Advertisement

ಪಾಟ್ನಾ ಜಯಭೇರಿ; ಟೈಟಾನ್ಸ್‌ಗೆ ಐದನೇ ಸೋಲು

08:45 AM Aug 04, 2017 | Harsha Rao |

ಹೈದರಾಬಾದ್‌: ಇಲ್ಲಿನ ಗಚ್ಚಿ ಬೌಲಿ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಗುರುವಾರದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ 43-36 ಅಂಕಗಳ ಅಂತರದಿಂದ ತೆಲುಗು ಟೈಟಾನ್ಸ್‌ ತಂಡವನ್ನು ಮಣಿಸಿದೆ. ಪಾಟ್ನಾ ಈ ಕೂಟದಲ್ಲಿ ಸತತ 2ನೇ ಗೆಲುವು ಪಡೆದಿದೆ.

Advertisement

ಗುರುವಾರ ವಲಯ “ಬಿ’ನಲ್ಲಿ ನಡೆದ ಈ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಜಿದ್ದಾಜಿದ್ದಿನ ಆಟ ಪ್ರದರ್ಶಿಸಿತು. ಆದರೂ ಪಾಟ್ನಾ ಕೈಯಿಂದ ಗೆಲುವು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಸ್ಟಾರ್‌ ಆಟಗಾರ ರಾಹುಲ್‌ ಚೌಧರಿ 12 ಅಂಕ ತಂದು ತಂಡವನ್ನು ಗೆಲ್ಲಿಸುವ ಪ್ರಯತ್ನ ನಡೆಸಿದರು. ಅದು ಕೂಡ ಸಾಧ್ಯವಾಗಲಿಲ್ಲ. ಪಾಟ್ನಾ ಪರ ಪ್ರದೀಪ್‌ ನರ್ವಾಲ್‌ 12 ಅಂಕ ತಂದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೋನು ಗೋಯತ್‌ 10 ಅಂಕ ತಂದಿದ್ದು ತಂಡದ ಪರ ದಾಖಲಾದ ಗರಿಷ್ಠ ಅಂಕವಾಗಿದೆ.

ಈ ಸೋಲಿನೊಂದಿಗೆ ತೆಲುಗು ಟೈಟಾನ್ಸ್‌ ತಂಡದ ಸೋಲಿನ ಸಂಖ್ಯೆ 5ಕ್ಕೇರಿದೆ. ಒಂದೇ ಒಂದು ಗೆಲುವಷ್ಟೇ ಟೈಟಾನ್ಸ್‌ಗೆ ಸಿಕ್ಕಿರುವುದು. ಪಾಟ್ನಾ 2 ಪಂದ್ಯಗಳನ್ನು ಆಡಿ 2ರಲ್ಲೂ ಗೆದ್ದು ಅಂಕವನ್ನು 10ಕ್ಕೆ ಏರಿಸಿಕೊಂಡಿದೆ.

ನಾಗ್ಪುರದಲ್ಲಿ ಇಂದಿನಿಂದ ಬೆಂಗಳೂರು ಚರಣ: ಜು.28ಕ್ಕೆ ಆರಂಭವಾದ ಹೈದರಾಬಾದ್‌ ಚರಣ ಅಂತ್ಯಗೊಂಡಿದೆ. ಶುಕ್ರವಾರದಿಂದ ನಾಗ್ಪುರದಲ್ಲಿ ಬೆಂಗಳೂರು ಬುಲ್ಸ್‌ ತಂಡದ ಚರಣ ಆರಂಭವಾಗಲಿದೆ. ವಾಸ್ತವವಾಗಿ ಬೆಂಗಳೂರು ಬುಲ್ಸ್‌ ತಂಡದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಕಂಠೀರವ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಅಲಭ್ಯತೆ ಹಿನ್ನಲೆಯಲ್ಲಿ ಬೆಂಗಳೂರು ಪಂದ್ಯಗಳನ್ನು ನಾಗ್ಪುರಕ್ಕೆ ವರ್ಗಾಯಿಸಲಾಗಿತ್ತು. ಇದು ಬೆಂಗಳೂರು ಕಬಡ್ಡಿ ಅಭಿಮಾನಿಗಳ ಭಾರೀ ನಿರಾಶೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next