ಯಕ್ಷಗಾನಕ್ಕೆ ಆಕರ್ಷಣೆ ಮತ್ತು ಮಹತ್ವ ನೀಡುವ ನೆಲೆಯಲ್ಲಿ ವಿಶೇಷವಾಗಿ ತೊಡಗಿಸಿಕೊಂಡ ಪಟ್ಲ ಸತೀಶ್ ಶೆಟ್ಟಿ ಅವರು ತುಳು ಸಿನೆಮಾದಲ್ಲಿಯೂ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಈಗಾಗಲೇ ಒಂದೆರಡು ತುಳು ಸಿನೆಮಾಗಳಲ್ಲಿ ಭಾಗವತಿಕೆ ಶೈಲಿಯಲ್ಲಿ ಸ್ವರಮಾಧುರ್ಯ ಹರಿಸಿದ ಪಟ್ಲ ಅವರು ತುಳು ಸಿನಿಪ್ರಿಯರ ಮನಸ್ಸು ಗೆದ್ದಿದ್ದಾರೆ.
ಇದೀಗ ಬಿಡುಗಡೆಗೆ ಸಿದ್ಧವಾಗಿರುವ “ಆಟಿಡೊಂಜಿ ದಿನ’ ಸಿನೆಮಾದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರ ಕಂಠಸಿರಿಯಿದೆ. ಸುಶ್ರಾವ್ಯ ಹಾಡಿನ ಮೂಲಕ ಮನೆಮಾತಾದ ಪಟ್ಲ ಇದೀಗ ಆಟಿಡೊಂಜಿ ದಿನದ ಮೂಲಕವೂ ಪ್ರೇಕ್ಷಕರ ಮನಸ್ಸು ಗೆಲ್ಲಲು ಸಿದ್ಧರಾಗಿದ್ದಾರೆ.
ಆಟಿಡೊಂಜಿ ದಿನ.. ಪಾಳೆದ ಕೊಡೆಟ್ ಊರಿಡೀ ತಿರುಗುವ ಕಳಂಜಾ… ತುಳುವೆರೆ ಊರುದ ಮಾರಿನ್ ಗಿಡತ್‌ದ್ ಪಾಳೆದ ಮದ್ì ಕೊರು ಕಳಂಜಾ… ಮಾಯಂದರಸು ಮಗೆ ಮಾಯೊಡು ಪುಟ್ಟಿಯೇ, ಪತ್ತೆ ಕಾಲೊಡು ಪದಿನಾಜಿ ಪ್ರಾಯೊಡು ಮಾರಿಗ್ ದಾನೇವು ಕಳಂಜಾ… ಬೀರಿಗ್ ದಾನೇವು ಕಳೆಂಜಾ..’ ಎಂಬ ಹಾಡು ಪಟ್ಲರಿಂದ ಧ್ವನಿಮುದ್ರಣಗೊಂಡಿದೆ.
ಈ ಹಾಡನ್ನು ಸಂಗೀತ ನಿರ್ದೇಶಕ ರಾಜೇಶ್ ಭಟ್ ಬರೆದಿದ್ದು, ಸಂಗೀತವೂ ಅವರದ್ದೇ ಆಗಿದೆ. ಭವಿಷ್ ಆರ್.ಕೆ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾದ “ಆಟಿಡೊಂಜಿ ದಿನ’ ತುಳು ಸಿನೆಮಾ ಮುಂದಿನ ತಿಂಗಳು ತೆರೆಮೇಲೆ ಬರಲು ಸಿದ್ಧತೆ ಮಾಡಿ ಕೊಂಡಿದೆ. ಕೋಸ್ಟಲ್‌ವುಡ್‌ನಲ್ಲಿ ಬಹುನಿರೀಕ್ಷೆ ಮೂಡಿಸಿರುವ ಬೆರಳೆಣಿಕೆ ಸಿನೆಮಾಗಳ ಪೈಕಿ “ಆಟಿ ಡೊಂಜಿ ದಿನ’ ಕೂಡ ಒಂದಾಗಿರು ವುದರಿಂದ ಸಿನೆಮಾದ ಬಗ್ಗೆ ಈಗಲೇ ಕುತೂಹಲ ಶುರುವಾಗಿದೆ. ರಾಧಾಕೃಷ್ಣ ನಾಗರಾಜು ಮತ್ತು ಚೈತ್ರ ರಾಧಾಕೃಷ್ಣ ಚಿತ್ರ ನಿರ್ಮಿಸಿದ್ದು,
ಆಕಾಶ್ ಹಾಸನ್ ಸಹನಿರ್ದೇಶನ ಹಾಗೂ ಕಾರ್ಯಕಾರಿ ನಿರ್ಮಾಪಕರು. ಈ ಸಿನೆಮಾವನ್ನು ಆರಂಭದಲ್ಲಿ ಹ್ಯಾರಿಸ್ ಕೊಣಾಜೆಕಲ್ಲು ನಿರ್ದೇಶಿಸಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ ಪ್ರಸ್ತುತ ಎ.ಎಸ್ ವೈಭವ್ ಪ್ರಶಾಂತ್ ಅವರು ನಿರ್ದೇಶನ ಜವಾಬ್ದಾರಿ ವಹಿಸಿಕೊಂಡು ಸಿನೆಮಾ ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್‌ಗೆ ಕಳುಹಿಸಲಾಗಿದೆ.