ಚಿತ್ರದುರ್ಗ: ಅವಿಭಕ್ತ ಕುಟುಂಬ ಕರಗಿ ಹೋಗುತ್ತಿದ್ದು, ಸಂಬಂಧಗಳು ಹಂಚಿ ಹೋಗುತ್ತಿವೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ವಿಷಾದಿಸಿದರು. ಮುರುಘಾ ಮಠದ ಅನುಭವ ಮಂಟಪದ ಫ.ಗು. ಹಳಕಟ್ಟಿ ವೇದಿಕೆಯಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ “ಅವಿಭಕ್ತ ಕುಟುಂಬ ಮತ್ತು ಮಹಿಳೆ’ ಕುರಿತ ಮಹಿಳಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಶರಣರು ಮಾತನಾಡಿದರು.
ಕೌಟುಂಬಿಕ ಸಾಮರಸ್ಯ ಕಾಪಾಡಿಕೊಂಡು ಹೋಗುವ ಬದಲು ನ್ಯಾಯಾಲಯಗಳಿಗೆ ಹೋಗುತ್ತಾರೆ. ಸತಿ-ಪತಿಗಳ ನಡುವೆ ಸಾಮರಸ್ಯವೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಭೌತಿಕತೆ. ಬೌದ್ಧಿಕವಾಗಿ ನಾವು ಆಲೋಚನೆ ಮಾಡಬೇಕು. ಇಂದು ಕುಟುಂಬ, ಸಮಾಜ, ದೇಶವನ್ನು ಕಟ್ಟಬೇಕಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಜನರಿಗೆ ತಿಳಿವಳಿಕೆ ಹೇಳಿ ಜಾಗೃತಿ ಮೂಡಿಸಬೇಕಿದೆ ಎಂದರು.
ಸಾಹಿತಿ ಎನ್. ಗಾಯತ್ರಿ ಮಾತನಾಡಿ, ಅವಿಭಕ್ತ ಕುಟುಂಬಗಳ ವಿನಾಶದಿಂದ ಮಹಿಳೆಗೆ ಆಗುತ್ತಿರುವ ಸಂದರ್ಭಗಳನ್ನು ನೆನಪಿಸಿಕೊಳ್ಳಬೇಕು. 12ನೇ ಶತಮಾನವನ್ನು ಹೊರತುಪಡಿಸಿದರೆ ಹೆಣ್ಣನ್ನು ಸಮಾಜ ಬೌದ್ಧಿಕ ನೋಡಿಲ್ಲ. ಹೆಣ್ಣು ಇಂದು ಕುಟುಂಬದ ಒಳಗೆ ಇರುವ ಅಡ್ಡಗೋಡೆಗಳನ್ನು ಒಡೆಯಬೇಕು. ಅವಿಭಕ್ತ ಕುಟುಂಬ ಎಂಬ ಅಮೃತಬಳ್ಳಿಯನ್ನು ಹಾಕಬೇಕು. ಅವಿಭಕ್ತ ಕುಟುಂಬದ ಪರಿಕಲ್ಪನೆ ನಮಗೆ ಬರಬೇಕು. ಸ್ತ್ರೀವಾದ, ಮಾನವತಾವಾದದ ಹಿನ್ನೆಲೆ ಒಳಗೊಂಡಿರಬೇಕು ಎಂದು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಅವಿಭಕ್ತ ಕುಟುಂಬದ ಅನುಭವ ಸೊಗಸಾದುದು. ಗ್ರಾಮೀಣ ಭಾಗದಲ್ಲಿ ಅವಿಭಕ್ತ ಕುಟುಂಬವನ್ನು ನೋಡಬಹುದಾಗಿದ್ದು, ನಗರ ಪ್ರದೇಶಗಳಲ್ಲಿ ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ನಾನು ಶಾಸಕನಾಗಲು ನನ್ನ ಹೆಂಡತಿ ಮತ್ತು ತಾಯಿಯವರ ಪ್ರೀತಿ, ಆಶೀರ್ವಾದ ಹಾಗೂ ಪ್ರೋತ್ಸಾಹವೇ ಕಾರಣ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಬೆಳವಣಿಗೆಗೆ ಹೆಚ್ಚಿನ ಉತ್ತೇಜನದ ಅವಶ್ಯಕತೆ ಇದೆ ಎಂದರು.
“ಅಕ್ಕ’ ಕನ್ನಡ ಸಮ್ಮೇಳನ-2018ರ ಅಧ್ಯಕ್ಷರಾದ ಅಮೆರಿಕದ ಡಲ್ಲಾಸ್‌ನ ಶಿವಮೂರ್ತಿ ಕಿಲಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಎನ್. ಗೀತಾ ಅವರನ್ನು ಸನ್ಮಾನಿಸಲಾಯಿತು. ಧಾರವಾಡದ ವಿದುಷಿ ರಜನಿ ಎಸ್. ಕರಿಗಾರ್ ವಚನ ಗಾಯನ, ಕೊಪ್ಪಳದ ಗಾನಕೋಗಿಲೆ ಗಂಗಮ್ಮ ಗೀತ ಗಾಯನ ನಡೆಸಿಕೊಟ್ಟರು.