ಪಟ್ನಾ : ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಕೂಡಿಕೊಂಡು ಹೊಸ ಸಮ್ಮಿಶ್ರ ಸರಕಾರ ರಚಿಸಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ಜನತಾ ದಳ ಸಲ್ಲಿಸಿದ್ದ ಅರ್ಜಿಯನ್ನು ಪಟ್ನಾ ಹೈಕೋರ್ಟ್ ವಜಾ ಮಾಡಿದೆ.
ಆರ್‌ಜೆಡಿ ಶಾಸಕ ಸರೋಜ್ ಯಾದವ್ ಅವರು ಕಳೆದ ಜು.28ರ ಶುಕ್ರವಾರದಂದು ಈ ಅರ್ಜಿಯನ್ನು ಸಲ್ಲಿಸಿದ್ದರು. ಆ ದಿನ ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿತ್ತು. ಆದರೆ ಯಾವುದೇ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
ಜುಲೈ 31ರ ವರೆಗೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಅಸಾಧ್ಯ ಎಂಬ ಕಾರಣ ನೀಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸದನ ಬಲಾಬಲ ಪರೀಕ್ಷೆಗೆ ತಡೆಯಾಜ್ಞೆ ನೀಡಲಾಗದೆಂದು ಕೋರ್ಟ್ ಹೇಳಿತ್ತು.
ಕಳೆದ ವಾರದ ಹಠಾತ್ ಬೆಳವಣಿಗೆಯಲ್ಲಿ ಬಿಹಾರದ ಮಹಾ ಘಟಬಂಧನದ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರು, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ, ಉಪ ಮುಖ್ಯಮಂತ್ರಿ, ಭ್ರಷ್ಟಾಚಾರ ಕಳಂಕಿತ ತೇಜಸ್ವಿ ಯಾದವ್ ವಿರುದ್ದ ಸಿಬಿಐ ಎಫ್ಐಆರ್ ದಾಖಲಿಸಿರುವುದನ್ನು ಪರಿಗಣಿಸಿ ತಮ್ಮ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿದ್ದರು.
ಅನಂತರದಲ್ಲಿ ಬಿಜೆಪಿ ಜತೆಗೆ ನಡೆದಿದ್ದ ಮಿಂಚಿನ ಮೈತ್ರಿಯಲ್ಲಿ ನಿತೀಶ್ ಕುಮಾರ್ ಅವರು ಹೊಸ ಸಮ್ಮಿಶ್ರ ಸರಕಾರವನ್ನು ಸ್ಥಾಪಿಸಿದ್ದರು.