Advertisement

ಪಾವನಾಂಗ ಪಂಡರಿನಾಥ ವಿಟ್ಠಲನ ದಿಂಡಿಯಾತ್ರೆ

03:33 PM Jul 21, 2018 | |

ವಿಟ್ಠಲ ವಿಟ್ಠಲ ಪಾಂಡುರಂಗ… ಶ್ರೀಹರಿ ವಿಟ್ಠಲ ಪಾಂಡುರಂಗ ಎಂಬ ಪಂಡರಿನಾಥನ ನಾಮಸ್ಮರಣೆ ಮಾಡುತ್ತ ತಾಳ, ಮೃದಂಗಗಳನ್ನು ಹಿಡಿದುಕೊಂಡು ಸಂಗೀತ ನಿನಾದದೊಂದಿಗೆ ಹೆಜ್ಜೆ ಹಾಕುತ್ತ ಪಂಢರಾಪುರಕ್ಕೆ ಪಾದಯಾತ್ರೆ ಮೂಲಕ ನಡೆಯುವ ದಂಡನ್ನು ನೋಡುವುದೇ ಒಂದು ಸೊಗಸು. ವಿಠuಲನ ನಾಮಸ್ಮರಣೆ ಮೂಲಕವೇ ಸಾಗುವ ಈ ದಿಂಡಿಯಾತ್ರೆಯೇ ಹಿನ್ನೆಲೆ ಸ್ವಾರಸ್ಯಕರವಾಗಿದೆ. 

Advertisement

ಕನ್ನಡ ನೆಲದ ಶ್ರೀ ವಿಟ್ಠಲ, ಮಹಾರಾಷ್ಟ್ರದ ಆರಾಧ್ಯ ದೈವ. ವಿಠೊಬಾ, ಪಾಂಡುರಂಗ, ವಿಟ್ಠಲ ಎಂದೆಲ್ಲಾ ನಾಮಾಂಕಿತನಾಗಿ ಆತ ಅಲ್ಲಿಯೇ ನೆಲೆಸಿದ್ದಾನೆ. ವಾರಕರಿ ಸಂಪ್ರದಾಯದ ಮೂಲಕ ವಿಟ್ಠಲನನ್ನು ಆರಾಧಿಸಲಾಗುತ್ತಿದೆ. ಇದೊಂದು ನಿತ್ಯ ಜೀವನಕ್ರಮವಾಗಿ ಮಾರ್ಪಟ್ಟಿದೆ. ವಾರ ಎಂದರೆ ಪ್ರಹಾರ, ಕರಿ ಎಂದರೆ ಮಾಡುವವ ಎಂದರ್ಥ, ದುರ್ಗುಣದ ಮೇಲೆ ಪ್ರಹಾರ ಮಾಡುವವನು ಎಂಬುದು ವಾರಕರಿ ಎಂಬ ಪದಕ್ಕಿರುವ ಅರ್ಥ. ವಿಠuಲನ ಅನುಯಾಯಿಗಳು ವಾರಕರಿಗಳಾಗಿ ನಿತ್ಯವೂ ಭಗವಂತನ ಸ್ಮರಣೆ ಮಾಡುತ್ತ ಭಕ್ತಿ ಭಾವದಲ್ಲಿ ತೇಲುತ್ತಾರೆ.
ಬೆಳಗಾವಿ ಸುತ್ತಲಿನ ಪ್ರತಿಯೊಂದು ಹಳ್ಳಿಯಿಂದಲೂ ಪಾಂಡುರಂಗನ ಭಕ್ತರು ದಿಂಡಿಯಲ್ಲಿರುತ್ತಾರೆ. ದಿಂಡಿ ಮುಂದೆ ಸಾಗುತ್ತಿದ್ದರೆ. ಸಾಮಾನು, ಸರಂಜಾಮುಗಳನ್ನು ಹೊತ್ತುಕೊಂಡು ವಾಹನ ಹಿಂದಿನಿಂದ ಬರುತ್ತದೆ. ದಿಂಡಿಯಲ್ಲಿ ಯಾರಾದರೂ ಬಳಲಿದರೆ, ಅನಾರೋಗ್ಯಕ್ಕೀಡಾದರೆ ಔಷಧ, ಮಾತ್ರೆಗಳ ವ್ಯವಸ್ಥೆ ಮಾಡಲಾಗಿರುತ್ತದೆ. 
ಪಂಡರಿನಾಥ ಮಹಾರಾಷ್ಟ್ರದ ಆರಾಧ್ಯ ದೈವ. ಈತನ ಆರಾಧನೆಯೇ ವಾರಕರಿ ಸಪಂಪ್ರದಾಯ.  15 ದಿನಕ್ಕೊಮ್ಮೆ ಬರುವ ಏಕಾದಶಿಗಳನ್ನು ಪಾಲಿಸುವ ಈ ವಾರಕರಿಗಳು, ಸಂತರ ಅಭಂಗಗಳನ್ನು ಹಾಡುತ್ತ  ಪ್ರಮುಖ ನಾಲ್ಕು ಏಕಾದಶಿಗಳಿಗೆ ದಿಂಡಿಯಾತ್ರೆ ನಡೆಸುತ್ತಾರೆ. ಸುಮಾರು 200 ವರ್ಷಗಳ ಹಿಂದೆ ಗ್ವಾಲಿಯರ್‌ನ ಅಫìಳಕರ ಎಂಬುವರು “ವಾರಕರಿ’ ಸಂಪ್ರದಾಯ ಆರಂಭಿಸಿದರು. ಚೈತ್ರವಾರಿ, ಆಷಾಡವಾರಿ, ಕಾರ್ತಿಕವಾರಿ ಹಾಗೂ ಮಾರ್ಘ‌ವಾರಿ ಎಂದು ವರ್ಷದಲ್ಲಿ ನಾಲ್ಕು ಬಾರಿಯ ಏಕಾದಶಿಯಂದು ಪಂಢರಾಪುರಕ್ಕೆ ತೆರಳುತ್ತಾರೆ. ಆಷಾಡ ಏಕಾದಶಿಗೆ ಹೆಚ್ಚಿನ ಮಹತ್ವವಿದ್ದು, 10 12 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸೇರುತ್ತಾರೆ. 

ಪ್ರತಿ ವರ್ಷ ನಡೆಯುವ ಆಷಾಡ ಏಕಾದಶಿ ಎಂದರೆ ಪಂಢರಾಪುರದಲ್ಲಿ ಹಬ್ಬ ಉತ್ಸವ. ಕರ್ನಾಟಕದಿಂದ ಲಕ್ಷಾಂತರ ಭಕ್ತರು ದಿಂಡಿಯಾತ್ರೆ ಮೂಲಕ ಸಾಗುತ್ತಾರೆ. ಮಕ್ಕಳು, ಯುವಕರು, ಯುವತಿಯರು, ವೃದ್ಧರು ಭಜನೆ, ಅಭಂಗ ಹೇಳುತ್ತ ತೆರಳುತ್ತಾರೆ. 

ಮಳೆ ಬಿಸಿಲಿದ್ದರೂ ಸಂಗೀತವೇ ಆಹಾರ
ಆಷಾಡ ಏಕಾದಶಿಗೆ ಇನ್ನೂ 20 ದಿನಗಳು ಇರುವಾಗಲೇ ತಮ್ಮ ಊರಿನಿಂದ ಹೋಗುವ ವಾರಕರಿಗಳು ಸುಮಾರು 15 20 ದಿನಗಳ ಕಾಲ ದಿಂಡಿಯಾತ್ರೆ ನಡೆಸುತ್ತಾರೆ. ಸಾಗುವ ಮಾರ್ಗದಲ್ಲಿ ಜನರು ನೀಡುವ ಉಪಾಹಾರ, ಊಟವೇ ಇವರಿಗೆ ಪ್ರಸಾದ. ಮಳೆ, ಬಿಸಿಲೆನ್ನದೇ ಸಾಗುವ ವಾರಕರಿಗಳು, ಯಾವ ಸ್ಥಳದಲ್ಲಿ ರಾತ್ರಿಯಾಗುವುದೋ ಅಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ದಿಂಡಿಯಾತ್ರೆಯಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ವಿಶೇಷ. ಒಂದು ದಿಂಡಿಯಲ್ಲಿ 70ರಿಂದ 100 ಜನರ ವರೆಗೆ ವಾರಕರಿಗಳು ಇರುತ್ತಾರೆ.

ವಾರಕರಿಗಳು, ಹಣೆಗೆ ಅಷ್ಟಗಂಧ ಹಾಗೂ ಬುಕ್ಕಾ ಹಚ್ಚಿಕೊಂಡು ಬಿಳಿ ಬಟ್ಟೆ, ಬಿಳಿ ಟೊಪ್ಪಿಗೆ ಧರಿಸಿರುತ್ತಾರೆ. ಕೈಯಲ್ಲಿ ತಾಳ ಹಿಡಿದುಕೊಂಡು ಸಂಗೀತದಲ್ಲಿ ಮಗ್ನರಾಗುತ್ತಾರೆ. ಕೆಲವರು ಭಗವಾಧ್ವಜ  ವೀಣೆ ಹಾಗೂ ತುಳಸಿ ಗಿಡ ಹಿಡಿದುಕೊಂಡು ಮುಂದೆ ಸಾಗುತ್ತಿದ್ದರೆ ಹಿಂದಿನಿಂದ ಸಾಲಾಗಿ ನಡೆಯುವ ವಾರಕರಿಗಳು ಅಭಂಗ ಹಾಡುತ್ತ ತೆರಳುತ್ತಾರೆ. 

Advertisement

ಪುಣೆಯ ಆಳಂದದಿಂದ ಪಂಢರಾಪುರಕ್ಕೆ 160 ಕಿ.ಮೀ. ಅಂತರವಿದೆ. ಆಳಂದದಿಂದ ಬರುವ ದಿಂಡಿಯಾತ್ರೆ ನೋಡುವುದೇ ಸೊಗಸು. ಇದು ಜ್ಞಾನೇಶ್ವರ ದಿಂಡಿ, ಜ್ಞಾನೇಶ್ವರ ಪಲ್ಲಕ್ಕಿ ಎಂದು ಖ್ಯಾತಿ ಪಡೆದಿದೆ. ಈ ಪಲ್ಲಕ್ಕಿಯೊಂದಿಗೆ ಲಕ್ಷಾಂತರ ಜನ ಭಾಗವಹಿಸುತ್ತಾರೆ. 160 ಕಿ.ಮೀ.ವರೆಗೂ ಭಕ್ತರು ನಡೆದುಕೊಂಡೇ ಸಾಗುತ್ತಾರೆ. ಕಿರಿದಾದ ರಸ್ತೆಗಳು, ಗುಡ್ಡ ಬೆಟ್ಟಗಳನ್ನು ದಾಟಿ ಈ ಪಲ್ಲಕ್ಕಿ ಪಂಢರಾಪುರಕ್ಕೆ ಸೇರುತ್ತದೆ. 

 ಆಷಾಡ ಏಕಾದಶಿಗೆ 2 3 ದಿನ ಮುಂಚಿತವಾಗಿ ಬಾಕಿ ಉಳಿದಿವೆ ಅನ್ನುವಾಗಲೇ ದಿಂಡಿಯಾತ್ರೆಯು ಪಂಢರಾಪುರ ತಲುಪುತ್ತದೆ. ಏಕಾದಶಿಯಂದು ದರ್ಶನ ಪಡೆದು ಮನೆಗೆ ಮರಳುತ್ತಾರೆ. ಅಂದು ಮೊದಲ ದರ್ಶನ ಪಡೆದು ಆರತಿ ಮಾಡಲು ಯಾರಿಗೆ ಅವಕಾಶ ಸಿಗುತ್ತದೋ ಅವರಿವರನ್ನು ದೇವಸ್ಥಾನದಲ್ಲಿಯೇ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಸತ್ಕರಿಸುತ್ತಾರೆ. ನಾಲ್ಕು ವರ್ಷಗಳ ಹಿಂದೆ ಬೀದರ್‌ನ ದಂಪತಿಗೆ ಈ ಅವಕಾಶ ಸಿಕ್ಕಿತ್ತು. ದರ್ಶನಕ್ಕಾಗಿ 6 ಕಿ.ಮೀ.ಗೂ ಹೆಚ್ಚು ಸರದಿ ಸಾಲು ಇರುತ್ತದೆ. ದಿಂಡಿ ಮೂಲಕ ಸಾಗಿ ಕಳಶ ನೋಡಿದರೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಭಕ್ತರ ನಂಬಿಕೆ. ಹೀಗಾಗಿ ದರ್ಶನ ಸಿಗದಿದ್ದರೆ ಕಳಶ ನೋಡಿ ಮರಳುತ್ತಾರೆ. 

 ಸಂಗೀತವೇ ಪ್ರಸಾದ
ವಾರಕರಿ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವವಿದೆ. ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆ. ತಾಳ, ಮೃದಂಗಗಳ ಮೂಲಕ ಅಭಂಗಗಳನ್ನು ಪಠಿಸುತ್ತ ಪಂಡರಿನಾಥನನ್ನು ನೆನೆಯುತ್ತಾರೆ. ಅಭಂಗಗಳ ಸಂಕೀರ್ತನೆ ಮೂಲಕ ದಿಂಡಿ ಸಾಗುತ್ತದೆ. ವಾರಕರಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದ ಸಂತ ಜ್ಞಾನೇಶ್ವರ, ಸಂತ ತುಕಾರಾಮ, ಸಂತ ಮುಕ್ತಾಬಾಯಿ, ನಾಮದೇವ, ಏಕನಾಥ, ಗೋರಖನಾಥ, ನಿವೃತ್ತಿನಾಥ ಸೇರಿದಂತೆ ಅನೇಕರು ಪಂಡರಿನಾಥನನ್ನು ಕುರಿತು ರಚಿಸಿದ ಅಭಂಗಗಳೇ ವಾರಕರಿಗಳಿಗೆ ಧಾರ್ಮಿಕ ಗ್ರಂಥಗಳಾಗಿವೆ. ಜ್ಞಾನೇಶ್ವರನ ಭಾಗವತಯ ಗ್ರಂಥವು ಮಹಾರಾಷ್ಟ್ರದ ಪ್ರತಿಯೊಬ್ಬರ ಮನೆಯಲ್ಲಿ ಪೂಜಿಸಲ್ಪಡುತ್ತದೆ. ಇಲ್ಲಿನ ಅಭಂಗಗಳು ವಿಠೊಬನನ್ನು ಸಾಕ್ಷಾತ್ಕರಿಸುತ್ತವೆ. 

ತುಳಸಿಯಿಂದ ಆಕ್ಸಿಜನ್‌ ಹೆಚ್ಚಳ
ದಿಂಡಿಯಾತ್ರೆಯಲ್ಲಿ ವೀಣೆ ಹಾಗೂ ತುಳಸಿ ಗಿಡ ಕಡ್ಡಾಯವಾಗಿರುತ್ತದೆ. ಇದೊಂದು ಪದ್ಧತಿಯಾದರೂ ಇದಕ್ಕೊಂದು ವೈಜ್ಞಾನಿಕ ಕಾರಣವೂ ಇದೆ. ಪ್ರತಿಯೊಂದು ದಿಂಡಿಯಾತ್ರೆಯಲ್ಲೂ ತುಳಸಿ ಗಿಡವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಪಂಢರಾಪುರದಲ್ಲಿ ಲಕ್ಷಾಂತರ ಜನ ಸೇರುವುದರಿಂದ ಆಮ್ಲಜನಕದ ಕೊರತೆ ಆಗುವ ಸಾಧ್ಯತೆಯೂ ಇರುತ್ತದೆ. ತುಳಸಿ ಗಿಡದಲ್ಲಿ ಆಮ್ಲಜನಕ ಹೊರಸೂಸುವ ಶಕ್ತಿ ಇದೆ. ಹೀಗಾಗಿ ತುಳಸಿಯಿಂದ ಆಮ್ಲಜನಕ ಪ್ರಮಾಣ ಹೆಚ್ಚಳವಾಗುತ್ತದೆ ಎನ್ನುತ್ತಾರೆ ತಜ್ಞರು. 

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next