ಗದಗ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ರಾಜ್ಯದ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ಹಲವು ಜಿಲ್ಲೆಗಳು ಜಲ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಮುಖ್ಯಮಂತ್ರಿ ತಮ್ಮ ದೆಹಲಿ ಭೇಟಿ ರದ್ದು ಮಾಡಿ ನೆರೆ ಸಂತ್ರಸ್ತರ ಪರಿಹಾರ ಕ್ರಮಗಳ ಬಗ್ಗೆ ಗಮನಹರಿಸಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಮಹಾರಾಷ್ಡ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣ ಕೊಳ್ಳದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಾಜ್ಯದ ಬೆಳಗಾವಿ ಜಿಲ್ಲೆಯ 37 ಗ್ರಾಮಗಳು ಪ್ರವಾಹ ಪರಿಸ್ಥಿತಿಯಿಂದ ತೀವ್ರ ಸಂಕಷಕ್ಕೆ ಈಡಾಗಿವೆ. 39 ಗ್ರಾಮಗಳು ಭಾಗಶಃ ಭಾದಿತವಾಗಿವೆ.
ಚಿಕ್ಕೋಡಿ ತಾಲೂಕು ಕಲ್ಲೋಳ, ಯಡೂರು, ಇಂಗಳ, ಚಂದೂರು, ಮಾಂಜರಿ, ಬಾರವಾಡ, ಹನ್ನರಗಿ, ರಾಯಭಾಗದ ತಾಲೂಕು ಹಳೇದಿಗ್ಗೇವಾಡಿ, ಗುಂಡವಾಡ, ಶಿರಗೂರ, ಖೇಮಲಾಪುರ, ಸಿದ್ದಾಪುರ, ಅಥಣಿ ತಾಲೂಕು ಮುಳವಾಡ, ಕುಸನಾಳ, ಕೃಷ್ಣ ಕಿತ್ತೂರು ಸೇರಿದಂತೆ ಇನ್ನಿತರೆ ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು, ಪರಿಹಾರ ಕ್ರಮಗಳು ಅಗತ್ಯವಾಗಿವೆ. ಅದರಂತೆ ಬಾಗಲಕೋಟೆ ಮುಧೋಳ ತಾಲೂಕು ಘಟಪ್ರಭಾ ನದಿ ತೀರದ ಢವಳೇಶ್ವರ, ನಂದಿಗಾಂವ, ಮಿರ್ಜಿ ಸೇತುವೆಗಳು ಮುಳುಗಡೆಯಾಗಿವೆ. ಜಮಖಂಡಿ ತಾಲೂಕಿನ ಮುತ್ತೂರು, ಕಂಕನವಾಡಿ ಮುಳುಗಿರುವುದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಂಚಾರಕ್ಕೆ ವಿಶೇಷ ದೋಣಿಗಳ ವ್ಯವಸ್ಥೆ ಮಾಡಬೇಕಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಶೀಲಹಳ್ಳಿ ಕಳೆದ ಐದು ದಿನಗಳಿಂದ ಮುಳುಗಡೆಯಾಗಿದೆ. ಕರಕಲಗಡ್ಡೆ ಮತ್ತು ಕಡದರಗಡ್ಡೆ ಸೇರಿ ಹಲವು ಗ್ರಾಮಗಳ ಜನರು ಸಂಪರ್ಕ ಕಳೆದುಕೊಂಡಿದ್ದಾರೆ. ಹೂವಿನಹೆಡಗಿ ಜಲಾವೃತವಾಗಿದ್ದು, ದೇವದುರ್ಗ ಮತ್ತು ಕಲಬುರ್ಗಿ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ದೇವದುರ್ಗ ಸಮೀಪದ ಗುಡ್ಡಗೂಳಿ ಬಸವಣ್ಣ ಮತ್ತು ಕೊಪ್ಪರದ ಲಕ್ಷ್ಮೀ ನರಸಿಂಹ ದೇವಾಲಯಗಳು ಜಲಾವೃತವಾಗಿವೆ. ಆಯಾ ಗ್ರಾಮಸ್ಥರು ಪ್ರವಾಹ ಪರಿಸ್ಥಿತಿ ಬಹಳ ಎದುರಿಸುವಂತಾಗಿದೆ. ಹೀಗಾಗಿ ನೆರೆ ಸಂತ್ರಸ್ತರ ಅನುಕೂಲಕ್ಕಾಗಿ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಆದರೆ, ರಾಜ್ಯದ ಆಡಳಿತ ಯಂತ್ರಾಂಗ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ದೆಹಲಿ ಪ್ರವಾಸ ರದ್ದುಗೊಳಿಸಿ ನೆರೆ ಪೀಡಿತ ಪ್ರದೇಶಗಳಿಗ ಭೇಟಿ ನೀಡಿ ಪರಿಹಾರ ಕ್ರಮಗಳಿಗೆ ಎನ್‌ಡಿಆರ್‌ಎಫ್, ದೋಣಿ ರಕ್ಷಣಾ ತಂಡಗಳನ್ನು ಜನರ ರಕ್ಷಣೆಗೆ ಸನ್ನದ್ಧಗಿಳಿಸಬೇಕು. ಅದರರೊಂದಿಗೆ ಪ್ರಧಾನಿಯವರನ್ನೂ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕರೆತರಬೇಕು ಎಂದು ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ ಆಗ್ರಹಿಸಿದ್ದಾರೆ.