ಯಲಹಂಕ: ಸರ್ಕಾರಿ ವೈದ್ಯ ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯ, ತರಬೇತಿಗೆ ಬಳಸಿಕೊಂಡ ಪರಿಣಾಮ ಬುಧವಾರ ಇಲ್ಲಿನ ಇಲ್ಲಿನ ತಾಲೂಕು ಆಸ್ಪತ್ರೆಗೆ ಬಂದ ನೂರಾರು ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಸಂಕಷ್ಟಕ್ಕೆ ಸಿಲುಕಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯ 24 ಅರೆ ವೈದ್ಯಕೀಯ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನೀಯೋಜಿಸಿದ್ದು, ವಾರದ ಹಿಂದೆಯೇ ಅವರೆಲ್ಲರೂ ತರಬೇತಿಗೆ ತೆರಳಿದ್ದಾರೆ. ಅಂದಿನಿಂದ ಆರಂಭವಾದ ರೋಗಿಗಳ ಪರದಾಟ ಈಗಲೂ ಮುಂದುವರಿದಿದೆ. ಹೀಗಾಗಿ ಬಡ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಬಾಗಿಲು ತಟ್ಟುತ್ತಿದ್ದು, ಉಚಿತವಾಗಿ ಸಿಗುತ್ತಿದ್ದ ಚಿಕಿತ್ಸೆಗಳಿಗೆ ಸಾವಿರಾರು ರೂ. ತೆರುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಚುನಾವಣಾ ಕೆಲಸದಿಂದ ವಿನಾಯಿತಿ ನೀಡುರುವುದಾಗಿ ನಗರ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದರು. ಆದರೆ, ಇದರ ಬೆನ್ನಲ್ಲೇ, ಎಲ್ಲ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ಹಾಜರಾಗುವಂತೆ ಬೆಂಗಳೂರು ನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಸೇವೆಗಳ ಅಧಿಕಾರಿ ಕೆ.ಎನ್.ಗಂಗಾಧರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಕೊರತೆ ಎದುರಾಗಿದೆ. ಜನೌಷಧ ಕೇಂದ್ರವೂ ಮುಚ್ಚಿರುವ ಕಾರಣ ಸಾರ್ವಜನಿಕರು ಹೆಚ್ಚು ಹಣ ನೀಡಿ ಔಷಧ ಖರೀದಿಸುವಂತಾಗಿದೆ.
24 ಅರೆವೈದ್ಯ ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಾವು ಆಯೋಗದ ಆದೇಶ ಉಲ್ಲಂಘಿಸುವಂತಿಲ್ಲ. ಆಷ್ಪತ್ರೆಯಲ್ಲಿ ಸೇವೆಗಳಿಗೆ ತೊಡಕಾಗದಂತೆ ವ್ಯವಸ್ಥೆ ಮಾಡಲಾಗುವುದು.
-ರಮೇಶ್ ಬಾಬು, ನಗರ ಜಿಲ್ಲಾ ಆರೋಗ್ಯಾಧಿಕಾರಿ
ಒಂದು ವಾರದಲ್ಲಿ ಮೂರು ದಿನ ಸರ್ಕಾರಿ ಆಸ್ಪತ್ರೆ ಬಾಗಿಲು ಹಾಕಲಾಗಿತ್ತು. ಹೀಗೆ ಮಾಡಿದರೆ ಬಡ ರೋಗಿಗಳ ಪಾಡೇನು? ಆಸ್ವತ್ರೆಗೆ ಹೋದರೆ ಸೋಮವಾರದವರೆಗೆ ಯಾರೂ ಬರಬೇಡಿ ಎನ್ನುತ್ತಿದ್ದಾರೆ.
-ನಾಗರಾಜು, ಸ್ಥಳೀಯ ನಿವಾಸಿ