ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಅವಕಾಶ ಸಿಕ್ಕರೆ ಅದನ್ನು ಕಳೆದುಕೊಳ್ಳಬೇಡಿ … -ಚಕ್ರವರ್ತಿ ಹೀಗೆ ಹೇಳುವ ಹೊತ್ತಿಗೆ ಸಿನಿಮಾ ಮುಗಿಯುವ ಹಂತಕ್ಕೆ ಬಂದಿರುತ್ತದೆ. ಅಷ್ಟು ವರ್ಷ ದಿವಾನ್ ಜೊತೆ ಸೇರಿಕೊಂಡು ದೇಶದ್ರೋಹ ಮಾಡಿದ ಶೆಟ್ಟಿಗೆ ಈ ಮಾತು ಯಾಕೋ ಬಲವಾಗಿ ಕಾಡುತ್ತದೆ. ಆತ ಪ್ರಾಯಶ್ಚಿತ ಕೂಡಾ ಮಾಡಿಕೊಳ್ಳುತ್ತಾನೆ. ಚಕ್ರವರ್ತಿಯ ನಡೆಯೇ ಹಾಗೆ. ಆತ ಏನು ಮಾಡುತ್ತಾನೆ, ಆತನ ನಿರ್ಧಾರದ ಹಿಂದಿನ ಉದ್ದೇಶವೇನು ಎಂಬುದನ್ನು ಅರ್ಥ ಮಾಡಿಕೊಳ್ಳೋದು ಕಷ್ಟ.
ಅರ್ಥಮಾಡಿಕೊಳ್ಳುವ ಹೊತ್ತಿಗೆ ಆತ ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಿರುತ್ತಾನೆ. ಆ ತರಹದ ಒಂದು ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ ಚಕ್ರವರ್ತಿ ಅಲಿಯಾಸ್ ಶಂಕರ್. “ಚಕ್ರವರ್ತಿ’ ಚಿತ್ರ ಆರಂಭವಾಗೋದೇ ರೌಡಿಸಂ ಹಿನ್ನೆಲೆಯಿಂದ. ಹೀಗೆ ಆರಂಭವಾಗುವ ಚಿತ್ರ ಅಂಡರ್‌ವರ್ಲ್ಡ್ನ ವಿವಿಧ ಮಜಲುಗಳನ್ನು ತೋರಿಸುತ್ತಾ, ತಣ್ಣನೆಯ ಕ್ರೌರ್ಯವನ್ನು ಕಟ್ಟಿಕೊಡುತ್ತಾ ಸಾಗುತ್ತದೆ. ಚಿಂತನ್ ಯಾವುದೇ ಸದ್ದುಗದ್ದಲ ಮಾಡದೇ ಬೆಂಗಳೂರು ಭೂಗತ ಲೋಕದಲ್ಲಿ ನಡೆದ ನೈಜ ಘಟನೆಯನ್ನು ಕಟ್ಟಿಕೊಟ್ಟಿದ್ದಾರೆ.
ಪಾತ್ರಗಳ ಹೆಸರು ಹಾಗೂ ಕೆಲವು ಸನ್ನಿವೇಶ ಹಾಗೂ ಹಿನ್ನೆಲೆಯನ್ನಷ್ಟೇ ಬದಲಾಯಿಸಿಕೊಂಡಿದ್ದಾರೆ. ಹಾಗಾಗಿ, ಸಿನಿಮಾ ನೋಡುವಾಗ ನಿಮಗೆ ಈ ಹಿಂದೆ ಓದಿದ, ನೋಡಿದ ಅಂಶಗಳು ನೆನಪಾಗಬಹುದು. ಚಿಂತನ್ “ಚಕ್ರವರ್ತಿ’ಯ ಮೊದಲರ್ಧ ಸಂಪೂರ್ಣವಾಗಿ 80ರ ದಶಕದ ಬೆಂಗಳೂರು ಅಂಡರ್‌ವರ್ಲ್ಡ್ಗೆ ಮೀಸಲಿಟ್ಟಿದ್ದಾರೆ. ಹಾಗೆ ನೋಡಿದರೆ ಒಬ್ಬ ವ್ಯಕ್ತಿ ಸಮಾಜಕ್ಕಾಗಿ, ಅನ್ಯಾಯ ಸಹಿಸಲಾಗದೇ ಯಾವ ರೀತಿ ತನಗೇ ಗೊತ್ತಿಲ್ಲದೇ ರೌಡಿಸಂ ಪ್ರಪಂಚಕ್ಕೆ ಎಂಟ್ರಿಕೊಡುತ್ತಾನೆ ಮತ್ತು ಹೇಗೆ ಅದರಲ್ಲಿ ಬೆಳೆಯುತ್ತಾ ಹೋಗುತ್ತಾನೆ ಎಂಬುದನ್ನು ತೋರಿಸಿದ್ದಾರೆ.
ಇಲ್ಲಿ 80ರ ದಶಕದ ಪರಿಸರವನ್ನು ಕಟ್ಟಿಕೊಡಲು ಚಿಂತನ್ ಸಾಕಷ್ಟು ಶ್ರಮಪಟ್ಟಿರೋದು ಎದ್ದು ಕಾಣುತ್ತದೆ. ಸಾಮಾನ್ಯವಾಗಿ ದರ್ಶನ್ ಸಿನಿಮಾ ಎಂದರೆ ಪಕ್ಕಾ ಮಾಸ್ ಸಿನಿಮಾ, ಹೊಡೆದಾಟ, ಬಡಿದಾಟ ಸೇರಿದಂತೆ ಮಾಸ್ ಎಲಿಮೆಂಟ್ಸ್‌ಗಳೇ ಜಾಸ್ತಿ ಇರುತ್ತವೆ ಎಂಬ ಮಾತುಗಳು ಕೇಳಿಬರುತ್ತಿರುತ್ತವೆ. ಆದರೆ, ಚಿಂತನ್ “ಚಕ್ರವರ್ತಿ’ಯನ್ನು ಆ ಅಪವಾದದಿಂದ ಪಾರು ಮಾಡಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ಫ್ಯಾಮಿಲಿ ಹಿನ್ನೆಲೆಗೂ ಹೆಚ್ಚು ಮಹತ್ವ ಕೊಟ್ಟಿದ್ದಾರೆ.
Related Articles
ಕೆಟ್ಟ ಜಾಗದಲ್ಲಿ ಕುಳಿತು ಒಳ್ಳೇ ಕೆಲಸವನ್ನು ಮಾಡಬಹುದು, ಒಳ್ಳೇ ಜಾಗದಲ್ಲಿ ಕುಳಿತು ಕೆಟ್ಟ ಕೆಲಸವನ್ನು ಮಾಡಬಹುದು ಎಂಬ ಒನ್‌ಲೈನ್‌ನೊಂದಿಗೆ ಆರಂಭವಾಗುವ ಕಥೆಯಲ್ಲಿ ರೌಡಿಸಂ ಜೊತೆ ಜೊತೆಗೆ ತನ್ನ ಸಮಾಜ, ದೇಶದ ಬಗೆಗಿನ ನಾಯಕನ ಕಮಿಟ್‌ಮೆಂಟ್, ದೇಶಪ್ರೇಮವನ್ನು ತೋರಿಸುತ್ತಾ ಹೋಗಿದ್ದಾರೆ. ಇಲ್ಲಿ ಚಿಂತನ್ ಒಂದು ಸೂಕ್ಷ್ಮ ಅಂಶವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಅದೇನೆಂದರೆ, ಸಾಮಾನ್ಯವಾಗಿ ಪೊಲೀಸರ ಕುಮ್ಮಕ್ಕಿನಿಂದ ರೌಡಿಸಂಗೆ ಎಂಟ್ರಿಕೊಟ್ಟು ದೊಡ್ಡ ರೌಡಿಯಾಗುವ ವ್ಯಕ್ತಿಯನ್ನು ಕೊನೆಗೆ ಪೊಲೀಸರೇ ಉಡಾಯಿಸುವ ಕಥೆಗಳ ಮಧ್ಯೆ ಚಕ್ರವರ್ತಿ ಭಿನ್ನವಾಗಿ ನಿಲ್ಲಲು ಕಾರಣ, ಪೊಲೀಸರ ಸಮಾಜ ಸ್ವಾಸ್ಥ್ಯದ ಪರಿಕಲ್ಪನೆ. ಒಬ್ಬ ಡಾನ್‌ನ ಬಳಸಿಕೊಂಡು ದೇಶಕ್ಕೆ ಬರುವ ಆಪತ್ತನ್ನು ಹೇಗೆ ಪರಿಹರಿಸುತ್ತಾರೆ ಎಂಬುದು ಕೂಡಾ ಚಿತ್ರದ ಹೈಲೈಟ್ ಪಾಯಿಂಟ್. ಹಾಗಾಗಿಯೇ “Rare Combination Of Crime and Brain’ ವಕೌìಟ್ ಆಗಿದೆ.
ರೌಡಿಸಂ ಛಾಯೆಯಲ್ಲಿ ದೇಶಪ್ರೇಮದ ಕಥೆಯನ್ನು ಕಟ್ಟಿಕೊಡಲು ಏನೆಲ್ಲಾ ಮಾರ್ಗಗಳನ್ನು ಉಪಯೋಗಿಸಬೇಕೋ ಆ ಎಲ್ಲಾ ಮಾರ್ಗಗಳನ್ನು ಚಿಂತನ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಚಿಂತನ್ ಪಾತ್ರ ಪೋಷಣೆ ಹಾಗೂ ಪರಿಸರಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದು ಎದ್ದು ಕಾಣುತ್ತದೆ. ಹಾಗಾಗಿಯೇ ಇಲ್ಲಿ ನಾಯಕನಿಗೆ ಅನಾವಶ್ಯಕ ಬಿಲ್ಡಪ್‌ಗ್ಳು, ಸುಖಾಸುಮ್ಮನೆ ಡೈಲಾಗ್‌ಗಳಿಲ್ಲ. ಇಲ್ಲಿ ಮಾತಿಗಿಂತ ಮೌನವೇ ಹೆಚ್ಚು ಕೆಲಸ ಮಾಡಿದೆ. ಇದು ಅಂಡರ್‌ವರ್ಲ್ಡ್ ಸಿನಿಮಾವಾದರೂ ಇಲ್ಲಿ ರಕ್ತಪಾತ, ಅತಿಯಾದ ಹಿಂಸೆಯನ್ನು ತೋರಿಸಿಲ್ಲ.
ಆದರೆ, ಚಿತ್ರದ ವೇಗ ಇನ್ನಷ್ಟು ಹೆಚ್ಚಿರಬೇಕೆಂದು ನಿಮಗೆ ಆಗಾಗ ಅನಿಸಬಹುದು. ಆಗ ನಿಮ್ಮನ್ನು ರಿಲ್ಯಾಕ್ಸ್ ಮಾಡಲು ರೊಮ್ಯಾಂಟಿಕ್ ಹಾಡೊಂದು ಬರುತ್ತದೆ. ಮೇಕಿಂಗ್ ವಿಷಯದಲ್ಲಿ “ಚಕ್ರವರ್ತಿ’ ಒಂದು ಅದ್ಧೂರಿ ಚಿತ್ರ. ಹಾಡು, ಫೈಟು, ಲೊಕೇಶನ್ ಎಲ್ಲಾ ವಿಷಯದಲ್ಲೂ “ಚಕ್ರವರ್ತಿ’ ಅದ್ಧೂರಿತನ ಮೆರೆದಿದೆ. ಚಿತ್ರದ ಹೈಲೈಟ್ ಎಂದರೆ ದರ್ಶನ್. ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ಪಾತ್ರಕ್ಕೆ ತಕ್ಕಂತೆ ತುಂಬಾ ಸೆಟಲ್ಡ್ ಆಗಿ ನಟಿಸಿದ್ದಾರೆ. ಹೆಚ್ಚು ಮಾತಿಲ್ಲದೇ, ಗುರಿ ಮುಟ್ಟುವ ಸರದಾರನಾಗಿ ಮಿಂಚಿದ್ದಾರೆ. ದೀಪಾ ಸನ್ನಿಧಿ ಆಗಾಗ ದರ್ಶನ ಕೊಡುತ್ತಿರುತ್ತಾರಷ್ಟೇ.
ಪೊಲೀಸ್ ಆಫೀಸರ್ ಸೂರ್ಯಕಾಂತ್ ಆಗಿ ಆದಿತ್ಯ ಇಷ್ಟವಾಗುತ್ತಾರೆ. ಇನ್ನು ಮಹಾರಾಜಾ ಪಾತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿರುವ ದಿನಕರ್ ಚೆನ್ನಾಗಿ ಕಂಡರೂ ಅವರ ಪಾತ್ರ ಆತುರಾತುರವಾಗಿ ಬಂದು ಹೋದಂತೆ ಅನಿಸುತ್ತದೆ. ಉಳಿದಂತೆ ಶರತ್ ಲೋಹಿತಾಶ್ವ, ಸೃಜನ್ ಲೋಕೇಶ್, ಶಿವಧ್ವಜ್ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಧು ಕೋಕಿಲ ಎಂಟ್ರಿಗಷ್ಟೇ ಅವರ ಅಭಿಮಾನಿಗಳು ತೃಪ್ತಿಪಟ್ಟುಕೊಳ್ಳುವಂತಹ ಪಾತ್ರದಲ್ಲಿ ಸಾಧು ಹಾಗೆ ಬಂದು ಹೀಗೆ ಹೋಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಮೂರು ಹಾಡುಗಳು ಇಷ್ಟವಾಗುತ್ತವೆ.
ಚಿತ್ರ: ಚಕ್ರವರ್ತಿ
ನಿರ್ಮಾಣ: ಸಿದ್ಧಾಂತ್
ನಿರ್ದೇಶನ: ಚಿಂತನ್
ತಾರಾಗಣ: ದರ್ಶನ್, ದೀಪಾ ಸನ್ನಿಧಿ, ಆದಿತ್ಯ, ಸೃಜನ್, ದಿನಕರ್, ಕುಮಾರ್ ಬಂಗಾರಪ್ಪ , ಶಾವಾರ್ ಅಲಿ ಮತ್ತಿತರರು
* ರವಿಪ್ರಕಾಶ್ ರೈ