“ಬೊಂಬೆಗಳ ಲವ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ಪಾವನಾ, ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. ಇದುವರೆಗೆ 15 ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಡಿದ ಚಿತ್ರಗಳು ದೊಡ್ಡ ಯಶಸ್ಸು ಕೊಡದಿದ್ದರೂ, ಗುರುತಿಸಿಕೊಳ್ಳುವಂತಹ ಪಾತ್ರಗಳನ್ನು ಮಾಡಿರುವ ತೃಪ್ತಿ ಪಾವನಾ ಅವರದು. ಸದ್ಯಕ್ಕೆ ಪಾವನಾ ಕೈಯಲ್ಲಿ ಮೂರು ಮತ್ತೆರೆಡು ಚಿತ್ರಗಳಿವೆ. ಹೊಸ ಕೆಥೆಗಳನ್ನೂ ಇದೀಗ ಕೇಳುವಂತೆ ಫೋನ್ ಕಾಲ್‌ಗಳು ಬರುತ್ತಿವೆ. ಸದ್ಯ ಲಾಕ್‌ಡೌನ್ ಸಡಿಲಗೊಂಡಿದೆ. ಇನ್ನು ಮೇಲೆ ಕಥೆ ಕೇಳುವ ಉತ್ಸಾಹದಲ್ಲೂ ಇದ್ದಾರೆ.
ಅಷ್ಟೇ ಅಲ್ಲ, ಅವರ ಅಭಿನಯದ “ರುದ್ರಿ’,”ಮೈಸೂರ್ ಡೈರೀಸ್’ ಮತ್ತು “ಕಲಿವೀರ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನೇನು ಸೆನ್ಸಾರ್ ಆಗಿ, ಪ್ರೇಕ್ಷಕರ ಮುಂದೆ ಬರಬೇಕಷ್ಟೇ. ಹಾಗೊಂದು ವೇಳೆ ಚಿತ್ರಮಂದಿರಗಳು ಆರಂಭಗೊಂಡರೆ, ನಿರ್ಮಾಪಕರು ಪರಿಸ್ಥಿತಿ ಅರಿತು ಸಿನಿಮಾ ಬಿಡುಗಡೆ ಮಾಡಬಹುದು. ಸದ್ಯಕ್ಕೆ ಏನೆಂಬುದು ಗೊತ್ತಿಲ್ಲ. ಚಿತ್ರೀಕರಣಕ್ಕಿನ್ನೂ ಅನುಮತಿ ಕೊಟ್ಟಿಲ್ಲವಾದ್ದರಿಂದ ಯಾವುದಕ್ಕೂ ಸ್ಪಷ್ಟನೆ ಇಲ್ಲ ಎಂಬುದು ಪಾವನಾ ಅವರ ಮಾತು. ಇನ್ನು, ಪಾವನಾ ಅಭಿನಯದ “ತೂತು ಮಡಿಕೆ’ ಎಂಬ ವಿಭಿನ್ನ ಚಿತ್ರ ಕೂಡ ರಿಲೀಸ್‌ಗೆ ರೆಡಿಯಾಗುತ್ತಿದೆ.
“ಮೆಹಬೂಬಾ’ ಸಿನಿಮಾ ಇನ್ನೇನು ಚಿತ್ರೀಕರಣ ಶುರುಗೊಂಡರೆ, ಒಂದಷ್ಟು ಶೂಟಿಂಗ್ ಆಗಬೇಕಿದೆ. ಈಗಾಗಲೇ ಒಳಾಂಗಣ ಚಿತ್ರೀಕರಣ ಆಗಿದ್ದು, ಮೈಸೂರಲ್ಲಿ ಹೊರಾಂಗಣ ಚಿತ್ರೀಕರಣ ಆಗಬೇಕಿದೆ ಎಂದು ವಿವರ ಕೊಡುತ್ತಾರೆ ಪಾವನಾ. ಎಲ್ಲರಂತೆಯೂ ಪಾವನಾ ಅವರಿಗೂ ಒಂದಷ್ಟು ಹೊಸ ನಿರೀಕ್ಷೆಗಳಿವೆ. ಈಗ “ಮೈಸೂರು ಡೈರೀಸ್’, “ರುದ್ರಿ’, “ಪ್ರಭುತ್ವ’, “ತೂತು ಮಡಿಕೆ’ ಹೀಗೆ ಕೆಲವು ಚಿತ್ರಗಳ ಮೇಲೆ ಪಾವನಾ ಅವರಿಗೆ ಹೆಚ್ಚು ನಿರೀಕ್ಷೆ ಇದೆ.
ಸದ್ಯ ಕನ್ನಡದ ಭರವಸೆಯ ನಾಯಕ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಪಾವನಾಗೆ ಈಗ ಕೈಯಲ್ಲಿರುವ ಚಿತ್ರಗಳ ಹೊಸಬಗೆಯ ಪಾತ್ರಗಳು ಅವರ ಸಿನಿಬದುಕಿನಲ್ಲಿ ಹೊಸದೊಂದು ಮೈಲೇಜ್ ತಂದುಕೊಡುತ್ತದೆ ಎಂಬುದು ಅವರಿಗಿರುವ ಬಲವಾದ ನಂಬಿಕೆ. ಅದೆಲ್ಲಾ ಸರಿ, ಪಾವನಾ ಅವರೀಗ ಹೊಸದೊಂದು ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಮೋಷನ್ ಪೋಸ್ಟರ್ ನೋಡಿದರೆ ಅದೊಂದು ವಿಭಿನ್ನ ಪ್ರಯೋಗದ ಚಿತ್ರ ಅನ್ನೋದು ಗೊತ್ತಾಗುತ್ತದೆ.
ಆ ಸಿನಿಮಾ ಹೆಸರು “ರುದ್ರಿ’. ಹೌದು, ಈ ಚಿತ್ರದ ಮೇಲೂ ಪಾವನಾ ಅವರಿಗೆ ಇನ್ನಿಲ್ಲದ ವಿಶ್ವಾಸವಿದೆ. ಕಾರಣ, ಆ ಚಿತ್ರದ ಕಥೆ ಹಾಗು ಪಾತ್ರ. ಅಂದಹಾಗೆ, “ರುದ್ರಿ’ ಒಂದು ಮಹಿಳಾ ಪ್ರಧಾನವಾಗಿರುವ ಚಿತ್ರ. ಆದರ ಬಗ್ಗೆ ಹೇಳುವ ಪಾವನಾ, “ಈಗಾಗಲೇ ಚಿತ್ರದ ಫಸ್ಟ್‌ಲುಕ್ ಹೊರಬಂದಿದೆ. ಪುನೀತ್‌ರಾಜಕುಮಾರ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದು ವಿಶೇಷ. ಬಡಿಗೇರ್ ದೇವೇಂದ್ರ ನಿರ್ದೇಶಿಸಿದ್ದಾರೆ. “ರುದ್ರಿ’ ಚಿತ್ರದ ವಿಶೇಷವೆಂದರೆ, ಬಹುತೇಕ ಉತ್ತರ ಕರ್ನಾಟಕ ಭಾಗದ ಹಿನ್ನೆಲೆಯಲ್ಲೇ ಸಾಗಲಿದೆ. ಭಾಷೆ ಕೂಡ ಉತ್ತರ ಕರ್ನಾಟಕದಲ್ಲೇ ಇರಲಿದೆ.
ಒಂದು ಹೆಣ್ಣಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಒಬ್ಬ ಹುಡುಗಿಯ ಆಸೆ, ಕನಸು, ನೋವು, ನಲಿವುಗಳ ಸುತ್ತ ಚಿತ್ರ ಸಾಗಲಿದೆ. ಹಳ್ಳಿಯ ಹೆಣ್ಣುಮಕ್ಕಳು ಹೇಗೆ ಸಣ್ಣ ಸಣ್ಣ ಅಂಶಗಳಿಗೆ ಖುಷಿಪಡುತ್ತಾರೆ. ತಮಗೆ ಎದುರಾಗುವ ಸಮಸ್ಯೆಗಳಿಂದ ಹೇಗೆ ತೊಂದರೆಗೊಳಪಡುತ್ತಾರೆ. ಆ ಬಳಿಕ ಹೇಗೆ ಅದರಿಂದ ಹೊರಬರುತ್ತಾರೆ ಎಂಬ ಅಂಶಗಳು “ರುದ್ರಿ’ ಚಿತ್ರದ ವಿಶೇಷ. ಅದೇನೆ ಇರಲಿ, ಲಾಕ್‌ಡೌನ್‌ನಿಂದಾಗಿ ತಮ್ಮ ಊರಲ್ಲೇ ಇರುವ ಪಾವನಾ, ಇಷ್ಟರಲ್ಲೇ ಬೆಂಗಳೂರಿಗೆ ಬರುವ ಇಂಗಿತ ವ್ಯಕ್ತಪಡಿಸುತ್ತಾರೆ. ಒಂದಷ್ಟು ಕಥೆ ಕೇಳುವುದರ ಜೊತೆ, ನಿಂತ ಚಿತ್ರಗಳ ಪಾತ್ರದ ತಯಾರಿ ಮಾಡಿಕೊಳ್ಳುವ ಬಗ್ಗೆಯೂ ಮಾತಾಡುತ್ತಾರೆ.