ಉಡುಪಿ: ಕಾಯಿಲೆ ಬಂದಾಗ ರೋಗಿಗಳು ಎದೆಗುಂದದೆ ಮನೋಸ್ಥೈರ್ಯ ವೃದ್ಧಿಸಿಕೊಂಡು ಔಷಧ ಸೇವಿಸಿದಾಗ ಮಾತ್ರ ಕಾಯಿಲೆ ಗುಣಮುಖವಾಗಲು ಸಾಧ್ಯ. ಈ ನಿಟ್ಟಿನಲ್ಲಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ. ಟ್ರಸ್ಟ್ ವತಿಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖವಾಗಿ ಬೇಕಾದ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕೈಲಾದಷ್ಟು ಸಹಾಯ ಒದಗಿಸುತ್ತ ಬರಲಾಗುತ್ತಿದೆ ಎಂದು ನಾಡೋಜ ಡಾ| ಜಿ. ಶಂಕರ್ ಹೇಳಿದರು.
ಆದರ್ಶ ಆಸ್ಪತ್ರೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆದರ್ಶ ಆಸ್ಪತ್ರೆಯಲ್ಲಿ ಶುಕ್ರವಾರ ಕಿಡ್ನಿ ವೈಫಲ್ಯ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಧನಸಹಾಯದ ಚೆಕ್ ಹಸ್ತಾಂತರಿಸಿ ಅವರು ಮಾತನಾಡಿ, ಬಡ ಕುಟುಂಬದಿಂದ ಬಂದಿರುವ ನನಗೆ ಸಮಾಜದಲ್ಲಿ ಬಡಜನರನ್ನು ಹಿಂಡಿ ಹಿಪ್ಪೆಯಾಗಿಸುವ ಕಾಯಿಲೆಗಳಿಗೆ ತುತ್ತಾಗಿರುವ ಜನತೆಗೆ ಸಹಾಯ, ಸಹಕಾರ ಮಾಡಬೇಕೆನ್ನುವ ಸದುದ್ದೇಶ ಹೊಂದಿದ್ದೇನೆ ಎಂದರು.
ಹಿರಿಯ ನರರೋಗ ತಜ್ಞ ಪ್ರೊ| ಡಾ| ಎ. ರಾಜಾ, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಕೃಷ್ಣಪ್ರಸಾದ್ ಹುಟ್ಟುಹಬ್ಬ ಆಚರಿಸಿಕೊಂಡ ಜಿ. ಶಂಕರ್ ಅವರಿಗೆ ಶುಭ ಹಾರೈಸಿ, ಅವರ ಜನೋಪಯೋಗಿ ಕಾರ್ಯಗಳನ್ನು ಶ್ಲಾ ಸಿದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್ ಪ್ರಸ್ತಾವಿಕ ಮಾತನಾಡಿ, ಶಿಕ್ಷಣ, ಆರೋಗ್ಯ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಬಡವರಿಗೆ ಧನಸಹಾಯ ಇತ್ಯಾದಿ ಸಮಾಜಮುಖೀ ಕಾರ್ಯಗಳನ್ನು ನಿರಂತರವಾಗಿ ಮಾಡುವುದಕ್ಕೆ ಯಾವುದೇ ವ್ಯಕ್ತಿಯಲ್ಲಿ ಹೃದಯ ಶ್ರೀಮಂತಿಕೆ ಬೇಕಾಗುತ್ತದೆ. ಅಂತಹ ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯಾಗಿ ಜಿ. ಶಂಕರ್ ಗುರುತಿಸಿಕೊಂಡಿದ್ದಾರೆ.
ಸಮಾಜಕ್ಕಾಗಿಯೇ ಸದಾ ಚಿಂತಿಸುತ್ತ ಸತ್ಕಾರ್ಯಗಳನ್ನೇ ಮೈಗೂಡಿಸಿಕೊಂಡು ಬಂದಿರುವ ಅವರ ಧೀಮಂತ ವ್ಯಕ್ತಿತ್ವ ಸಮಾಜಕ್ಕೆ ಮಾದರಿ. ಉಡುಪಿಯಲ್ಲಿ ನೀರಿನ ಸಮಸ್ಯೆ ನಿರಂತರವಾಗಿದ್ದು, ಈ ಬಗ್ಗೆ ಅವರು ತಮ್ಮ ಟ್ರಸ್ಟಿನ ಮೂಲಕ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಜನತೆಯ ಪರವಾಗಿ ವಿನಂತಿಸಿದರು.
ಆದರ್ಶ ಆಸ್ಪತ್ರೆಯ ಹಿರಿಯ ಎಲುಬು – ಕೀಲು ತಜ್ಞ ಡಾ| ಮೋಹನದಾಸ ಶೆಟ್ಟಿ, ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್, ನವೀನ್ ಉಪಸ್ಥಿತರಿದ್ದರು. ಡಾ| ಜಿ. ಶಂಕರ್ ಅವರನ್ನು ಪ್ರೊ| ಡಾ| ಎ. ರಾಜಾ ಅವರು ಸಮ್ಮಾನಿಸಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಂದ್ರ ನಾಯ್ಕ ನಿರೂಪಿಸಿ, ಪ್ರಬಂಧಕ ಡಿಯಾಗೋ ಕ್ವಾಡ್ರಸ್ ವಂದಿಸಿದರು.