Advertisement

Lack of dialysis: ಡಯಾಲಿಸಿಸ್‌ ಇಲ್ಲದೇ ಸಂಕಷ್ಟದಲ್ಲಿ ರೋಗಿಗಳು!

04:08 PM Dec 03, 2023 | Team Udayavani |

ರಾಮನಗರ: ಡಯಾಲಿಸಿಸ್‌ ಸಿಬ್ಬಂದಿ ಪ್ರತಿಭಟನೆ ಆರಂಭಿಸಿದ್ದು, ಮೂರು ದಿನಗಳಿಂದ ಜಿಲ್ಲೆಯ ನಾಲ್ಕು ಆಸ್ಪತ್ರೆಗಳ ಡಯಾಲಿಸಿಸ್‌ ಕೇಂದ್ರಗಳು ಬಂದ್‌ ಆಗಿದೆ. 700ಕ್ಕೂ ಹೆಚ್ಚು ರೋಗಿಗಳಿಗೆ ಇದೀಗ ಮುಂದೇನು ಎಂಬ ಆತಂಕ ಎದುರಾಗಿದೆ. ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದ ರೋಗಿಗಳು ಡಯಾಲಿಸಿಸ್‌ ಕೇಂದ್ರಗಳು ಬಂದ್‌ ಆಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಮೂತ್ರಪಿಂಡ ಸೋಂಕಿನಿಂದ ಬಳಲು ತ್ತಿರು ವವರು ಡಯಾಲಿಸಿಸ್‌ ಮಾಡಿಸಿ ಕೊಳ್ಳಲು ಹಿಂದೆಲ್ಲಾ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಿತ್ತು. ರೋಗಿಗಳನ್ನು ಬೆಂಗಳೂರಿನ ವರೆಗೆ ಕರೆದೊಯ್ದು ಡಯಾಲಿಸಿಸ್‌ ಮಾಡಿಸುವುದು ಕುಟುಂಬದವರಿಗೆ ಸವಾಲಿನ ಕೆಲಸವಾಗಿ ತ್ತು. ಇನ್ನು ಬಡಕುಟುಂಬಗಳಿಗೆ ಡಯಾಲಿಸಿಸ್‌ ನಿಲುಕದ ನಕ್ಷತ್ರವಾಗಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭಿ ಸಿದ್ದು, ಬಡರೋಗಿಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಇದೀಗ ಮತ್ತೆ ಸಮಸ್ಯೆ ಎದುರಾಗಿದ್ದು, ಡಯಾಲಿಸಿಸ್‌ ಇಲ್ಲದೆ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿವೆ 16 ಯಂತ್ರಗಳು: ಜಿಲ್ಲಾಸ್ಪತ್ರೆ ಹಾಗೂ ಮೂರು ತಾಲೂಕು ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ 16 ಡಯಾಲಿಸಿಸ್‌ ಯಂತ್ರಗಳು ಕೆಲಸ ಮಾಡುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ 7, ಉಳಿದ ಮೂರು ತಾಲೂಕು ಆಸ್ಪತ್ರೆಗಳಲ್ಲಿ ತಲಾ 3 ಯಂತ್ರಗಳು ಕಾರ್ಯನಿರ್ವ ಹಿಸುತ್ತಿದ್ದು, ಜಿಲ್ಲೆಯಲ್ಲಿ 19 ಮಂದಿ ಸಿಬ್ಬಂದಿ ಡ ಯಾಲಿಸಿಸ್‌ ಕಾರ್ಯದಲ್ಲಿ ನಿರತವಾಗಿದ್ದಾರೆ. ಪ್ರತಿ ವ್ಯಕ್ತಿಗೆ ಡಯಾಲಿಸಿಸ್‌ ಮಾಡಲು 4ರಿಂದ 6 ತಾಸುಗಳು ಬೇಕಿದ್ದು, ಪ್ರತಿದಿನ ಒಂದು ಯಂತ್ರದಲ್ಲಿ ಎರಡ ರಿಂದ ಮೂರು ಮಂದಿಗೆ ಡಯಾಲಿಸಿಸ್‌ ಮಾಡಲಾಗುತಿತ್ತು.

700 ಮಂದಿಗೆ ಡಯಾಲಿಸಿಸ್‌: ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡಿರುವ ರೋಗಿಗಳಿಗೆ ಸರದಿಯ ಮೇಲೆ ಡಯಾಲಿಸಿಸ್‌ ಮಾಡುತ್ತಿದ್ದು, ಪ್ರತಿಯೊಬ್ಬರಿಗೂ ದಿನಾಂಕ ನಿಗ ದಿ ಮಾಡಲಾಗಿದೆ. ಇದಕ್ಕೆ ಅನುಗುಣವಾಗಿ ಡಯಾಲಿಸಿಸ್‌ ನಡೆಯು ತ್ತಿದ್ದು, ಪ್ರತಿ ದಿನ ರಾಮನಗರದಲ್ಲಿ 37 ಮಂದಿಗೆ, ಚನ್ನಟ್ಟಣದಲ್ಲಿ 18 ಮಂದಿಗೆ, ಮಾಗಡಿಯಲ್ಲಿ 15 ಮಂದಿಗೆ, ಕನಕಪುರದಲ್ಲಿ 9 ಮಂದಿಗ ಡಯಾಲಿಸಿಸ್‌ ಮಾಡುತ್ತಿದ್ದು, ತಿಂಗಳಿಗೆ ರಾಮನಗರದಲ್ಲಿ 350 ಮಂದಿ, ಚನ್ನಪಟ್ಟಣದಲ್ಲಿ 150 ಮಂದಿ, ಮಾಗಡಿಯಲ್ಲಿ 100 ಮಂದಿ, ಕನಕಪುರದಲ್ಲಿ 80 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ.

ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿ ಸಮಸ್ಯೆ ಏನು? : ಪದೇ ಪದೆ ವೇತನ ಕಡಿತ ಮಾಡುತ್ತಿರುವುದರಿಂದ ನಮಗೆ ಸಮಸ್ಯೆ ಎದುರಾಗಿದ್ದು, ಸೂಕ್ತ ವೇತನ ಹಾಗೂ ಇಎಸ್‌ಐ ಪಿಎಫ್‌ ಸೌಲಭ್ಯ ನೀಡಬೇಕು ಎಂಬುದು ಪ್ರತಿಭಟನಾ ನಿರತರ ಡಯಾಲಿಸಿಸ್‌ ಕೇಂದ್ರಗಳ ಸಿಬ್ಬಂದಿಯ ಆಗ್ರಹ. ಆರಂಭದಲ್ಲಿ ಬಿಆರ್‌ಎಸ್‌ ಸಂಸ್ಥೆ ಡಯಾಲಿಸಿಸ್‌ ಆರಂಭಿಸಿದಾಗ ಸಿಬ್ಬಂದಿಗಳಿಗೆ 20 ಸಾವಿರ ರೂ. ಇದ್ದ ವೇತನವನ್ನು, ಸರ್ಕಾರ ವಹಿಸಿಕೊಂಡಾಗ 14 ಸಾವಿರಕ್ಕೆ ಕಡಿತ ಮಾಡಲಾಗಿತ್ತು. ಬಳಿಕ 13,800ಕ್ಕೆ ಇಳಿಸಿದ್ದು, ಪ್ರಸ್ತುತ 13000 ರೂ. ಸಂದಾಯವಾಗುತ್ತಿದೆ. ಪದೇ ಪದೆ ವೇತನ ಕಡಿತವಾಗುತ್ತಿರುವುದು, ಇಎಸ್‌ಐ, ಪಿಎಫ್‌ ಸೌಲಭ್ಯ ಬೇಕು ಎಂಬುದು ಡಯಾಲಿಸಿಸ್‌ ಸಿಬ್ಬಂದಿಗಳ ಆಗ್ರಹವಾಗಿದೆ.

Advertisement

ಜಿಲ್ಲೆಯಲ್ಲಿ 3 ದಿನದಿಂದ ಡಯಾಲಿಸಿಸ್‌ ಕೇಂದ್ರ ಬಂದ್‌ : ಕಳೆದ ಮೂರು ದಿನಗಳಿಂದ ಡಯಾಲಿಸಿಸ್‌ ಕೇಂದ್ರಗಳು ಏಕಾಏಕಿ ಬಂದ್‌ ಆಗಿದ್ದು, ಇದೀಗ ಈ ರೋಗಿಗಳು ಏನು ಮಾಡುವುದು ಎಂಬ ಜಿಜ್ಞಾಸೆಗೆ ಒಳಗಾಗಿದ್ದಾರೆ. ದುಬಾರಿ ಹಣತೆತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಾಗದೆ, ಬೆಂಗಳೂರು, ಮೈಸೂರಿನವರೆಗೆ ಪ್ರಯಾಣ ಬೆಳೆಸಲಾಗದೆ ಪರದಾಡುತ್ತಿರುವ ಬಡ ರೋಗಿಗಳು ಡಯಾಲಿಸಿಸ್‌ಗಾಗಿ ಮೊರೆ ಇಡುತ್ತಿದ್ದಾರೆ.

ಶುದ್ಧ ನೀರಿನ ಕೊರತೆ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ನಡೆಸಲು ಬೇಕಿರುವ ಆರ್‌ಒ ಫ್ಲೂರಿಫೈ ನೀರಿನ ಕೊರತೆ ಎದುರಾಗಿದ್ದು, ಕೆಲವೊಮ್ಮೆ ಪರಿಪೂರ್ಣ ವಾದ ಡಯಾಲಿಸಿಸ್‌ ನಡೆಸಲು ಇದು ಸಮಸ್ಯೆ ಯಾಗಿ ಕಾಡುತ್ತಿದೆ. ಒಬ್ಬ ವ್ಯಕ್ತಿಗೆ ಡಯಾಲಿಸಿಸ್‌ ಮಾಡಲು 120 ಲೀಟರ್‌ ಶುದ್ಧ ನೀರಿನ ಅಗತ್ಯತೆ ಇದ್ದು, ಇದನ್ನು ಸಮರ್ಪಕ ಪ್ರಮಾಣದಲ್ಲಿ ನೀಡದ ಕಾರಣ ಡಯಾಲಿಸಿಸ್‌ಗೆ ಸಮಸ್ಯೆಯಾ ಗುತ್ತಿದೆ. ಇನ್ನು ಕೆಲವೆಡೆ ಡಯಾಲಿಸಿಸ್‌ ಯಂತ್ರದಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷಗಳು ಆಗ್ಗಾಗ್ಗೆ ಕಂಡು ಬರುತ್ತವೆ ಎಂಬುದನ್ನು ಹೊರತು ಪಡಿಸಿದರೆ, ಜಿಲ್ಲೆಯ 16 ಡಯಾಲಿಸಿಸ್‌ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next