ಬಾಗಲಕೋಟೆ: ಮುಂದಿನ ಚುನಾವಣೆಯಲ್ಲಿ “ನಾನು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳುವ ಮೂಲಕ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಬಹಿರಂಗವಾಗಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮವನ್ನು ಒಡೆದು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶದಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸುತ್ತಿರುವುದು ದುಃಖಕರ ಸಂಗತಿ ಎಂದರು.
ಲಿಂಗಾಯತ ಸ್ವತಂತ್ರ ಧರ್ಮವೇ ಅಲ್ಲ. ಇರೋದು ಒಂದೇ ಧರ್ಮ ಅದು ವೀರಶೈವ ಧರ್ಮ. ಬಸವಣ್ಣನವರು ವೀರಶೈವ ಎಂಬ ಪದ ಬಳಸಿದ್ದಾರೆ. ಅವರು ಲಿಂಗಾಯತ ಎಂಬ ಪದ ಬಳಸಿಯೇ ಇಲ್ಲ. ಆದರೂ ಬಸವಣ್ಣನವರ ಹೆಸರಿನಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ದಾಖಲೆ ತೋರಿಸಲು ಬ್ರಿಟಿಷರ ಲೇಖನಿ ಮುಖ್ಯವಲ್ಲ. ನಾಡಿನ ಶರಣರ ವಚನಗಳಲ್ಲಿ ಇನ್ನೂರು ಬಾರಿ ವೀರಶೈವ ಪದ ಬಳಸಿದ್ದಾರೆ. ಇವೇ ನಿಜವಾದ ದಾಖಲೆಗಳು. ಬಸವಣ್ಣನವರ ಭಾವಚಿತ್ರವಿಟ್ಟು ಪೂಜೆ ಮಾಡುವುದು ಮುಖ್ಯವಲ್ಲ. ಅವರ ತತ್ವಗಳನ್ನು ಅನುಸರಿಸುವುದು ಮುಖ್ಯ. ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ರಾಜ್ಯದಲ್ಲಿ ಎದ್ದಿರುವ ವಿವಾದವನ್ನು ಶೀಘ್ರವೇ ಇತ್ಯರ್ಥಗೊಳ್ಳಲಿದೆ. ನಾವೆಲ್ಲ ಸೇರಿ ಡಿ.24ರಂದು ಗದಗದಲ್ಲಿ ವೀರಶೈವ ಸಮಾವೇಶ ನಡೆಸಿ ಇದಕ್ಕೆ ಪೂರ್ಣ ವಿರಾಮ ಇಡುತ್ತೇವೆ ಎಂದರು.