Advertisement

ಬಂಡಾಯದ ಮಧ್ಯೆ ಗೆದ್ದ ಪಾಟೀಲ ಪುಟ್ಟಪ್ಪ

06:55 AM Mar 05, 2018 | Team Udayavani |

ಧಾರವಾಡ: ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಪ್ರಚಂಡ ಗೆಲುವು ಸಾಧಿಸಿದ್ದು, ಸತತ 17ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

Advertisement

ದಶಕಗಳಿಂದ ಸಂಘದ ಅಧ್ಯಕ್ಷ ಸ್ಥಾನ ಉಳಿಸಿಕೊಂಡೇ ಬಂದಿರುವ ಪಾಪು, ಈ ಸಲವೂ ತಮ್ಮ ಅಧ್ಯಕ್ಷಗಿರಿ ಮುಂದುವರಿಸುವುದರ ಜತೆಗೆ ತಾವೇ ರಚಿಸಿಕೊಂಡಿದ್ದ ತಮ್ಮ ಬಣದ ಬಹುತೇಕ ಸದಸ್ಯರೆಲ್ಲ ಗೆಲ್ಲುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆದ ಬಿರುಸಿನ ಮತದಾನದ ಬಳಿಕ ಸಂಜೆ 4:30ರಿಂದ ಮತ ಏಣಿಕೆ ಆರಂಭಗೊಂಡಿತು. 

ಆರಂಭದಿಂದಲೂ ಮುನ್ನಡೆ ಸಾಧಿಸಿಕೊಂಡೇ ಬಂದ ಪಾಪು (1985 ಮತ), ಅಧ್ಯಕ್ಷ ಸ್ಥಾನದ ತಮ್ಮ ಪ್ರತಿಸ್ಪರ್ಧಿ ಬಿ.ಎಸ್‌.ಶಿರೋಳ (1228 ಮತ) ಅವರನ್ನು ಮಣಿಸಿ ಜಯ ಸಾಧಿಸಿದರು.

ಪ್ರತಿ ಸಲದ ಚುನಾವಣೆಯಲ್ಲಿ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೇ ಸ್ವತಂತ್ರವಾಗಿ ನಿಂತು ಕಳೆದ 50 ವರ್ಷಗಳಿಂದ ಅಧ್ಯಕ್ಷಗಿರಿ ನಡೆಸುತ್ತಾ ಬಂದಿದ್ದ ಪಾಪು, ಈ ಸಲದ ಚುನಾವಣೆಯಲ್ಲಿ ತಮ್ಮದೇ ಒಂದು ಬಣ ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇದೇ ವೇಳೆ, ಸಮಾನ ಮನಸ್ಕರ ವೇದಿಕೆ ರಚಿಸಿಕೊಂಡ ಇನ್ನೊಂದು ಬಣವು, ಪಾಪು ಬಣದ ವಿರುದ್ಧ ಕಣಕ್ಕೆ ಇಳಿದಿತ್ತು. ಇದಲ್ಲದೇ ಕವಿ ನಾಡೋಜ ಡಾ.ಚೆನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ್‌ ಸೇರಿ ಹಲವು ಸಾಹಿತಿಗಳು ಸಹ ಈ ಸಲ ಪಾಪು ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿದ್ದರು. ಇದೆಲ್ಲವನ್ನೂ ಮೆಟ್ಟಿ ನಿಂತಿರುವ ಪಾಪು, ತಮ್ಮ ಬಣದ ಬಹುತೇಕ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವಿನ ನಗೆ ಬೀರುವಂತೆ ಮಾಡಿದ್ದು ವಿಶೇಷವಾಗಿದೆ.

ಪಾಪು ಬಣದ ಕೋಶಾಧ್ಯಕ್ಷ ಸ್ಥಾನಕ್ಕೆ ಕೃಷ್ಣ ಜೋಶಿ (2088 ಮತ), ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಕಾಶ ಉಡಿಕೇರಿ(1525 ಮತ), ಸಹ ಕಾರ್ಯದರ್ಶಿ ಸ್ಥಾನಕ್ಕೆ ಸದಾನಂದ ಶಿವಳ್ಳಿ (1807 ಮತ), ಮಹಿಳಾ ಮೀಸಲು ಸ್ಥಾನಕ್ಕೆ ಪ್ರಫುಲಾ ನಾಯಕ (1790 ಮತ) ಹಾಗೂ ಎಸ್‌ಸಿ-ಎಸ್‌ಟಿ ಮೀಸಲು ಸ್ಥಾನಕ್ಕೆ ಎಸ್‌.ಬಿ.ಗಾಮನಗಟ್ಟಿ (1016 ಮತ) ಸೇರಿ ಕಾರ್ಯಕಾರಿ ಸಮಿತಿಯಲ್ಲೂ ಕೂಡ ಪಾಪು ಬಣದ ಸದಸ್ಯರೇ ಗೆಲುವು ಸಾಧಿಸಿದ್ದಾರೆ. ಸಂಘದ 6 ಪದಾಧಿಕಾರಿಗಳ ಫಲಿತಾಂಶ ಪ್ರಕಟಗೊಂಡಿದ್ದು, ಉಳಿದಂತೆ 9 ಕಾರ್ಯಕಾರಿ ಸಮಿತಿ ಸ್ಥಾನಗಳ ಮತ ಏಣಿಕೆ ತಡರಾತ್ರಿವರೆಗೂ ಸಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next