Advertisement

ಉದ್ಯೋಗಾವಕಾಶ ಕಲ್ಪಿಸಲು ಗಮನ ಕೊಡಿ

11:58 AM Jul 30, 2019 | Team Udayavani |

ಚಿತ್ರದುರ್ಗ: ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳು ನಿರುದ್ಯೋಗಿಗಳಿಗೆ ತರಬೇತಿ ನೀಡಲು ಸೀಮಿತವಾಗದೆ ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಉದ್ಯೋಗಾವಕಾಶ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚಿಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೃತ್ತಿ ಹಾಗೂ ವಿದ್ಯಾರ್ಹತೆ ಆಧಾರಿತ ನಿರುದ್ಯೋಗಿಗಳಿಗೆ ಆಸಕ್ತಿ ಇರುವ ಹಾಗೂ ಅವರ ವೃತ್ತಿ ನೈಪುಣ್ಯತೆ ವೃದ್ಧಿಗೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸರ್ಕಾರ ಸೃಜಿಸಿದೆ. ವೆಬ್‌ಸೈಟ್‌ನಲ್ಲಿ 400ಕ್ಕೂ ಹೆಚ್ಚು ಬಗೆಯ ತರಬೇತಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಸರ್ಕಾರ ನಿಗದಿಪಡಿಸಿರುವ ತರಬೇತಿ ಸಂಸ್ಥೆಗಳ ಮೂಲಕ ಕೌಶಲ್ಯ ತರಬೇತಿ ನೀಡಲಾಗುವುದು. ತರಬೇತಿ ಬಳಿಕ ಈ ಸಂಸ್ಥೆಗಳೇ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಯೋಜನೆ ರೂಪಿಸಲಾಗಿದೆ ಎಂದರು.

ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಹಾಗೂ ಬ್ಯಾಂಕ್‌ ಸಾಲದ ವ್ಯವಸ್ಥೆ ಇದೆ. ಇನ್ನು ಮುಂದೆ ಎಲ್ಲ ಇಲಾಖೆಗಳು ಫಲಾನುಭವಿ ಆಧಾರಿತ ತರಬೇತಿಗಳಿಗೆ ಆಯ್ಕೆ ಮಾಡುವಾಗ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿರುವವರನ್ನೇ ಆಯ್ಕೆ ಮಾಡಿಕೊಳ್ಳಬೇಕು. ನೋಂದಣಿ ಆಗಿರದೇ ಇದ್ದಲ್ಲಿ ಇಲಾಖೆಗಳೇ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿ ಬಳಿಕ ಆಯ್ಕೆ ಮಾಡಿಕೊಳ್ಳಬೇಕು. ಕೌಶಲ್ಯಾಭಿವೃದ್ಧಿ ಇಲಾಖೆಯ ಮೂಲಕವೇ ಎಲ್ಲ ತರಬೇತಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು. ವಿವಿಧ ಇಲಾಖೆಗಳ ತರಬೇತಿ ಕಾರ್ಯಕ್ರಮಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆಯೊಂದಿಗೆ ವಿಲೀನ ಮಾಡಬೇಕು ಎಂದು ತಿಳಿಸಿದರು.

ವಿವಿಧ ವೃತ್ತಿ ಕೌಶಲ್ಯಗಳ ತರಬೇತಿ ಜೊತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿರುವ ಬಗ್ಗೆ ಹಾಗೂ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ನೀಡಬೇಕು. ಈ ತರಬೇತಿ ಅಭ್ಯರ್ಥಿಯ ಆಧಾರ್‌ ಸಂಖ್ಯೆ ಆಧಾರಿತವಾಗಿದ್ದು ಒಂದೇ ತರಬೇತಿ ಅಥವಾ ಸೌಲಭ್ಯವನ್ನು ಬೇರೆ ಬೇರೆ ಇಲಾಖೆಗಳಡಿ ಎರಡೆರಡು ಬಾರಿ ಪಡೆಯಲು ಅವಕಾಶ ದೊರಕುವುದಿಲ್ಲ ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್‌ ಮಾತನಾಡಿ, ಕೌಶಲ್ಯಾಭಿವೃದ್ಧಿ ಯೋಜನೆಯಡಿ ಈಗಾಗಲೇ ಜಾರಿಯಲ್ಲಿರುವ ಹಲವು ಯೋಜನೆಗಳನ್ನು ವಿಲೀನಗೊಳಿಸಲಾಗಿದೆ. ಉದ್ಯಮಶೀಲತೆಯಡಿ ವಿವಿಧ ಇಲಾಖೆಗಳಲ್ಲಿ ಬರುವ ಸ್ವಯಂ ಉದ್ಯೋಗ, ಗುಂಪು ಉದ್ಯೋಗ, ಬ್ಯಾಂಕ್‌ ಸಾಲ, ಸಹಾಯಧನ, ಸಾಮಥ್ರ್ಯಾಭಿವೃದ್ಧಿ ತರಬೇತಿ, ಸ್ವಸಹಾಯ ಸಂಘಗಳ ಬಲವರ್ಧನೆ, ಮಾರುಕಟ್ಟೆ ಸಂಪರ್ಕ, ಸ್ವಯಂ ಉದ್ಯೋಗಕ್ಕೆ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನೀಡುವುದು, ಜೀವನೋಪಾಯದಡಿ ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ, ಮಾರುಕಟ್ಟೆ ವಲಯ ಸೃಜನೆ, ಆರೋಗ್ಯ, ಸ್ವಚ್ಛತೆ, ವ್ಯಾಪಾರ, ಸಾಮಾಜಿಕ ಭದ್ರತೆ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

Advertisement

ಕೌಶಲ್ಯಾಭಿವೃದ್ಧಿ ತರಬೇತಿಗೆ ಜಿಲ್ಲೆಗೆ ಈ ವರ್ಷ 13,100 ಗುರಿ ನೀಡಲಾಗಿತ್ತು. ಆದರೆ 25 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಯೋಜನೆಯ ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕೌಶಲ್ಯ ಮಿಷನ್‌ ರಚಿಸಲಾಗಿದೆ. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಗೆ ಈ ವರ್ಷ 720 ಗುರಿ ನಿಗದಿಪಡಿಸಿದ್ದು, 480 ಜನರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ನೆಗಳೂರ್‌ ಮಾತನಾಡಿ, ಇಲಾಖೆಯಿಂದ ನೀಡಲಾಗುತ್ತಿರುವ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಈ ವರ್ಷ 1375 ಜನರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಾಜಶೇಖರ್‌, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಭಾಗವಹಿಸಿದ್ದರು.

ಅಧಿಕಾರಿಗಳ ಗೈರುಹಾಜರಿ ಸಹಿಸಲಾಗದು:

ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಯುವ ಜನತೆಗೆ ಕೌಶಲ್ಯ ತರಬೇತಿ ನೀಡಿ, ಅವರಿಗೆ ಉದ್ಯೋಗ ಅವಕಾಶ ಕಲ್ಪಿಸುವಂತಹ ಕೌಶಲ್ಯ ಮಿಷನ್‌ ಯೋಜನೆ ಮಹತ್ವದ್ದಾಗಿದೆ. ಇಂತಹ ಮಹತ್ವದ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದು ಹಾಜರಾಗದೆ, ತಮ್ಮ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿದ್ದಕ್ಕೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಮಹತ್ವದ ಸಭೆಗಳಿಗೆ ಅಧಿಕಾರಿಗಳು ಪೂರ್ವಾನುಮತಿ ಪಡೆಯದೆ ಗೈರುಹಾಜರಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇಂದಿನ ಸಭೆಗೆ ಗೈರುಹಾಜರಾದ ಸುಮಾರು 10ಕ್ಕೂ ಹೆಚ್ಚು ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಈ ಕುರಿತು ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ ಸಭೆಗೆ ಆಗಮಿಸಿದ್ದ ಅಧಿಕಾರಿಗಳ ಪ್ರತಿನಿಧಿಗಳನ್ನು ಸಭೆಯಿಂದ ಹೊರಗೆ ಕಳುಹಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next