ಪಾವಗಡ: 20-20 ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್. ಡಿ.ಕುಮಾರಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಪ್ರಕಟಿಸಿದಾಗ ಗ್ರಾಮದ ಜನರಲ್ಲಿ ಕಂಡಿದ್ದ ಕನಸು ಕೆಲವೇ ದಿನಗಳಲ್ಲಿ ಸುಳ್ಳಾದವು. ಆದರೆ ಕೆಲವೊಂದು ಕೆಲಸಗಳು ನಡೆದಿರುವುದಂತೂ ಸುಳ್ಳಲ್ಲ.
ತಾಲೂಕು ಕಸಬಾ ಹೋಬಳಿ ರಾಜವಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸಿ.ಬೋರಣ್ಣ ಮನೆಯಲ್ಲಿ 03-06- 2007ರಂದು ಊಟ ಸೇವಿಸಿ ಬಳಿಕ ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ನಂತರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ರಾತ್ರಿ ತಂಗಿದ್ದರು. ಈ ವೇಳೆ ಚಿಕ್ಕನಾಯಕನಹಳ್ಳಿ ಮಾತ್ರವಲ್ಲದೇ ಸುತ್ತ ಮುತ್ತಲಿನ ಗ್ರಾಮಸ್ಥರು ಆಗಮಿಸಿ ನಾಡಿನ ದೊರೆಗೆ ಅಹವಾಲು ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಿದ್ದರು. ಈ ವೇಳೆ ಧನಾತ್ಮಕವಾಗಿ ಸ್ಪಂದಿಸಿದ ಕುಮಾರಸ್ವಾಮಿ ಗ್ರಾಮದ ಅಭಿವೃದ್ಧಿಗೆ ಹಲವು ಆಶ್ವಾಸನೆ ನೀಡಿದ್ದರು. ಇದರಿಂದ ಗ್ರಾಮಸ್ಥರೂ ಅಭಿವೃದ್ಧಿ ಕುರಿತು ಕನಸು ಕಂಡಿದ್ದರು.
ಕಾಣದ ಪ್ರಗತಿ: ಆದರೆ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಭರವಸೆ ಈಡೇರದೆ ಗ್ರಾಮದ ಅಭಿವೃದ್ಧಿಯೂ ಆಗಿಲ್ಲ. ಸರ್ಕಾರಿ ಅಧಿಕಾರಿಗಳು ಮುತುವರ್ಜಿ ವಹಿಸಿದ್ದರೆ ಕೆಲವೊಂದು ಪ್ರಗತಿ ಸಾಧ್ಯವಾಗುತಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳು ಆ ಸಮಯದಲ್ಲಿ ಪ್ರಚಾರ ಪಡೆದುಕೊಂಡು ಸಿಎಂ ಆಶ್ವಾಸನೆ ಕಾರ್ಯ ರೂಪಕ್ಕೆ ತರುವಲ್ಲಿ ನಿರ್ಲಕ್ಷ್ಯ ವಹಿಸಿದರು. ಸಿಎಂ ಬಂದು ಹೋದರೂ ಗ್ರಾಮದಲ್ಲಿ ಏನೂ ಬದ ಲಾಗದ್ದರಿಂದ ಜನರೂ ಸುಮ್ಮನಾದರು.
ಅಂದು ನೀಡಿದ್ದ ಭರವಸೆ: ಗ್ರಾಮದಲ್ಲಿ 400ಕ್ಕೂ ಹೆಚ್ಚು ಕುಟಂಬಗಳಿರುವುದರಿಂದ ಪಡಿತರ ನೀಡುವ ವ್ಯವಸ್ಥೆ ಗ್ರಾಮದಲ್ಲಿ ಪ್ರಾರಂಭ, ಗ್ರಾಮಕ್ಕೆ ಬಸ್ ವ್ಯವಸ್ಥೆ, ಚರಂಡಿ, ರಸ್ತೆ, ಕುಡಿಯುವ ನೀರು, ಗ್ರಾಮದಲ್ಲಿನ ಗ್ರಂಥಾಲಯದ ದುರಸ್ತಿ, ಗ್ರಾಮದಲ್ಲಿರುವ ಪುರಾತನ ರಂಗನಾಥ ಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಗುಡಿಸಲು ಮುಕ್ತ ಗ್ರಾಮವನ್ನಾಗಿಸಲು ಮನೆಗಳ ನಿರ್ಮಾಣಕ್ಕೆ ಪಟ್ಟಿ ಸಿದ್ಧಪಡಿಸಿ ನೀಡಲು ಅಧಿಕಾರಿಗಳಿಗೆ ಆದೇಶಿಸಿದ್ದರು. ವೃದ್ಧರಿಗೆ ಪಿಂಚಣಿ ಸೇರಿ ಹತ್ತು ಹಲವು ಭರವಸೆ ನೀಡಿದ್ದರು. ಆದರೆ ಇದ್ಯಾವುದೂ ಕಾರ್ಯರೂಪಕ್ಕೆ ತರಲು ಅಧಿಕಾರಿಗಳು ಮುಂದಾಗಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೂ ತರಲಿಲ್ಲ.
ಆಗಿರುವ ಕೆಲಸಗಳು: ರಾಜವಂತಿ ಗ್ರಾಮದಿಂದ ಕೋಟೆ ಕೊತ್ತ್ತೂರು ಗ್ರಾಮದವರೆಗೂ ರಸ್ತೆ ದುರಸ್ತಿ ಮಾಡಿ ಡಾಂಬರೀಕರಣ ಮಾಡಲಾಗಿದೆ. ಗ್ರಾಮದಲ್ಲಿ ಕೆಲವು ಕಡೆ ಚರಂಡಿ ನಿರ್ಮಿಸಲಾಗಿದೆ. ಬಡವರ ವಾಸಿಸುವ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಭಾಗ್ಯಜ್ಯೋತಿ ಯೋಜನೆ ಅನುಷ್ಠಾನ ಗೊಳಿಸುವ ಕೆಲಸ ಮಾಡಲಾಗಿದೆ.