ವಿಭಾಗದ ಡಾ| ನಾಗೇಂದ್ರ ಗೌಡ, ಮಕ್ಕಳ ತಜ್ಞ ಡಾ| ಬಸಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಬಿ. ಜಯಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮತ್ತಿತರರು ಇದ್ದರು. ಜಿಲ್ಲೆಯ ಎಲ್ಲಾ ತಾಲೂಕು ವೈದ್ಯಾಧಿಕಾರಿ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಮೇಲ್ವಿಚಾರಕರು, ಆರೋಗ್ಯ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಆರೋಗ್ಯ ಇಲಾಖೆಯಿಂದ ಪೋಲಿಯೊ, ಬಿಸಿಜಿ, ಪೆಂಟಾ, ದಡಾರ, ಜಪಾನಿಸ್ ಎನ್‌ಸೆಫಾಲಿಟಿಸ್, ಧನುರ್ವಾಯು ಮತ್ತಿತರ ಮಾರಕ ರೋಗಗಳ ವಿರುದ್ಧ ಲಸಿಕೆ ನೀಡುವುದರ ಮೂಲಕ ಮಕ್ಕಳಿಗೆ ಆರೋಗ್ಯ ರಕ್ಷಣೆ ಮಾಡಲಾಗುತ್ತಿದೆ. ಅಲ್ಲದೆ ಮುಂದೆ ಮಕ್ಕಳಿಗೆ ಮಾರಕ ರೋಗಗಳು ತಗುಲದಂತೆ ಎಚ್ಚರ ವಹಿಸಲಾಗುತ್ತಿದೆ.
ಡಾ| ಬಿ.ವಿ. ನೀರಜ್, ಡಿಎಚ್‌ಒ.