Advertisement

ಬ್ಯಾಂಕ್‌ ಕೆಲಸ ಬಿಟ್ಟು ಪಿಎಚ್‌ಡಿಯಲ್ಲಿ ಚಿನ್ನ ಗೆದ್ದ ಪವಿತ್ರಾ

07:21 AM Jun 18, 2019 | Team Udayavani |

ಧಾರವಾಡ: ಕಲಿತ ಬಳಿಕ ಕೆಲಸ ಸಿಕ್ಕರೆ ಸಾಕು ಅನ್ನುವ ಜನರೇ ಜಾಸ್ತಿ. ಅದರಲ್ಲೂ ಬ್ಯಾಂಕ್‌ ಕೆಲಸವೆಂದರೆ ಯಾರಾದರೂ ಬಿಡುತ್ತಾರಾ? ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬರು ಕಲಿಯುವ ಸಲುವಾಗಿ ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಚಿನ್ನದ ಪದಕದೊಂದಿಗೆ ಪಿಎಚ್‌ಡಿ ಮಾಡಿ ತಾವಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ.

Advertisement

ಹೊನ್ನಾವರದ ಕರ್ಜಿದ ಮೂಲದ, ಈಗ ಪತಿಯೊಂದಿಗೆ ಧಾರವಾಡದಲ್ಲಿ ನೆಲೆಸಿರುವ ಪವಿತ್ರಾ ಭಟ್ ಅವರೇ ಈ ಸಾಧಕರು. ಕೃಷಿ ವಿವಿಯ 32ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ವಿಭಾಗದ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ಸೈ ಅನ್ನಿಕೊಂಡಿದ್ದಾರೆ.

ಕೃಷಿ ವಿವಿಯಲ್ಲಿ ಬಿಎಸ್ಸಿ ಮಾಡಿ 7 ಚಿನ್ನದ ಪದಕ ಪಡೆದಿದ್ದ ಪವಿತ್ರಾ ಅವರು, ಬ್ಯಾಂಕ್‌ ಪರೀಕ್ಷೆ ಬರೆದು ಅದರಲ್ಲೂ ಸಫಲರಾಗಿ ಕೆಲಸವೂ ಸಿಕ್ಕಿತು. ಧಾರವಾಡದ ಲೈನ್‌ಬಜಾರ್‌ನಲ್ಲಿ ಇರುವ ಕೆವಿಜಿ ಬ್ಯಾಂಕ್‌ ಶಾಖೆಯ ಸಹಾಯಕ ವ್ಯವಸ್ಥಾಪಕಿ ಆಗಿ ಮೂರೂವರೆ ವರ್ಷ ಕಾಲ ಕೆಲಸ ಮಾಡಿದ ಬಳಿಕ ಸಂತೃಪ್ತಿಯ ಕೊರತೆ ಮನಸ್ಸಲ್ಲಿತ್ತು. ಹೀಗಾಗಿ ಪಿಎಚ್‌ಡಿ ಕೈಗೊಂಡು ಮುಂದೆ ಪ್ರೊಫೆಸರ್‌ ಆಗುವ ಕನಸು ಹೊತ್ತು ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿ ವಿವಿಯಲ್ಲಿ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರ ಕೈಗೊಂಡಿದ್ದರು.

ಕುಟುಂಬ ನಿರ್ವಹಣೆಗೂ ಸೈ: ಪವಿತ್ರಾ ಅವರು ಪಿಎಚ್‌ಡಿ ಕೈಗೊಂಡಾಗ ಅವರ ಮಗಳು ಶ್ರೀರಕ್ಷಾಗೆ ಬರೀ ಮೂರು ವರ್ಷ. ಇಂತಹ ಸಮಯದಲ್ಲಿ ಕುಟುಂಬ ನಿರ್ವಹಣೆ ಜೊತೆಗೆ ಅಧ್ಯಯನದಲ್ಲೂ ತೊಡಗಿಸಿಕೊಂಡು ಸೈ ಅನ್ನಿಸಿಕೊಂಡರು. ಅವರ ಶ್ರಮದ ಹಿಂದೆ ಪತಿ ಶಶಿಧರ ದೀಕ್ಷಿತ ಅವರ ಸಹಕಾರವೂ ಇದೆ. ಪತ್ನಿಯ ಇಷ್ಟದಂತೆ ಕಲಿಯಲು ಸಹಕಾರ ನೀಡಿದ ಅವರು, ಪಿಎಚ್‌ಡಿ ಕೆಲಸದಲ್ಲೂ ಸಹಕಾರ ನೀಡಿದ್ದಾರೆ. ಸದ್ಯ ಮಗಳು ಶ್ರೀರಕ್ಷಾ 2ನೇ ವರ್ಗದಲ್ಲಿ ಕಲಿಯುತ್ತಿದ್ದು, ಮಗಳ ಪಾಲನೆ ಜೊತೆಗೆ ಮುಂದೆ ಪ್ರೊಫೆಸರ್‌ ಆಗಲು ಕನಸು ಹೊಂದಿದ್ದಾರೆ.

ವಯೋಮಿತಿ ನಿಗದಿ ಆತಂಕ: ಪ್ರೊಫೆಸರ್‌ ಆಗಲೇಬೇಕೆಂಬ ಕನಸು ಹೊತ್ತು ಪಿಎಚ್‌ಡಿ ಮುಗಿಸಿರುವ ಪವಿತ್ರಾ ಅವರಿಗೆ ಕರ್ನಾಟಕದಲ್ಲಿ ನಿಗದಿ ಮಾಡಿರುವ ವಯೋಮಿತಿ ಆತಂಕಕ್ಕೆ ದೂಡುವಂತೆ ಮಾಡಿದೆ. ಪಿಎಚ್‌ಡಿ ಮಾಡುವಾಗ 40ಕ್ಕೆ ಇದ್ದ ವಯೋಮಿತಿ ಈಗ 35ಕ್ಕೆ ರಾಜ್ಯ ಸರ್ಕಾರ ಇಳಿಸಿದೆ. ಸದ್ಯ 34 ವಯಸ್ಸಿನ ಪವಿತ್ರಾ ಅವರಿಗೆ ಇನ್ನೊಂದೇ ವರ್ಷದಲ್ಲಿ ತಮ್ಮ ಕನಸು ನನಸು ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಪ್ರೊಫೆಸರ್‌ ಆಗುವ ಕನಸು ನನಸಾಗಿ ಉಳಿಯಲಿದೆ.

Advertisement

ಬೇರೆ ರಾಜ್ಯದಲ್ಲಿ 40ಕ್ಕೆ ಇರುವ ವಯೋಮಿತಿ ಕರ್ನಾಟಕದಲ್ಲಿ ಮಾತ್ರ 35ಕ್ಕೆ ಇಳಿಸಿದ್ದು, ನಮ್ಮಂತವರಿಗೆ ಹಿನ್ನಡೆ ಆಗಲಿದೆ. ಇನ್ನೂ ಒಂದು ವರ್ಷ ಅವಕಾಶ ಇದ್ದು, ಅಷ್ಟರೊಳಗೆ ಕೆಲಸ ಸಿಕ್ಕರೆ ಮಾಡುವೆ. ಇಲ್ಲವಾದರೆ ನಾನು ಪಿಎಚ್‌ಡಿ ಕೈಗೊಂಡಿರುವ ವಿಷಯ ಮುಂದಿಟ್ಟುಕೊಂಡು ಧಾರವಾಡದಲ್ಲಿಯೇ ಮಕ್ಕಳು ಮತ್ತು ಪೋಷಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಪ್ತ ಸಮಾಲೋಚನಾ ಕೇಂದ್ರ ತೆರೆಯುವೆ ಎನ್ನುತ್ತಾರೆ ಪವಿತ್ರಾ.

Advertisement

Udayavani is now on Telegram. Click here to join our channel and stay updated with the latest news.

Next