ದೇವದುರ್ಗ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಸಿಡಿಪಿಒ ಎಂ.ಎಸ್. ಹೊಸಮನಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ 475 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು ಸೋಮವಾರ ಕೃಷಿ ಮಾರುಕಟ್ಟೆ ಆವರಣದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು. ಮಧ್ಯಾಹ್ನ 12ಗಂಟೆಯಾದರೂ ಸಿಡಿಪಿಒ ಪ್ರತಿಭಟನೆ ಸ್ಥಳಕ್ಕೆ ಬಾರದ್ದರಿಂದ ಕಾರ್ಯಕರ್ತೆಯರು ಶಾಸಕರ ಕಾರ್ಯಾಲಯ, ಸಿಡಿಪಿಒ ಕಚೇರಿ, ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಶಿವನಗೌಡ ನಾಯಕ ಪ್ರವಾಸಿ ಮಂದಿರದಲ್ಲಿ ಇದ್ದರೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಆಲಿಸಲು ಬಾರದಿರುವುದು ಆಕ್ರೋಶಕ್ಕೆ ಕಾರಣವಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಾಲಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಇನ್ನು ಸಿಡಿಪಿಒ ನ್ಯಾಯಾಲಯ ಪ್ರಕರಣ ಹಿನ್ನೆಲೆಯಲ್ಲಿ ಕಲಬುರಗಿಗೆ ಹೋಗಿದ್ದರು. ಹೀಗಾಗಿ ಮೇಲ್ವಿಚಾರಕಿ ಲತಾ ಗಂಗಾವತಿ ಮನವಿ ಸ್ವೀಕರಿಸಲು ತಾಲೂಕು ಪಂಚಾಯಿತಿಗೆ ಆಗಮಿಸಿದ್ದರು. ಆದರೆ ಕಾರ್ಯಕರ್ತೆಯರು ಅಧಿಕಾರಿಯೇ ಬರಬೇಕು ಎಂದು ಪಟ್ಟು ಹಿಡಿದರು. ಬಳಿಕ ದೂರವಾಣಿ ಮೂಲಕ ಸಿಡಿಪಿಒ ಅವರ ಜತೆ ಮಾತನಾಡಿದಾಗ ಸಂಜೆ 5 ಗಂಟೆ ವೇಳೆಗೆ ಬಂದು ಮನವಿ ಸ್ವೀಕರಿಸುವುದಾಗಿ ಹೇಳಿದ್ದರು. ಆ ಪ್ರಕಾರ ಸಂಜೆ ಸಿಡಿಪಿಒ ಎಂ.ಎಸ್. ಹೊಸಮನಿ ಅವರಿಗೆ ಮನವಿ ಸಲ್ಲಿಸಿದರು.
ನಿಂತಿರುವ 4 ತಿಂಗಳ ಗೌರವಧನ ಮತ್ತು 4 ತಿಂಗಳ ಮೊಟ್ಟೆ, ತರಕಾರಿ ಬಿಲ್ ಪಾವತಿಸಬೇಕು. ನಿವೃತ್ತಿ ಹೊಂದಿದ ಕಾರ್ಯಕರ್ತೆಯರು, ಸಹಾಯಕರಿಗೆ ಇಡಗಂಟು, ಮರಣ ಹೊಂದಿದ ಕಾರ್ಯಕರ್ತೆ, ಸಹಾಯಕಿಯರ ಕುಟುಂಬಕ್ಕೆ ಪರಿಹಾರ ನೀಡಬೇಕು. ತಾಲೂಕಿನ ಜೆ.ಕರಡಿಗುಡ್ಡ ಮತ್ತು ಜಾಲಹಳ್ಳಿ ಸೇರಿ ಇತರೆ ಗ್ರಾಮಗಳಲ್ಲಿ ಖಾಲಿ ಇರುವ ಸಹಾಯಕಿಯರ ಹುದ್ದೆ ಭರ್ತಿ ಮಾಡಬೇಕು. ಮಾತೃಪೂರ್ಣ ಯೋಜನೆಯ ಅನುದಾನ ಜಾರಿ ಮಾಡಲು ಮುಂಗಡವಾಗಿ ಗ್ಯಾಸ್ ಮೊಟ್ಟೆ, ತರಕಾರಿ ಬಿಲ್ ಪಾವತಿಸಬೇಕು. ಜಕ್ಲೇರದೊಡ್ಡಿ ಗ್ರಾಮದಲ್ಲಿ ನನೆಗುದಿಗೆ ಬಿದ್ದ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ತಾಲೂಕಿನ 475 ಅಂಗನವಾಡಿ ಕೇಂದ್ರಗಳಿಗೆ ಎಂಎಸ್‌ಪಿಟಿಸಿ ಘಟಕದಿಂದ ನೇರವಾಗಿ ಆಹಾರ ಸರಬರಾಜು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಮನವಿಯಲ್ಲಿ ಆಗ್ರಹಿಸಿದ್ದಾರೆ.
ರಂಗಮ್ಮ ಅನ್ವರ, ಗಿರಿಯಪ್ಪ ಪೂಜಾರಿ, ಶಕುಂತಲಾ ದೇಸಾಯಿ, ರಮಾದೇವಿ, ಶಬ್ಬೀರ ಜಾಲಹಳ್ಳಿ, ನರಸಣ್ಣ ನಾಯಕ ಸೇರಿ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.