ಆಳಂದ: ಸಾರ್ವಜನಿಕರು ನೀಡುವ ಸಹಕಾರ, ಸಲಹೆ ಸೂಚನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಅನುಷ್ಠಾನಗೊಳಿಸಿದ್ದೇ ಕೊರಳ್ಳಿ ಗ್ರಾಪಂ ಮಾದರಿ ಕಾರ್ಯಕ್ಕೆ ಕಾರಣವಾಗಿದೆ ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಹೇಳಿದರು. ತಾಲೂಕಿನ ಕೊರಳ್ಳಿ ಗ್ರಾಪಂನಲ್ಲಿ ಜಿಪಂ, ತಾಪಂ, ಗ್ರಾಪಂನಿಂದ ಆಯೋಜಿಸಿದ್ದ ಕೋವಿಡ್ ಸೂಕ್ತ ನಿರ್ವಹಣೆಗೆ ಆಕ್ಸಿಜನ್ ಕಾನ್ಸ್‌ಂಟ್ರೇಟರ್ ಯಂತ್ರದ ಉಚಿತ ವಿತರಣೆಯ ಉದ್ಘಾಟನೆ, ಸ್ವತ್ಛ ಭಾರತ ಮಿಷನ್ ಅಡಿಯಲ್ಲಿ ಕಸವಿಲೇವಾರಿ ವಾಹನ ಬಿಡುಗಡೆ ಹಾಗೂ ಗ್ರಾಹಕರಿಗೆ ಕಸ ಸಂಗ್ರಹ ಡಬ್ಬಿಗಳ ವಿತರಣೆ, ಸಾವಿರ ರೈತರಿಗೆ ಉಚಿತ ಸಿರಿಧಾನ್ಯ ಬೀಜ, ಸಸಿಗಳ ವಿತರಣೆ ಕೈಗೊಂಡು ಅವರು ಮಾತನಾಡಿದರು. ಗ್ರಾಪಂ ಆಡಳಿತ ಮಂಡಳಿಯಿಂದ ಸರ್ಕಾರದ ಯೋಜನೆಗಳನ್ನು ಭ್ರಷ್ಟಾಚಾರ ರಹಿತ, ಪಾರದರ್ಶಕವಾಗಿ ಜಾರಿಗೆ ತರಲು ಚಾಲನೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಪ್ರತಿಯೊಂದು ಯೋಜನೆಗಳ ಕಾಮಗಾರಿ, ಖರ್ಚು ವೆಚ್ಚದ ಕುರಿತು ಪ್ರತಿ ಸದಸ್ಯರ ಮೂಲಕ ಲೆಕ್ಕಪತ್ರಗಳನ್ನು ವಾರ್ಡ್‌ನ ಜನರಿಗೆ ತಲುಪಿಸಲಾಗುವುದು ಎಂದರು. ಕಾರ್ಮಿಕರಿಗಾಗಿ ಉದ್ಯೋಗ ಖಾತ್ರಿ ಸದ್ಬಳಕೆ, 14, 15ನೇ ಹಣಕಾಸು, ಗ್ರಾಪಂ ಅನುದಾನ ಸದ್ಬಳಕೆ ಹೀಗೆ ಇನ್ನುಳಿದ ಯೋಜನೆಗಳಲ್ಲಿ ಸದಸ್ಯರಿಗೆ ಕೆಲಸದ ಮೇಲುಸ್ತುವಾರಿ ವಹಿಸಲಾಗಿದೆ. ಅಲ್ಲದೇ ಎಲ್ಲ ಸದಸ್ಯರ ವಾರ್ಡ್‌ಗಳು ಸೇರಿ ಸುಮಾರು 15 ಸಾವಿರ ಸಸಿಗಳನ್ನು ನೆಡುವ ಜವಾಬ್ದಾರಿ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ ಡಾ| ಲಕ್ಷ¾ಣ ಕೌಂಟೆ ಮಾತನಾಡಿ, ಗ್ರಾಪಂ ಮಾದರಿ ಕಾರ್ಯಗಳು ಪ್ರಸ್ತುತವಾಗಿವೆ. ಜನರು ತಮ್ಮ ಆರೋಗ್ಯದ ಜೊತೆಗೆ ಶಿಕ್ಷಣ, ಪರಿಸರ, ಕೃಷಿ ಕಾರ್ಯಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ| ಅತ್ತಾರ ಅವರು ಆಕ್ಸಿಜನ್ ಕಾನ್ಸ್‌ಂಟ್ರೇಟರ್ ಯಂತ್ರದ ಉದ್ಘಾಟನೆ ಕೈಗೊಂಡು, ಕೋವಿಡ್‌ನಂತ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಆಕ್ಸಿಜನ್ ಕಾನ್ ಟ್ರೇಟ್‌ರ ಮಹತ್ವದ್ದಾಗಿದೆ. ಇದನ್ನು ಮೊದಲ ಬಾರಿಗೆ ಸಾರ್ವಜನಿಕ ಸೇವೆಗಾಗಿ ಮೀಸಲಿಟ್ಟಿ ಕೊರಳ್ಳಿ ಪಂಚಾಯತ್ ಕಾರ್ಯ ಶ್ಲಾಘನೀಯ ಎಂದರು. ಗ್ರಾಪಂ ಪಿಡಿಒ ಸಿದ್ಧರಾಮ ಬಿ. ಚಿಂಚೋಳಿ ಆಡಳಿತ ಮಂಡಳಿ ಕೈಗೊಂಡ ಯೋಜನೆಗಳ ಅನುಷ್ಠಾನದ ವಿವರಣೆ ನೀಡಿದರು.
ಗ್ರಾಪಂ ಅಧ್ಯಕ್ಷ ಸುಭಾಷ ಸೇವು ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಬಿ. ಪಾಟೀಲ, ಚಂದ್ರಯ್ಯ ಸ್ವಾಮಿ, ಶಿವರುದ್ರಪ್ಪ ಪೊಲೀಸ್ ಪಾಟೀಲ, ಕುಶಪ್ಪ, ಎಂ.ಎನ್. ಪೋದ್ದಾರ, ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಗ್ರಾಪಂ ಸದಸ್ಯ ಗುರುರಾಜ ಎಸ್. ಪಾಟೀಲ, ಅಶೋಕ ರಾಠೊಡ, ಶರಣಬಸಪ್ಪ ಅಂಬಾಜಿ, ರವಿ ವಾಲಚಂದ ನಾಯಕ, ಮಾನು ಪವಾರ, ಕೇಶವ ಧನ್ನಸಿಂಗ್, ಬೇಬಿ ರಾಠೊಡ, ಸುಶಿಲಾಬಾಯಿ ತುಕಾರಾಮ, ಶ್ರೀಕಾಂತ ವಾರದ ಹಾಗೂ ರೈತರು ಪಾಲ್ಗೊಂಡಿದ್ದರು. ಹಣಮಂತರಾವ್ ಕೆ. ಮದಗುಣಕಿ ನಿರೂಪಿಸಿದರು. ಸರ್ವೇಶ ಚೌಲ, ಬಸವರಾಜ ಬಿರಾದಾರ ಸ್ವಾಗತಿಸಿದರು. ಗ್ರಾಪಂ ಸದಸ್ಯ ಶ್ರೀಮಂತ ದೇವ ವಂದಿಸಿದರು.