ಒಂದು ಕುಟುಂಬದಿಂದ ಚಿತ್ರರಂಗಕ್ಕೆ ಅತಿ ಹೆಚ್ಚು ಮಂದಿ ಬಂದಿರುವ ಕೆಲವೇ ಕೆಲವು ಕುಟುಂಬಗಳಲ್ಲಿ ಸರ್ಜಾ ಕುಟುಂಬ ಕೂಡಾ ಒಂದು. ಈಗಾಗಲೇ ಸರ್ಜಾ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಅನೇಕ ಮಂದಿ ಬಂದಿದ್ದಾರೆ. ಈಗ ಅದಕ್ಕೆ ಮತ್ತೂಂದು ಪ್ರತಿಭೆ ಸೇರ್ಪಡೆಯಾಗುತ್ತಿದೆ. ಅದು ಪವನ್ ತೇಜ. ಪವನ್ ತೇಜ ಕೂಡಾ ಅರ್ಜುನ್ ಸರ್ಜಾ ಅವರ ಸಂಬಂಧಿ. ಈಗ “ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. “ಅಥರ್ವ’ ಚಿತ್ರ ಜುಲೈ 13 ರಂದು ತೆರೆಕಾಣುತ್ತಿದ್ದು, ಪವನ್ ತೇಜಾ ಖುಷಿ ಹಾಗೂ ಕುತೂಹಲದೊಂದಿಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಅರ್ಜುನ್ ಸರ್ಜಾ ಅವರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಪವನ್ ತಟ್ಟಿರುವುದು ಅವರ ವಿಶ್ವಾಸವನ್ನು ಹೆಚ್ಚಿಸಿದೆ.
ಮೈಸೂರು ಮೂಲದ ಪವನ್ ಅವರಿಗೆ ಮೊದಲಿನಿಂದಲೂ ಸಿನಿಮಾಸಕ್ತಿ ಇತ್ತಂತೆ. ಆದರೆ, ಸಿನಿಮಾಕ್ಕೆ ಬರುವ ಮುನ್ನ ನಟನೆಯನ್ನು ಪಕ್ಕಾ ಮಾಡಿಕೊಂಡು ಬರಬೇಕೆಂಬುದನ್ನು ಪವನ್‌ಗೆ ಅರ್ಜುನ್ ಸರ್ಜಾ ಹೇಳಿದರಂತೆ. “ಸಿನಿಮಾಕ್ಕೆ ಬರೋದು ಮುಖ್ಯವಲ್ಲ. ಅದಕ್ಕಿಂತ ಮುನ್ನ ಪೂರ್ವತಯಾರಿ ಮಾಡಿಕೊಳ್ಳುವುದು ಮುಖ್ಯ’ ಎಂದರಂತೆ. ಅದನ್ನು ಗಂಭೀರವಾಗಿ ಪರಿಗಣಿಸಿದ ಪವನ್, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್, ಕುದುರೆ ಸವಾರಿ, ಫೈಟ್ … ಹೀಗೆ ಅನೇಕ ಅಂಶಗಳನ್ನು ಕಲಿತರಂತೆ. ಜೊತೆಗೆ ರಂಗಭೂಮಿಯಲ್ಲಿ ತೊಡಗಿ ನಟನೆ, ಪಾತ್ರ ಪೋಷಣೆಯ ವಿಧದ ಬಗ್ಗೆಯೂ ಗಮನಹರಿಸಿದ್ದಾಗಿ ಹೇಳುತ್ತಾರೆ ಪವನ್.
“ಸಿನಿಮಾಕ್ಕೆ ಬರುವ ಮುನ್ನ ಎಲ್ಲವನ್ನು ಕಲಿತುಕೊಳ್ಳಬೇಕು, ಆಗ ನಮ್ಮ ವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದ್ದು ಅರ್ಜುನ್ ಅಂಕಲ್. ಅದರಂತೆ ತಯಾರಿ ಮಾಡಿಕೊಂಡೆ. ಅದು ಚಿತ್ರೀಕರಣ ಸಮಯದಲ್ಲಿ ಸಹಾಯವಾಯಿತು. ಇನ್ನು ನಾವು ಹೊಸಬರು. ಅತಿಯಾದ ವಿಶ್ವಾಸದಿಂದ ಹೋದರೆ ಕಷ್ಟವಾಗುತ್ತದೆ ಎಂದು ಗೊತ್ತಿತ್ತು. ಅದೇ ಕಾರಣದಿಂದ ಒಂದು ಸೀನ್, ಡೈಲಾಗ್ ವಿಚಾರದಲ್ಲೂ ನಾವು ತುಂಬಾ ರಿಹರ್ಸಲ್ ಮಾಡಿಕೊಂಡು ಮಾಡಿದ್ದೇನೆ. ಸಿದ್ಧತೆ ಇಲ್ಲದೇ ಯಾವುದನ್ನೂ ಮಾಡಿಲ್ಲ. ಹಾಗಾಗಿ, ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ಪವನ್ ಮಾತು. ಇನ್ನು, ಈ ಚಿತ್ರದ ಮೂಲಕ ಪವನ್ ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಸದ್ಯ ಪವನ್
ತೇಜಾ ತಮ್ಮ ಸಿನಿಮಾದ ಪ್ರಮೋಶನ್‌ನಲ್ಲಿ ಬಿಝಿ.
ಹಳ್ಳಿ ಹಳ್ಳಿಗೂ ಹೋಗಿ ಸಿನಿಮಾ ಬಗ್ಗೆ ಹೇಳಿ ಸಿಡಿ ಕೊಟ್ಟು ಬರುತ್ತಾರಂತೆ. “ನಾವು ಹೊಸಬರು. ನಮ್ಮ ಸಿನಿಮಾ ಬಗ್ಗೆ ಜನರಿಗೆ ಹೇಳದೇ ಇದ್ದರೆ ಗೊತ್ತಾಗಲ್ಲ. ಹಾಗಾಗಿ ನನ್ನ ಕಡೆಯಿಂದ ಏನೆಲ್ಲಾ ಪ್ರಮೋಶನ್ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡುತ್ತೇವೆ. ನಾಯಕ ನಟನಾಗಿ ನನ್ನ ಸಿನಿಮಾವನ್ನು ಜನರಿಗೆ ತಲುಪಿಸೋದು ನನ್ನ ಕರ್ತವ್ಯ. ಅದನ್ನು ಮಾಡುತ್ತಿದ್ದೇನೆ’ ಎನ್ನುತ್ತಾರೆ ಪವನ್. ಈ ಚಿತ್ರ ಹುಟ್ಟು-ಸಾವಿನ ನಡುವೆ ನಡೆಯುವ ಘಟನೆಗಳ ಸುತ್ತ ಸಾಗುತ್ತದೆಯಂತೆ. ಈ ಚಿತ್ರವನ್ನು ಅರುಣ್ ನಿರ್ದೇಶಿಸಿದ್ದು, ರಕ್ಷಯ್ ಹಾಗೂ ವಿನಯ್‌ಕುಮಾರ್ ನಿರ್ಮಾಪಕರು.