ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾವಂಜೆಯಿಂದ ಉಡುಪಿ ಜಿಲ್ಲೆಯ ಎರ್ಮಾಳ್‌ವರೆಗೆ ಹೆದ್ದಾರಿಯ ಒಂದು ಭಾಗದಲ್ಲಿ ಸಂಪೂರ್ಣವಾಗಿ ಮೂರು ಇಂಚು ಡಾಮರನ್ನು ಕಟ್ಟಿಂಗ್ ಯಂತ್ರದ ಮೂಲಕ ರಸ್ತೆ ಅಗೆಯಲಾಗಿತ್ತು. ಇದ್ದರಿಂದ ಅನೇಕ ದ್ವಿಚಕ್ರ ವಾಹನ ಸವಾರರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆಗಳುನಡೆದಿದ್ದು, ಈ ಬಗ್ಗೆ ಉದಯವಾಣಿ ಸುದಿನ ಡಿ.2 ರಂದು ಸಚಿತ್ರ ವರದಿ ಮಾಡಿತ್ತು.
ಈಗ ಹೆದ್ದಾರಿ ಇಲಾಖೆ ಎಚ್ಚೆತ್ತುಕೊಂಡು ಕಳೆದ ಹಲವು ದಿನಗಳಿಂದ ಹಂತ ಹಂತವಾಗಿ ಡಾಮರು ನಡೆಸುವ ಕಾರ್ಯವನ್ನು ಮುಂದುವರಿಸಿದೆ. ಪಾವಂಜೆ ಸೇತುವೆಯಿಂದ ಹಳೆಯಂಗಡಿ ಮುಖ್ಯ ಜಂಕ್ಷನ್‌ವರೆಗೆ ಹಾಗೂ ಪಡುಪಣಂಬೂರು ಪೆಟ್ರೋಲ್ ಪಂಪ್‌ನಿಂದ ಕೊಲ್ನಾಡು ಕೈಗಾರಿಕ ಪ್ರಾಂಗಣದ ಜಂಕ್ಷನ್‌ನವರೆಗೆ ಈ ಭಾಗದಲ್ಲಿ ಈ ರೀತಿಯ ಸ್ಥಿತಿ ನಿರ್ಮಾಣವಾಗಿತ್ತು. ಅದು ಮುಂದುವರಿದಂತೆ ಮೂಲ್ಕಿ, ಪಡುಬಿದ್ರಿ, ಎರ್ಮಾಳ್‌ವರೆಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಡಾಮರು ತೆಗೆದು ಎರಡು ವಾರ ಕಳೆದರೂ ಕಾಮಗಾರಿ ನಡೆಸದೇ ಇದ್ದುದರಿಂದ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಪೂರ್ಣಿಮಾ ಅವರು ರಸ್ತೆ ನಿರ್ವಹಣೆ ನಡೆಸುತ್ತಿರುವ ನವಯುಗ್ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದರು. ವಾರ ಕಳೆದರೂ ದುರಸ್ತಿ ಕಾರ್ಯ ನಡೆಸದೇ ಇದ್ದುದರಿಂದ ನೇರವಾಗಿ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ದೂರನ್ನು ನೀಡಿದ್ದರು. ಸಂಸ್ಥೆಯು ದುರಸ್ತಿಗೆ ಕಚ್ಚ ಸಾಮಗ್ರಿಗಳ ಕೊರತೆ ಎಂದು ಹೇಳಿಕೊಂಡಿತ್ತು.
ಮತ್ತೊಂದು ಭಾಗದಲ್ಲಿಯೂ ದುರಸ್ತಿ?
ಈಗ ಒಂದು ಭಾಗದಲ್ಲಿನ ರಸ್ತೆಯನ್ನು ಅಗೆದು ಫೇವರ್ ಫಿನಿಶ್ ಡಾಮರು ನಡೆಸುತ್ತಿದ್ದು ಮತ್ತೂಂದು ಭಾಗದಲ್ಲಿ ದುರಸ್ತಿ ಕಾರ್ಯ ನಡೆಸುವಾಗ ವಿಳಂಬಿಸದೇ ಕೂಡಲೆ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಸಂಚಾರದ ಒತ್ತಡಕ್ಕೂ ಪರ್ಯಾಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.