ಚಿಕ್ಕಬಳ್ಳಾಪುರ: ದೇಶದ ಸಮಗ್ರತೆ, ಐಕ್ಯತೆ, ಸಂವಿಧಾನದ ಬಗ್ಗೆ ಶಾಲಾ ಹಂತದಲ್ಲಿ ಅರಿವು ಮೂಡಿಸಬೇಕಾದ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಿದೆ ಎಂದು ಇಂಡಿಯನ್ ಆರ್ಮಿ ಫೋರ್ಸ್‌ನ ಸುಭೇದಾರ್ ಶಶಿಕುಮಾರ್ ಹೇಳಿದರು.
ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ 70ನೇ ಗಣರಾಜ್ಯೋತ್ಸವ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ತಾವು ದೇಶದ ಸೈನಿಕನಾಗಿ ಕಾರ್ಯನಿರ್ವಹಿಸಿದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಆಂತರಿಕ ಭದ್ರತೆಗೆ ಕೈಜೋಡಿಸಿ: ದೇಶಕ್ಕಾಗಿ ಪ್ರತಿಯೊಬ್ಬರು ತ್ಯಾಗದ ಮನೋಭಾವ ಹೊಂದಬೇಕು. ದೇಶದ ಗಡಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸೈನಿಕರಂತೆ ವಿದ್ಯಾರ್ಥಿಗಳು ಕೂಡ ದೇಶದ ಆಂತರಿಕ ಭದ್ರತೆಗೆ ಕೈ ಜೋಡಿಸಬೇಕೆಂದು ಸಲಹೆ ನೀಡಿದರು. ದೇಶದ ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಅದರಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದರು.
ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ: ಶಾಲೆಯಲ್ಲಿ ಓದಿ ಉನ್ನತ ಸ್ಥಾನದಲ್ಲಿರುವ ಕಿರಣ್‌ರಾಜ್ ಜಿ, ಅಶ್ವಿನಿ., ಡೇವಿಡ್ ಪ್ರಸನ್ನಕುಮಾರ್‌ರನ್ನು ಹಿರಿಯ ವಿದ್ಯಾರ್ಥಿಗಳ ಬಳಗದಿಂದ ಸನ್ಮಾನಿಸಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ರವೀಂದ್ರ, ಬಾಬು .ಆರ್ ಹಾಗೂ ಮೊಮ್ಮಹದ್ ಹಮೀದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಬುಲ್ ಬುಲ್ಸ್ ತಂಡಗಳು ಪಥ ಸಂಚಲನ ನಡೆಸಿಕೊಟ್ಟರು.
ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ, ಬಿಜಿಎಸ್ ಶಾಲಾ ಮುಖ್ಯಶಿಕ್ಷಕರಾದ ಮೋಹನ್ ಕುಮಾರ್ ಡಿ.ಸಿ, ಬಿಜಿಎಸ್ ಪಿ.ಯು ಕಾಲೇಜಿನ ಡೀನ್ ಡಾ.ಮಧುಸೂಧನ್, ಬಿಜಿಎಸ್ ವಿದ್ಯಾರ್ಥಿ ನಿಲಯದ ನಿಲಯಪಾಲಕರಾದ ಎಚ್.ಎಂ.ರಾಜು ಉಪಸ್ಥಿತರಿದ್ದರು.