Advertisement

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

09:55 AM Mar 28, 2020 | mahesh |

ಗುಡುಗಿದರೆ ಸಿಂಹ, ಕುಳಿತರೆ ಬುದ್ಧ, ಸಿಡಿದೆದ್ದರೆ ಸೇರಿಗೆ ಸವ್ವಾಸೇರು. ಇಂಎ ಪಾಟೀಲ ಪುಟ್ಟಪ್ಪ ಎಂಬ ಸಿಂಹ ಧ್ವನಿಯೊಂದು ಮೌನವಾಗಿದೆ. ಹಾವೇರಿ ನೆಲದ ಕುಡಿ ಪಾಪು ನಿಧನದ ಸುದ್ದಿ ಇಡೀ ಕರ್ನಾಟಕವನ್ನು ಆವರಿಸಿದರೆ, ನಾಡ ತುಂಬ ಹಬ್ಬಿದ, ನೆಲದ ಕರುಳಬಳ್ಳಿ ಬಾಡಿ ಬಿದ್ದಿದೆ ಎಂಬ ಭಾವ ಹಾವೇರಿ ನೆಲದವರಿಗೆ. ಪಾಪು ಹಾವೇರಿಯ ಹೊಕ್ಕುಳ ಬಳ್ಳಿ.

Advertisement

ಹುಟ್ಟೂರು ಕುರುಬುಗೊಂಡದಿಂದ ಆರಂಭವಾದ ಪಾಪುನ ಪುಟ್ಟ ಪುಟ್ಟ ಹೆಜ್ಜೆಗಳು ಹಲಗೇರಿ ಬ್ಯಾಡಗಿ, ಹಾವೇರಿ ಧಾರವಾಡ, ಅಮೆರಿಕದ ಕ್ಯಾಲಿಫೋರ್ನಿಯಾ ಸುತ್ತಿ ಹೆಗ್ಗುರುತುಗಳ ಬಿಟ್ಟು ಹೋದದ್ದು ಈಗ ಇತಿಹಾಸ.

ಒಂದು ಸಾತ್ವಿಕ ಸಿಟ್ಟು, ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ನಿಷ್ಠುರ ಸೆಡವು. ಅವರ ಮಾತು ಮಿಸೈಲ್‌ ಇದ್ದಂತೆ. ಶತ್ರುಪಾಳಯಕ್ಕೂ ಬೀಳಬಹುದು, ಒಮ್ಮೊಮ್ಮೆ ಮಿತ್ರಪಾಳಯಕ್ಕೂ. ಪಾಪು ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಹಾವೇರಿ ಜನರ ಬಾಯಲ್ಲಿ ಸದಾ ಇದೆ. ಹೊಸಮನಿ ಸಿದ್ಧಪ್ಪ, ಮಹಾದೇವ ಬಣಕಾರ, ಮೈಲಾರ ಮಹಾದೇವ ದಿಟ್ಟ ದನಿಗಳೊಂದಿಗೆ ಮತ್ತೂಂದು ದನಿ ಮೌನವಾಗಿದೆ.

ಹಾವೇರಿ ಎಂದರೆ ಪುಟ್ಟಪ್ಪನವರಿಗೆ ಎಲ್ಲಿಲ್ಲದ ವ್ಯಾಮೋಹ. ರಾಜಧಾನಿಯಿಂದ ಹುಬ್ಬಳ್ಳಿಗೆ ಹೊರಟರೆ, ಹಾವೇರಿ ಒಂದು ಕಡ್ಡಾಯದ ನಿಲ್ದಾಣ. ಯಾರದೋ ಮನೆಯ ಆತಿಥ್ಯ, ಮಾತು, ಹರಟೆ, ನಗು, ನಡುನಡುವೆ ಚಾಬೂಕಿನಂತಹ ಗುದ್ದು ಈ ಎಲ್ಲ ಗುಂಗಿಟ್ಟುಗಳು ಇನ್ನು ನೆನಪಿನ ಗಂಟುಗಳು.

ಹೋದಲ್ಲಿ ಬಂದಲ್ಲಿ ಹಾವೇರಿಯ ಮುನ್ಸಿಪಲ್‌ ಹೈಸ್ಕೂಲ್‌, ಅಲ್ಲಿಯ ಹುಚ್ಚಪ್ಪ ಬೆಂಗೇರಿ ಅವರು ಮತ್ತು ಶಿವರಾಮ ಕಾರಂತರು ಸಂಪಾದಿಸಿದ “ಕನ್ನಡ ಕಸ್ತೂರಿ ಕೋಶ’ ಅದೆಲ್ಲಕ್ಕಿಂತ ಹೆಚ್ಚಾಗಿ ಹೊಸಮನಿ ಸಿದ್ಧಪ್ಪನವರ ಬಗ್ಗೆ ಮಾತನಾಡದಿದ್ದರೆ ಸಮಾಧಾನವೇ ಆಗುತ್ತಿರಲಿಲ್ಲ. ಇಡೀ ದೇಶದಲ್ಲಿ ತಾನು ಕಟ್ಟಿದ ಶಾಲೆಯ ಮುನ್ಸಿಪಲ್‌ ಹೈಸ್ಕೂಲ್‌ನ ಅಡಿಗಲ್ಲಿನಲ್ಲಿ ಹೆಸರೇ ಹಾಕಿಕೊಳ್ಳದ ನಿಜ ಅರ್ಥದ ಸಮಾಜಜೀವಿ ಎಂದು ಸಿದ್ಧಪ್ಪನವರನ್ನು ಹೊಗಳುತ್ತಿದ್ದರು.

Advertisement

ಪಂ. ಜವಹಾರಲಾಲ್‌ ನೆಹರೂ ಹಾವೇರಿಗೆ ಬಂದಾಗ ಸಮಾರಂಭವೊಂದಕ್ಕೆ ತಡವಾಗಿ ಬಂದ ಕಾರಣಕ್ಕಾಗಿ “ಆರ್‌ ಯು ಮೊಘಲ್‌ ಎಂಪಾಯರ್‌?’ ಎಂದು ಕೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಿದ್ದರು. ಜೊತೆಗೆ ಗಿಡದಿಂದ ಸಾಕ್ಷಿ ಹೇಳಿಸಿದ ಹಾವೇರಿ ನ್ಯಾಯದ ಬಗ್ಗೆ ಹಲವು ಬಾರಿ ವೇದಿಕೆಯಲ್ಲಿ ಪ್ರಸ್ತಾಪಿಸುತ್ತಿದ್ದರು.

ಇದೇ ನೆಲದ ಜ್ಞಾನಪೀಠ ಪುರಸ್ಕೃತ ಡಾ. ವಿ. ಕೃ. ಗೋಕಾಕರ ಬಗ್ಗೆ ಇನ್ನಿಲ್ಲದ ಪ್ರೀತಿ. ಗೋಕಾಕರ ಹೆಸರಿನಲ್ಲಿ ಕರ್ನಾಟಕ ಸರಕಾರ ಸ್ಥಾಪಿಸಿದ ಡಾ. ವಿ.ಕೃ.ಗೋಕಾಕರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾಗಿ ಹಲವು ನೆನಪಿಡುವ ಕೆಲಸಗಳನ್ನು ಮಾಡಿದ್ದರು. ಹಾವೇರಿ, ಧಾರವಾಡ ಹಾಗೂ ಸವಣೂರಿನಲ್ಲಿ ಆಳೆತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗೋಕಾಕರನ್ನು ಅವರ ನೆಲದಲ್ಲಿಯೇ ಚಿರಕಾಲ ನೆನಪುಳಿಯುವಂತೆ ಮಾಡಿದ ಕೀರ್ತಿ ಪಾಪು ಅವರದು.

ಹಾವೇರಿಯ ಗುರುಭವನದೆದುರು ಗೋಕಾಕರ ಮೂರ್ತಿಯನ್ನು ಪ್ರತಿಷ್ಠಾಪಿಸಿದಾಗ ಗುರುಭವನದೆದುರು ಕನ್ನಡದ ಗುರು ಗೋಕಾಕರ ಮೂರ್ತಿ ಎಂದು ಉದ್ಗರಿಸಿದ್ದರು. ಅತ್ಯಂತ ಸ್ಮ‌ರಣೀಯ ಕೆಲಸವೆಂದರೆ ಮೂರೂವರೆ ಕೋಟಿ ಅಂದಾಜಿನ ಗೋಕಾಕ್‌ ಭವನದ ಕೆಲಸ. ಈಗಾಲೇ ಅದು ಸಿದ್ಧವಾಗಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಉದ್ಘಾಟಿಸಿದ್ದರು. ಗೋಕಾಕ್‌ರ ಫೋಟೊ ಗ್ಯಾಲರಿ, ಅವರು ಬಳಸುತ್ತಿದ್ದ ಸಾಮಗ್ರಿಗಳ ಮ್ಯೂಜಿಯಂ, ಗೋಕಾಕ್‌ರ ಸಮಗ್ರ ಸಾಹಿತ್ಯ ಗ್ರಂಥಾಲಯ ಮುಂತಾದುವನ್ನು ಪೂರ್ಣಗೊಳಿಸುವ ಕನಸು ಪಾಪು ಅವರದ್ದಾಗಿತ್ತು.

ಗೋಕಾಕ್‌ ಚಳವಳಿ ಯಶಸ್ವಿಯಾದ ನಂತರ ಮೊದಲ ಬಾರಿ ಗೋಕಾಕರು ಪಾಟೀಲ ಪುಟ್ಟಪ್ಪನವರನ್ನು ಭೇಟಿಯಾದಾಗ “ಐ ಸೆಡ್‌ ಇಟ್‌, ಬಟ್‌ ಯು ಡಿಡ್‌ ಇಟ್‌’ ಎಂದು ಅಪ್ಪಿಕೊಂಡಿದ್ದನ್ನು ಪಾಪು ಸದಾ ಸ್ಮರಿಸುತ್ತಿದ್ದರು.

ಹಾವೇರಿಗೆ ಬಂದರೆ ಬಸೆಗಣ್ಣಿ ಕುಟುಂಬ, ಹಿರಿಯ ಲೇಖಕಿ ಸಂಕಮ್ಮ ಸಂಕಣ್ಣನವರ, ಎಸ್‌ಎಫ್ಎನ್‌ ಗಾಜೀಗೌಡ್ರ ಕಡ್ಡಾಯವಾಗಿ ಭೇಟಿಯಾಗಲೇಬೇಕು. ಸಂಗೂರಿನ ಬಸೆಗಣ್ಣಿ ಮನೆಯ ಕೆನೆ ಮೊಸರು ತಿಂದು ಹೋದರೆ ಅವರಿಗೆ ಸಮಾಧಾನ. ಹೊಸಮನಿ ಸಿದ್ಧಪ್ಪನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಹೋರಾಡಿದ ಗಾಜೀಗೌಡ್ರ ಬಗ್ಗೆ ವಿಶೇಷ ಪ್ರೀತಿ. ಬ್ಯಾಡಗಿಯ ಲೇಖಕಿ ಸಂಕಮ್ಮ ಒಂದು ಅರ್ಥದಲ್ಲಿ ಪಾಟೀಲ ಪುಟ್ಟಪ್ಪನವರ ಮಾನಸ ಪುತ್ರಿ. ಏನಾದರೂ ಮಾತನಾಡಬೇಕೆಂದಾಗ “ಸಂಕಮ್ಮ ಬಾ’ ಎಂದು ಕರೆಕಳಿಸುತ್ತಿದ್ದರು.

ಹಾವೇರಿಯ ಹನುಮಂತಪ್ಪ ಸುಣಗಾರ ಮತ್ತು ಹುಬ್ಬಳ್ಳಿಯ ಸೈಯದ ಪುಟ್ಟಪ್ಪನವರ ಅಂಗರಕ್ಷಕರಿದ್ದಂತೆ. ಜೀತಾವಧಿಯ ಕೊನೆಯ ಕ್ಷಣದವರೆಗೂ ಪುಟ್ಟಪ್ಪನವರ ಸೇವೆಯನ್ನು ಮಾಡಿದವರು. ಪಾಪು ಅವರನ್ನು ಸಂಪರ್ಕಿಸಬೇಕೆಂದರೆ ಇವರಿಬ್ಬರಿಗೆ ಮಾತನಾಡಿದರೆ ಸಾಕು, ಎಲ್ಲ ಹಾಲ್‌ಚಾಲ್‌ಗ‌ಳು ಗೊತ್ತಾಗುತ್ತಿದ್ದವು.

ಲೇಖಕ ಸರಜೂ ಕಾಟ್ಕರ್‌ ಸತತ 3- 4 ವರ್ಷಗಳ ಕಾಲ ಪಾಟೀಲ ಪುಟ್ಟಪ್ಪನವರ ಮನೆಗೆ ಹೋಗಿ ಅವರ ಶತಮಾನದ ನೆನಪುಗಳನ್ನು ನಾನು ಪಾಟೀಲ ಪುಟ್ಟಪ್ಪ ಎಂಬ ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಒಂದು ರೀತಿಯಲ್ಲಿ ನಾರಣಪ್ಪನಂತೆ ಲಿಪಿಕಾರ ಆದ ಅನುಭವ ಸರಜೂ ಬಾಯಿಂದಲೇ ಕೇಳಬೇಕು.

ಬ್ಯಾಡಗಿಯ ಹರೀಶ ಮಾಳಪ್ಪನವರು ಪ್ರಸಿದ್ಧ ಶಿಲ್ಪ ಕಲಾವಿದ. ಪುಟ್ಟಪ್ಪನವರ ಮತ್ತು ಅವರ ಪತ್ನಿ ಇಂದುಮತಿ ಪಾಟೀಲರ ಮಣ್ಣು ಶಿಲ್ಪಗಳನ್ನು ತಯಾರಿಸಿ ಕೊಟ್ಟಾಗ, ಇಂದುಮತಿಯ ಶಿಲ್ಪವನ್ನು ನೋಡಿ ಕಣ್ಣು ತೇವಗೊಂಡಿದ್ದವು. ಸುಮಾರು 4 ತಾಸುಗಳ ಕಾಲ ಪುಟ್ಟಪ್ಪನವರನ್ನು ಎದುರಿಗೆ ಕೂಡಿಸಿ ಮಣ್ಣು ಶಿಲ್ಪವನ್ನು ತಯಾರಿಸಿದಾಗ ಬೆನ್ನು ಚಪ್ಪರಿಸಿದ್ದು ಮರೆಯಲಾಗದ ಸಂಗತಿಯೆಂದು ಹರೀಶ ಹೇಳುತ್ತಾರೆ.

1983ರಲ್ಲಿ ಉತ್ತುಂಗದಲ್ಲಿದ್ದ ಗೋಕಾಕ ಚಳವಳಿಯ ಸಂದರ್ಭದಲ್ಲಿ ಹಾವೇರಿಗೆ ಡಾ. ರಾಜಕುಮಾರರೊಂದಿಗೆ ಬಂದಾಗ, “ಇದೆ ನೋಡ್ರಿ ನಾ ಕಲತ್‌ ಸಾಲಿ’ ಎಂದು ಡಾ. ರಾಜ್‌ಗೆ ಮುನ್ಸಿಪಲ್‌ ಹೈಸ್ಕೂಲ್‌ ತೋರಿಸಿದ್ದರು.

ಒಂದು ಬಾರಿ ಇಲ್ಲಿಯ ಕೆ.ಇ.ಬಿ. ನೌಕರರ ಸಂಘದ ಕಚೇರಿಗೆ ಭೇಟಿ ಕೊಟ್ಟು, ಅವರಣದಲ್ಲಿರುವ ಕಾರ್ಮಿಕ ಸ್ಮಾರಕವನ್ನು ನೋಡಿ ಸಾಂಸ್ಕೃತಿಕ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಕೆಇಬಿಯಂತಹ ಕಾರ್ಮಿಕ ಸಂಘದಿಂದ ಇತರ ಸಂಘಗಳು ಕಲಿಯಬೇಕು ಎಂದು ಸಂದರ್ಶನ ಪುಸ್ತಕದಲ್ಲಿ ಬರೆದಿರುವರು.

ಹಾವೇರಿ ಒಡಲಿನೊಂದಿಗೆ ನೂರಾರು ನೆನಪುಗಳ ಸುರಳಿ ಬಿಟ್ಟು ಹೋದ ಪಾಪು ಇನ್ನಿಲ್ಲವೆಂದು ಊಹಿಸುವುದು ಅಸಾಧ್ಯ. ಏಕೀಕರಣ, ಗೋಕಾಕ್‌ ಚಳವಳಿ, ಮುನ್ಸಿಪಲ್‌ ಹೈಸ್ಕೂಲ್‌, ಸವಣೂರಿನ ಗೋಕಾಕ್‌ ಭವನ ಅನೇಕ ಹೆಜ್ಜೆಗುರುತುಗಳು ಈ ನೆಲದಲ್ಲಿವೆ.

ಸತೀಶ ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next