ಪುಣೆ: ಸುಮಧುರ ಕಂಠ ಸಿರಿಯೊಂದಿಗೆ ಕರಾವಳಿಯ ಅಳಿವಿನಂಚಿನಲ್ಲಿರುವ ಸರ್ವಾಂಗ ಸುಂದರ ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸಿ ಕಲೆಗೆ ವಿಶೇಷ ಕೊಡುಗೆ ನೀಡಿದ ಪಟ್ಲ ಸತೀಶ್ ಶೆಟ್ಟಿಯವರ ಸಾಧನೆ ಅಗಾಧವಾದುದು. ಯಕ್ಷಗಾನವೆಂದರೆ ಅದೊಂದು ಜೀವನಕ್ಕೆ ಸಂಸ್ಕಾರವನ್ನು ನೀಡುವ ಕಲೆಯೆಂದರೂ ತಪ್ಪಾಗಲಾರದು. ಕಲೆಯನ್ನು ಅತಿಯಾಗಿ ಪ್ರೀತಿಸುವ ಅವರು ಕಲೆಗಾಗಿ ಸೇವೆ ಸಲ್ಲಿಸಿದ ಮಹಾನ್ ಕಲಾವಿದರ ಕಷ್ಟಗಳನ್ನು ಅರಿತುಕೊಂಡು ಅವರ ವೇದನೆಗೆ ಸ್ಪಂದಿಸುವ ಅವರ ನಿಸ್ವಾರ್ಥ ಸೇವೆ ಅಭಿನಂದನೀಯವಾಗಿದೆ. ಅವರ ಈ ಮಹತ್ಕಾರ್ಯಕ್ಕೆ ನಮ್ಮಿಂದಾದ ಸಹಕಾರವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಬೆಟ್ಟು ನುಡಿದರು.
ಆ. 2ರಂದು ನಗರದ ಕೊರೊನೆಟ್ ಹೊಟೇಲ್ ಸಭಾಂಗಣದಲ್ಲಿ ಮುಂಬಯಿ ಯಲ್ಲಿ ಪಟ್ಲ ಸಂಭ್ರಮ ಪ್ರಯುಕ್ತ ಪುಣೆ ಬಂಟರ ಸಂಘ ಹಮ್ಮಿಕೊಂಡ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಸ್ವಾರ್ಥವಿಲ್ಲದೆ ಆಡಂಬರದ ಸಮಾಜ ಸೇವೆಯಾಗದೆ ಅಗತ್ಯದ ನೆಲೆಯಲ್ಲಿ ಕಟ್ಟಕಡೆಯ ಬಡ ಕಲಾವಿದನ ಜೀವನಕ್ಕೆ ಆಸರೆಯಾಗುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕಾರ್ಯ ಪ್ರತಿಯೊಬ್ಬರ ಕಣ್ಣು ತೆರೆಸುವಂತಿದೆ. ಫೌಂಡೇಶನ್ ವತಿಯಿಂದ ಬಡ ಕಲಾವಿದರ ಬವಣೆ ನೀಗುವಂತಾಗಲಿ. ನಮ್ಮ ಸಂಘದ ಭವನ ಲೋಕಾರ್ಪಣೆಗೊಂಡ ಅನಂತರದಲ್ಲಿ ಪುಣೆಯಲ್ಲಿ ಪಟ್ಲ
ಫೌಂಡೇಶನ್ ಘಟಕವನ್ನು ಆರಂಭಿಸಿ ಕಲಾಸೇವೆಗಾಗಿ ತೊಡಗಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.
ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, ಮನುಷ್ಯನೊಬ್ಬ ಯಾವುದೇ ಉನ್ನತ ಮಟ್ಟಕ್ಕೇರಿದರೂ ಅವನಲ್ಲಿ ಸಂಸ್ಕಾರವಿಲ್ಲದಿದ್ದರೆ ಪ್ರಯೋಜನವಿಲ್ಲ. ಸಂಸ್ಕಾರವಂತನಾದರೆ ಅನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ತಾನಾಗಿಯೇ ಬರುತ್ತದೆ. ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನಗಳಂತಹ ಕಲಾಪ್ರಕಾರಗಳಿಂದ ನಮ್ಮಲ್ಲಿ ಸಂಸ್ಕಾರ ಮೂಡುತ್ತದೆ. ಎಷ್ಟೋ ಕಲಾವಿದರು ಬಹಳಷ್ಟು ಕಷ್ಟಗಳನ್ನು ಸಹಿಸಿಕೊಂಡು ಕಲಾಸೇವೆ ಮಾಡಿರುವುದರಿಂದಲೇ ಇಂದಿಗೂ ನಮ್ಮ ಯಕ್ಷಗಾನ ಕಲೆ ಸಮೃದ್ಧವಾಗಿ ಬೆಳೆದಿದೆ. ಆದರೆ ಅಂತಹ ಮಹಾನ್ ಕಲಾವಿದರು ಇಂದು ಜೀವನದಲ್ಲಿ ಅಸಹಾಯಕರಾಗಿ, ರೋಗ-ರುಜಿನಗಳಿಂದ ಆರ್ಥಿಕ ಸಂಕಷ್ಟಗಳಿಂದ ಪರಿತಪಿಸುತ್ತಿದ್ದಾರೆ. ಅವರಿಗೆ ಯಾವುದೇ ಸಂಘ ಸಂಸ್ಥೆಗಳಾಗಲೀ, ಸರಕಾರವಾಗಲೀ ನೆರವು ನೀಡುವುದಿಲ್ಲ. ಅಂತಹ ಕಲಾವಿದರಿಗೆ ಆಸರೆಯಾಗಿ ಅವರ ಜೀವನಕ್ಕೆ ನೆರವು ನೀಡುವ ಉದ್ದೇಶದಿಂದ ಪಟ್ಲ ಫೌಂಡೇಶನ್ ಸ್ಥಾಪನೆಯಾಗಿದ್ದು ಒಂದೂವರೆ ವರ್ಷದಲ್ಲಿ ಕಲಾಭಿಮಾನಿ, ದಾನಿಗಳ ನೆರವಿನೊಂದಿಗೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಮೊತ್ತವನ್ನು ಬಡ ಕಲಾವಿದರ ಏಳಿಗೆಗೆ ನೀಡಲಾಗಿದೆ. ಭವಿಷ್ಯದಲ್ಲಿ ಫೌಂಡೇಶನ್ ವತಿಯಿಂದ ಹೆಚ್ಚಿನ ಕಾರ್ಯ ಯೋಜನೆಗಳನ್ನು ಕಲಾವಿದರಿಗಾಗಿ ಹಮ್ಮಿಕೊಳ್ಳಲಾಗಿದ್ದು, ಈ ಪುಣ್ಯದ ಕಾರ್ಯಕ್ಕೆ ಪ್ರತಿಯೊಬ್ಬರೂ ಮಾನವೀಯತೆಯ ದೃಷ್ಟಿಕೋನದೊಂದಿಗೆ ಕೈಜೋಡಿಸಿ ತಮ್ಮಿಂದಾದ ನೆರವನ್ನು ನೀಡಿ ನಮ್ಮನ್ನು ಬೆಂಬಲಿಸಬೇಕು ಎಂದರು.
ಉದಯವಾಣಿ ಮುಂಬಯಿ ಆವೃತ್ತಿಯ ಹಿರಿಯ ಉಪ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳ ಅವರು ಮಾತನಾಡಿ, ಜಾತಿ, ಮತಗಳ ಭೇದವಿಲ್ಲದೆ ಯಕ್ಷಗಾನದಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಬಡ ಕಲಾವಿದರ ವೇದನೆಗೆ ಸ್ಪಂದಿಸುವ ಏಕೈಕ ಸಂಸ್ಥೆಯಿದ್ದರೆ ಅದು ಪಟ್ಲ ಫೌಂಡೇಷನ್ ಮಾತ್ರ. ಓರ್ವ ಕಲಾವಿದನಿಂದ, ಕಲಾವಿದರಿಗೋಸ್ಕರ, ಕಲಾವಿದರಿಗಾಗಿಯೇ ಸೇವಾ ಮನೋಭಾವ ದೊಂದಿಗೆ ತೊಡಗಿಸಿಕೊಂಡ ಈ ಸಂಸ್ಥೆಯ ಮುಂದಿನ ಪಟ್ಲಾಶ್ರಯ ಯೋಜನೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಪುಣೆ, ನಾಸಿಕ್, ಬರೋಡ, ಸೂರತ್, ಅಹಮದಾಬಾದ್‌ಗಳಲ್ಲಿಯೂ ಫೌಂಡೇಶನ್‌ನ ಘಟಕ ಸ್ಥಾಪಿಸುವ ಇರಾದೆ ಫೌಂಡೇಶನ್‌ಗಿದೆ ಎಂದು ತಿಳಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ ಪೆರ್ಮುದೆ ಉಪಸ್ಥಿತರಿದ್ದರು. ಪಟ್ಲ ಸತೀಶ್ ಶೆಟ್ಟಿ ಅವರನ್ನು ಸಂತೋಷ್ ಶೆಟ್ಟಿ ಅವರು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಪುಷ್ಪಗುತ್ಛವನ್ನಿತ್ತು ಸಮ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಲಫೌಂಡೇಶನ್ ಟ್ರಸ್ಟ್ ಮಂಗಳೂರು ಘಟಕದ ಜಗದೀಶ್ ಶೆಟ್ಟಿ, ಸತೀಶ್ ಶೆಟ್ಟಿ, ಪುಣೆ ಬಂಟರ ಸಂಘದ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ, ಅಂತಾರಾಷ್ಟ್ರೀಯ ಮಾನವಾಧಿಕಾರ ಅಸೋಸಿಯೇಟ್ಸ್ ಇದರ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.