Advertisement

ಅಪಘಾತ ವಲಯವಾಗಿರುವ ಪಾವಂಜೆ ಜಂಕ್ಷನ್‌

11:08 AM Apr 24, 2022 | Team Udayavani |

ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಮುಖ್ಯ ಜಂಕ್ಷನ್‌ ಇತ್ತೀಚಿನ ದಿನಗಳಲ್ಲಿ ಅಪಘಾತವಲಯ ಆಗಿ ಪರಿವರ್ತನೆಯಾಗಿದೆ. ಇಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ರಸ್ತೆ ದಾಟಲು, ಸಂಚರಿಸಲು ಜೀವ ಭಯದಿಂದಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಗುರುವಾರ ರಾತ್ರಿ ನಡೆದ ಅಪಘಾತದಿಂದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘ‌ಟನೆಯಿಂದ ಸ್ಥಳೀ ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯವೇ ಪರೋಕ್ಷ ಕಾರಣ ಎಂದು ದೂರುತ್ತಿದ್ದಾರೆ. ಇಲ್ಲಿ ಅಗತ್ಯವಾಗಿರುವ ಸರ್ವಿಸ್‌ ರಸ್ತೆಯನ್ನು ನಿರ್ಮಿಸದೇ ಇರುವುದು ಪಾವಂಜೆ ಜಂಕ್ಷನ್‌ ಅಪಾಯಕಾರಿಯಾಗಲು ಪರೋಕ್ಷ ಕಾರಣ ಎಂಬುದು ಸ್ಥಳೀಯರ ಆಕ್ರೋಶ.

ಬ್ಯಾರಿಕೇಡ್‌ ಅಳವಡಿಕೆ

ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಅದರ ವೇಗ ನಿಯಂತ್ರಣಕ್ಕಾಗಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದವರು ನೀಡಿದ ಬ್ಯಾರಿಕೇಡ್‌ ಗಳನ್ನು ಉಚಿತವಾಗಿ ನೀಡಿದ್ದು ಅದನ್ನು ಅಳವಡಿಸಿದ್ದಾರೆ.

ಇದರೊಂದಿಗೆ ದೇಗುಲದಿಂದಲೇ ಹೆದ್ದಾರಿಯ ಡಿವೈಡರ್‌ನಲ್ಲಿ ಬೃಹತ್‌ ಕಬ್ಬಿಣದ ಬೇಲಿಯನ್ನು ಶಾಶ್ವತವಾಗಿ ಅಳವಡಿಸಿದ್ದರಿಂದ ಪಾದಚಾರಿಗಳು ಅಪಘಾತಕ್ಕೊಳಗಾಗವುದು ಕಡಿಮೆಯಾಗಿದೆ.

Advertisement

ಒಳರಸ್ತೆಯಿಂದ ಹೆದ್ದಾರಿಗೆ ಸಂಪರ್ಕ ಸಮಸ್ಯೆ

ಹಳೆಯಂಗಡಿ ಒಳರಸ್ತೆಯಿಂದ ನೇರವಾಗಿ ಪಾವಂಜೆ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಿರುವುದರಿಂದ ಇಲ್ಲಿಂದ ಬರುವ ವಾಹನಗಳು ಮಂಗಳೂರಿನತ್ತ ಸಂಚರಿಸಲು ಸುಮಾರು ಇನ್ನೂರು ಮೀಟರ್‌ಗಳಷ್ಟು ದೂರ ಒಂದು ಬದಿಯಲ್ಲಿ (ರಸ್ತೆಯ ವಿರುದ್ಧ ದಿಕ್ಕಿನಲ್ಲಿಯೇ) ಸಂಚರಿಸಿ ಹೆದ್ದಾರಿಯನ್ನು ಸೇರಿಕೊಳ್ಳಲು ಮುಂದಾಗುವುದರಿಂದ ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಘಾತ ಸಂಭವಿಸುತ್ತದೆ.

ಸರ್ವಿಸ್‌ ರಸ್ತೆ ಪರಿಹಾರ?

ಹಳೆಯಂಗಡಿ ಜಂಕ್ಷನ್‌ನಂತೆ ಪಾವಂಜೆಯೂ ಬೆಳೆಯುತ್ತಿದೆ. ಹಳೆಯಂಗಡಿ ಹಾಗೂ ಪಾವಂಜೆ ದೇವಸ್ಥಾನದ ಪಕ್ಕದಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾದಲ್ಲಿ ಜಂಕ್ಷನ್‌ನ ಒತ್ತಡದ ಸಂಚಾರಕ್ಕೆ ತಕ್ಕಮಟ್ಟಿನಲ್ಲಿ ನಿಯಂತ್ರಣ ಸಾಧ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಪಾವಂಜೆ ಜಂಕ್ಷನ್‌ನ ಬಗ್ಗೆ ಅನೇಕ ಬಾರಿ ಹೆದ್ದಾರಿ ಇಲಾಖೆಯ ಗಮನ ಸೆಳೆದಿದ್ದೇವೆ, ದೇಗುಲದ ವತಿ ಯಿಂದ ಬ್ಯಾರಿಕೇಡ್‌, ಶಾಶ್ವತ ಕಬ್ಬಿಣದ ತಡೆಗೋಡೆ ನಿರ್ಮಾಣವಾಗಿದೆ. ಆ ಭಾಗದಲ್ಲಿ ಅಪಘಾತ ಕಡಿಮೆಯಾಗಿ ಇದೀಗ ಹಳೆಯಂಗಡಿ ಸೇರುವ ರಸ್ತೆ ಅಪಾಯಕಾರಿಯಾಗಿದೆ ಎಂದು ಹಳೆಯಂಗಡಿ ಗ್ರಾ.ಪಂ. ಸದಸ್ಯ ವಿನೋದ್‌ಕುಮಾರ್‌ ಕೊಳುವೈಲು ತಿಳಿಸಿದ್ದಾರೆ.

ಬ್ಲಾಕ್‌ ಸ್ಪಾಟ್‌ ಆಗಿದೆ

ಬ್ಲಾಕ್‌ ಸ್ಪಾಟ್‌ ಆಗಿರುವ ಪಾವಂಜೆ ಜಂಕ್ಷನ್‌ನಲ್ಲಿ ಸಂಚಾರ ಒತ್ತಡ ಬ್ಯಾರಿಕೇಡ್‌, ಕಬ್ಬಿಣದ ತಂತಿಗೋಡೆಯೇ ಸೂಕ್ತ ಪರಿಹಾರವಲ್ಲ. ಇಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾದಲ್ಲಿ ಮಾತ್ರ ಈ ನಿಯಂತ್ರಿಸಲು ಸಾಧ್ಯವಿದೆ. ಗುರುವಾರದ ಘಟನೆಯಲ್ಲಿ ಕಾರಿನ ಸಂಚಾರ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದರಿಂದ ಅವಘಡವಾಗಿದೆ ಅದೇ ಸರ್ವಿಸ್‌ ರಸ್ತೆ ಇದ್ದಿದ್ದಲ್ಲಿ ವಾಹನ ಆ ರೀತಿಯಾಗಿ ಸಂಚರಿಸುತ್ತಿರಲಿಲ್ಲ. ಗೋಪಾಲಕೃಷ್ಣ ಭಟ್‌, (ಪ್ರಭಾರ) ಇನ್‌ಸ್ಪೆಕ್ಟರ್‌, ಉತ್ತರ ವಲಯ ಸಂಚಾರಿ ಪೊಲೀಸ್‌ ಠಾಣೆ, ಬೈಕಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next