ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದ್ದು, ಕಳೆದ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆಯೆಳೆದಿದೆ.
ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಎಸ್.ಎಸ್.ನಕುಲ್ ಅವರು, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಕಾರ್ಯದರ್ಶಿಯಾಗಿ ಬಡ್ತಿಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಪವನ್ ಕುಮಾರ್ ಮಾಲಪಾಟಿ ಅವರನ್ನು ನಿಯೋಜಿಸಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಸ್ಥಾನಕ್ಕೆ ಕಳೆದ ಹಲವು ದಿನಗಳಿಂದ ಹಲವಾರು ಹೆಸರುಗಳು ಕೇಳಿಬಂದಿದ್ದವು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಬಳ್ಳಾರಿ ಹಿಂದಿನ ಡಿಸಿ ರಾಮ್ ಪ್ರಸಾತ್ ಮನೋಹ್ ಅವರ ಪತ್ನಿ, ಬಳ್ಳಾರಿ ಪಾಲಿಕೆ ಆಯುಕ್ತರಾಗಿದ್ದ ದಿವ್ಯಪ್ರಭು ಅವರ ಹೆಸರುಗಳು ಕೇಳಿ ಬಂದಿದ್ದವು. ರೋಹಿಣಿ ಸಿಂಧೂರಿಯವರು ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ, ಸ್ವೀಕರಿಸಿದ್ದಕ್ಕೆ ಧನ್ಯವಾದಗಳು ಎಂಬೆಲ್ಲ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ನಾಥೂರಾಮ್ ಗೋಡ್ಸೆ ಅಧ್ಯಯನ ಕೇಂದ್ರ ಆರಂಭ: ಹಿಂದೂ ಮಹಾಸಭಾ
ಆಂತಿಮವಾಗಿ ರಾಜ್ಯ ಸರ್ಕಾರ ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಅವರನ್ನು ನಿಯೋಜಿಸುವ ಈ ಎಲ್ಲ ಗೊಂದಲ, ಊಹಾಪೋಹಗಳಿಗೆ ತೆರೆಎಳೆದಿದೆ.