ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಮೊದಲ ಆರೋಪಿ ಪವಿತ್ರಾಗೌಡ ಮಂಗಳವಾರ (ಡಿ.17 ರಂದು) ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಪರಪ್ಪನ ಅಗ್ರಹಾರದಿಂದ ಪವಿತ್ರಾ ಗೌಡ (Pavithra Gowda) ಬಿಡುಗಡೆ ಆಗಿದ್ದಾರೆ. ಜೂ.20 ರಂದು ಜೈಲು ಸೇರಿದ್ದ ಪವಿತ್ರಾ ಇಂದು ಬಿಡುಗಡೆ ಆಗಿದ್ದಾರೆ.
ದರ್ಶನ್ & ಗ್ಯಾಂಗ್ ನಡೆಸಿದ ಕೃತ್ಯದಲ್ಲಿ ಎ1 ಆಗಿ ಜೈಲು ಸೇರಿದ್ದ ಪವಿತ್ರಾ ಗೌಡ ಅವರಿಗೆ ಹೈಕೋರ್ಟ್ ಇತ್ತೀಚೆಗೆ ಪೂರ್ಣ ಪ್ರಮಾಣದ ಜಾಮೀನು ಮಂಜೂರು ಮಾಡಿತ್ತು. ಆದರೆ ಜೈಲಿನ ಪ್ರಕ್ರಿಯೆಗಳು ಪೂರ್ಣ ಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಬಿಡುಗಡೆಯಾಗಿರಲಿಲ್ಲ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ. ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಬೆಂಗಳೂರಿಗೆ ಕರೆತಂದಿದ್ದರು. ರೇಣುಕಾಸ್ವಾಮಿಯನ್ನು ಶೆಡ್ವೊಂದರಲ್ಲಿ ಇಟ್ಟು ಹಲ್ಲೆ ನಡೆಸಿ 2024ರ ಜೂನ್ 7ರಂದು ಕೊಲೆ ಮಾಡಿ ಮೃತದೇಹವನ್ನು ಚರಂಡಿಯೊಂದರಲ್ಲಿ ಎಸೆಯಲಾಗಿತ್ತು.
ಈ ಪ್ರಕರಣ ಸಂಬಂಧ ಜೂ. 11 ರಂದು ಪವಿತ್ರಾ ಗೌಡ ಅವರನ್ನು ಮೊದಲ ಆರೋಪಿಯನ್ನಾಗಿ ಬಂಧಿಸಲಾಗಿತ್ತು. ಇದಾದ ಬಳಿಕ ಜೂನ್ 20 ರಂದು ಜೈಲು ಸೇರಿದ್ದ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆಕೆಯ ಪರ ವಕೀಲ ಟಾಮಿ ಸೆಬಾಸ್ಟಿಯನ್ ಹೈಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸಿದ್ದರು.
ಹೆಣ್ಣು ಎಂಬ ಕಾರಣಕ್ಕೆ ಇಂತಹ ಪ್ರಕರಣದಲ್ಲಿ ಮಹಿಳೆಗೆ ಜಾಮೀನು ಸಿಕ್ಕ ಉದಾಹರಣೆಗಳಿವೆ. ಆಕೆ ಸಿಂಗಲ್ ಪೇರೆಂಟ್, ಆಕೆಗೆ ಅಪ್ರಾಪ್ತ ವಯಸ್ಸಿನ ಮಗಳಿದ್ದಾರೆ ಎನ್ನುವ ಕೆಲ ಅಂಶಗಳನ್ನು ಮುಂದಿಟ್ಟುಕೊಂಡು ಕೋರ್ಟ್ನಲ್ಲಿ ವಕೀಲರು ವಾದ ಮಂಡಿಸಿದ್ದರು.
6 ತಿಂಗಳ ಬಳಿಕ ಜೈಲಿನಿಂದ ಪವಿತ್ರಾ ಗೌಡ ಬಿಡುಗಡೆ ಆಗಿದ್ದಾರೆ. ಈ ಪ್ರಕರಣದಲ್ಲಿ ಡಿ.13 ರಂದು ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಜಾಮೀನು ನೀಡಿ ಹೈಕೋರ್ಟ್ ಪೀಠ ಆದೇಶಿಸಿತು.