ಹೊನ್ನಾವರ: ದೇಶದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅಪ್ರತಿಮ ತ್ಯಾಗಮಾಡಿದ ಜಿಲ್ಲೆಯ ಸಹಸ್ರಾರು ಜನರಿಗೆ ಸ್ಫೂರ್ತಿಯಾಗಿ, ಮಾಹಿತಿಯ ಸೆಲೆಯಾಗಿ 21ಪತ್ರಿಕೆಗಳು ಜಿಲ್ಲೆಯಲ್ಲಿ ಪ್ರಕಟಗೊಳ್ಳುತ್ತಿದ್ದವು ಎಂದು ಉತ್ತರ ಕನ್ನಡ ಪತ್ರಿಕೋದ್ಯಮದ ಶತಮಾನದ ಹೆಜ್ಜೆ ಗುರುತು ಕೃತಿಯಲ್ಲಿ ರಾಜೀವ ಅಜ್ಜೀಬಳ ಹೇಳುತ್ತಾರೆ. ಹೀಗೆ ಅಂದಿನಿಂದ ಇಂದಿನವರೆಗೆ ಜಿಲ್ಲೆಯ ಪತ್ರಿಕೆಗಳ ಮತ್ತು ಪತ್ರಕರ್ತರ ಕೊಡುಗೆಯನ್ನು 28ಪುಟಗಳಲ್ಲಿ ಅವರು ದಾಖಲಿಸಿರುವುದು ರೋಚಕವಾಗಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮಕ್ಕೆ 1815ರಲ್ಲೇ ಕರ್ಕಿ ವೆಂಕಟ್ರಮಣ ಶಾಸ್ತ್ರಿ ಸೂರಿಯವರು ಹವ್ಯಕ ಸುಭೋದ ಪತ್ರಿಕೆಯನ್ನು ಕಲ್ಲಚ್ಚು ಬಳಸಿ ಪ್ರಕಟಿಸಿದ್ದರು. ಮುಂದೆ ಇದೇ ಕಾರವಾರ ಚಂದ್ರಿಕೆಯಾಗಿ ಜಿಲ್ಲೆಯ ರೈತರ ಸಮಸ್ಯೆಗಳನ್ನು, ಆಳರಸರ ವಿರುದ್ಧ ಮುಲಾಜಿಲ್ಲದ ಲೇಖನ ಪ್ರಕಟಿಸಿತು. ಶ್ರೀ ಸರಸ್ವತಿ ಕಲ್ಲಚ್ಚಿನ ಮಾಸಪತ್ರಿಕೆ 1900ರ ಆ.15 ರಂದು ಸಿದ್ಧಾಪುರದಲ್ಲಿ ಆರಂಭವಾಯಿತು. 1905ರಲ್ಲಿ ಕಾರವಾರದಲ್ಲಿ ವಿನೋದಿನಿ ಆರಂಭವಾಯಿತು. 1916ರಲ್ಲಿ ಕುಮಟಾದಿಂದ ಆರಂಭವಾದ ಕಾನಡಾ ವೃತ್ತ ಬ್ರಿಟೀಷರ ದಬ್ಟಾಳಿಕೆ ವಿರುದ್ಧ ಜನಜಾಗೃತಿ ಮೂಡಿಸಿತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಬರೆದಾಗ ಪತ್ರಿಕೆಗೆ ಆ ಕಾಲದಲ್ಲಿ ಸಾವಿರ ರೂಪಾಯಿ ದಂಡ ವಿಧಿಸಿತ್ತು. 1930-34ರಲ್ಲಿ ಕಾನೂನು ಭಂಗ ಚಳವಳಿಯ ಕಾಲದಲ್ಲಿ ಖಟ್ಲೆ ಎದುರಿಸಿತ್ತು. ಆ ಪತ್ರಿಕೆ ನೂರು ದಾಟಿ ಈಗಲೂ ನಡೆಯುತ್ತಿರುವುದು ಪವಾಡದಂತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಇಷ್ಟು ಸುದೀರ್ಘ ಕಾಲ ಮೂರು ತಲೆಮಾರು ಶ್ರದ್ಧೆಯಿಂದ ಪ್ರಕಟಿಸುತ್ತ ಬಂದ ಪತ್ರಿಕೆ ಇನ್ನೊಂದಿಲ್ಲ.
1923ರಲ್ಲಿ ಅಂಕೋಲೆಯ ಸುಧಾರಕ, 1925ರಲ್ಲಿ ಗೋಕರ್ಣದ ನಂದಿನಿ, 1929ರಿಂದ ಸರ್ಪಕರ್ಣೇಶ್ವರರ ಪರಮಾನಂದ ಸಾಧನ, ಆ ಕಾಲದಲ್ಲೇ ಹೊರಟ ಭೂಗತ ಪತ್ರಿಕೆಗಳು ನವಚೇತನ ಮಾಸಪತ್ರಿಕೆ, ಸ್ವಾತಂತ್ರ್ಯ ಬಂದಾಗ 1947ರಲ್ಲಿ ಆರಂಭವಾದ ನಾಗರಿಕ ಕೈಗಳು ಬದಲಾದರೂ ಅದೇ ಧೋರಣೆಯಲ್ಲಿ ಕೃಷ್ಣಮೂರ್ತಿ ಹೆಬ್ಟಾರರಿಂದ ನಡೆಸಲ್ಪಡುತ್ತಿದೆ. ಶಿರಸಿ ಸೇವಾ, ಕಾರವಾರದ ಕೊಂಕಣ ಕಿನಾರ, ಅಂಕೋಲೆಯ ಪಂಚಾಮೃತ, ಭೂದಾನ. 1955ರಿಂದ ಆರಂಭವಾದ ಜನಸೇವಕ, ಶಿರಸಿ ಸಮಾಚಾರ, 1956ರಲ್ಲಿ ಮಂಜುನಾಥ ಭಾಗವತರದ ಯಕ್ಷಗಾನ, ಚುನಾವಣೆ, ರಮಣ ಸಂದೇಶ, ಗೋಕರ್ಣ ಗೋಷ್ಠಿ, ಶೃಂಗಾರ, ಚದುರಂಗ, ಸಮಾಜವಾಣಿ, ನಕ್ಷೆ ನವಾಯತ್, ಲೋಕಧ್ವನಿ, ಗ್ರಾಮಭಾರತಿ, ಕನ್ನಡ ಜನಾಂತರಂಗ, ಕರಾವಳಿ ಮುಂಜಾವು, ಉದ್ಯಮದರ್ಶಿ ಇತರೆ 2000ನೇ ಸಾಲಿನ ನಂತರ ಬಂದ ಪತ್ರಿಕೆಗಳನ್ನು ಉದಾರಿಸಿದ್ದಾರೆ.
ಜಿಲ್ಲೆಗೆ ದೀಪವಾಗಿ ಎಷ್ಟೊಂದು ಪತ್ರಿಕೆಗಳು ಹುಟ್ಟಿದವು, ಬೆಳಕಾದವು. ಆರ್ಥಿಕ ಮತ್ತು ಇನ್ನಿತರ ಸಮಸ್ಯೆಯಿಂದ ನಿಂತು ಹೋದವು. ಅದೆಷ್ಟೋ ಸಂಪಾದಕರು ಸದುದ್ದೇಶದ ಸಾಧನೆಗಾಗಿ, ಪತ್ರಿಕಾ ಧರ್ಮ ಪಾಲಿಸುತ್ತ ದೀಪದಂತೆ ಉರಿದು ಹೋದರು. ಜನ ಒಪ್ಪಿದರೋ ಬಿಟ್ಟರೋ ಗೊತ್ತಿಲ್ಲ, ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿ ಹೋಗಿದ್ದಾರೆ. ಇಂದಿನ ಪತ್ರಕರ್ತರು ಮಾತ್ರವಲ್ಲ ಜಿಲ್ಲೆಯ ಜನರೂ ಅಭಿಮಾನ ಪಡಬೇಕು. ಇಷ್ಟಪಟ್ಟು ಮುಳ್ಳಿನ ಹಾದಿಯಲ್ಲಿ ಮುಳ್ಳುಗಳನ್ನು ಸರಿಸುತ್ತಾ, ತಾವು ಚುಚ್ಚಿಸಿಕೊಳ್ಳುತ್ತ ನಡೆದರು. ಜಿಲ್ಲೆಯಲ್ಲಿ ನೆಲೆಸಿದ್ದ ಕವಿ, ಪತ್ರಕರ್ತ ಜಿ.ಆರ್. ಪಾಂಡೇಶ್ವರ ಗುಡಿಸಿದಷ್ಟು ಕಸವು ಹೆಚ್ಚು, ಗುಡಿಸುವಂತಹ ಹುಚ್ಚು ಎಂದು ಬರೆದಿದ್ದರು. ರಾಜ್ಯದ ಪ್ರಮುಖ ಪತ್ರಿಕೆಗಳಿಗೆ ಮತ್ತು ವಾಹಿನಿಗಳಿಗೆ ಜಿಲ್ಲೆಯವರೇ ಆಯಕಟ್ಟಿನ ಸ್ಥಾನದಲ್ಲಿದ್ದಾರೆ. ಜಿಲ್ಲೆಯಲ್ಲಿ ನೂರಾರು ಯುವಕರು ಪತ್ರಿಕೆಗಳಿಗೆ, ವಾಹಿನಿ ಗಳಿಗೆ ವರದಿಗಾರರಾಗಿದ್ದಾರೆ. ಇವರೆಲ್ಲಾ ಈ ಇತಿಹಾಸವನ್ನು ಓದಬೇಕು. ಇನ್ನೂ ವಿವರಬೇಕಿದ್ದರೆ ಶಿರಸಿ ಕಲಾಶಿಕ್ಷಕ, ಸಾಹಿತ್ಯ ಪತ್ರಿಕೋದ್ಯಮ ಪ್ರೇಮಿಗಳಾಗಿದ್ದ ದಿ| ಆರ್.ಜಿ. ರಾಯ್ಕರ ಮಾಸ್ತರರು ಸಂಗ್ರಹಿಸಿದ ಜಿಲ್ಲೆಯ ಪತ್ರಿಕೆಗಳನ್ನು ಕರ್ಕಿ ದೈವಜ್ಞ ಮಠದ ವಾಚನಾಲಯಕ್ಕೆ ದಾನಮಾಡಿದ್ದಾರೆ. ಪತ್ರಕರ್ತರು ಇವುಗಳನ್ನು ಓದಿ, ತಿಳಿಯಲು ಅವಕಾಶವಿದೆ.
ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿ ಸದಸ್ಯ ಸುಬ್ರಾಯ ಭಟ್ ಬಕ್ಕಳ ಈ ಕೃತಿಗಾಗಿ ಆಸೆಪಟ್ಟಿದ್ದರು. ಪತ್ರಕರ್ತ ರಾಜೀವ ಅಜ್ಜೀಬಳ ಕಷ್ಟಪಟ್ಟು ಇದನ್ನು ನಿರುದ್ವೇಗದಿಂದ ದಾಖಲಿಸಿ ಕೊಟ್ಟಿದ್ದಾರೆ. ಕೇವಲ 44 ಪುಟಗಳ ಈ ಕೃತಿಯಲ್ಲಿ ಅಂದು ಪ್ರಕಟವಾಗುತ್ತಿದ್ದ ಪತ್ರಿಕೆಗಳ ಚಿತ್ರವೂ ಇದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದನ್ನು ಮುದ್ರಿಸಿ, ಇಂದು ಮುರ್ಡೇಶ್ವರದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಮತ್ತು ಪತ್ರಿಕಾ ದಿನಾಚರಣೆಯಂದು ಬಿಡುಗಡೆಯಾಗಿದೆ. ರಾಜೀವ ಅಜ್ಜೀಬಳರಿಗೆ ಜಿಲ್ಲೆಯ ಪತ್ರಕರ್ತರು ಕೃತಜ್ಞರಾಗಿದ್ದಾರೆ.
•ಜೀಯು, ಹೊನ್ನಾವರ