ಹುಬ್ಬಳ್ಳಿ: ಉದ್ಯಮಿಗಳಾಗಲು ಬಂಡವಾಳ ಜೊತೆಗೆ ಕನಸುಗಳನ್ನು ಸಾಕಾರಗೊಳಿಸುವ ಸತತ ಪರಿಶ್ರಮ, ತಾಳ್ಮೆ ಅವಶ್ಯವೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ ಗದಗ ಅಭಿಪ್ರಾಯಪಟ್ಟರು.
ಕರ್ನಾಟಕ ಸರಕಾರ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ (ಸೆಡಾಕ್), ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೆಎಲ್‌ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜು ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ವಿದ್ಯಾನಗರದ ಕಾಡಸಿದ್ದೇಶ್ವರ ಮತ್ತು ಕೋತಂಬ್ರಿ ಕಾಲೇಜಿನಲ್ಲಿ ಸೋಮವಾರದಿಂದ ನಡೆಯುತ್ತಿರುವ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಾಲಕರ ದುಡಿಮೆಯಲ್ಲೇ ಅಧ್ಯಯನ ಮಾಡಿಕೊಳ್ಳದೆ, ವಿದ್ಯೆ ಜೊತೆ ಸ್ವಂತ ದುಡಿಮೆಯಲ್ಲಿ ತೊಡಗಬೇಕು. ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು. ತಾರುಣ್ಯದಿನದಲ್ಲಿ ಇರುವ ಚೈತನ್ಯ ಮತ್ತು ಶಕ್ತಿಯನ್ನು ವ್ಯರ್ಥವಾಗಿ ನಷ್ಟ ಮಾಡದೇ ಸದ್ವಿನಿಯೋಗ ಮಾಡಿಕೊಳ್ಳಬೇಕು.
ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಬೇಕು. ಅಂದಾಗ ಮಾತ್ರ ಚಿಕ್ಕ ವಯಸ್ಸಿನಲ್ಲೇ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಆರ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನ ನಂತರ ಉದ್ಯೋಗಕ್ಕಾಗಿ ಬೇರೆಡೆ ಅರಸಿಕೊಂಡು ಹೋಗದೆ ಸ್ವಂತಉದ್ದಿಮೆ ಸ್ಥಾಪಿಸಿ, ನಾಲ್ಕು ಜನರಿಗೆ ಉದ್ಯೋಗ ನೀಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಧಾರವಾಡ ಜಿಲ್ಲಾ ಸಿಡಾಕ್ ಉಪ ನಿರ್ದೇಶಕ ಸಿ.ಎಚ್.ಅಂಗಡಿ ಮಾತನಾಡಿ, ಜೀವನದಲ್ಲಿ ಸಾಧಕರಾಗಲು ಯಾವುದೇ ಒಳದಾರಿಗಳಿಲ್ಲ. ಸತತ ಪರಿಶ್ರಮ ಮಾತ್ರ ಸಾಧನೆಗೆ ಸಾಧಕವಾಗಬಲ್ಲದು. ಕಠಿಣ ಪರಿಶ್ರಮಿಗಳಿಗೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು. ಜಿಲ್ಲಾ ಕೈಗಾರಿಕಾ ಇಲಾಖೆಯ ವೆಂಕಟೇಶ ಕುಲಕರ್ಣಿ, ಕಾಲೇಜಿನ ನೇಮಕಾತಿ ವಿಭಾಗದ ಮುಖ್ಯಸ್ಥೆ ಸ್ನೇಹಾ ಸಪರೆ ಇದ್ದರು.
ವಿವಿಧ ಭಾಗಗಳ ನವೋದ್ಯಮಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆಶ್ಮೀಯಾ ಶೇಖ ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷ ಆರ್. ಎಫ್. ಇಂಚಲ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ| ಎಸ್.ಎಸ್. ಪಟ್ಟೇದ ನಿರೂಪಿಸಿದರು. ಪ್ರಾಧ್ಯಾಪಕಿ ಡಾ| ಶ್ರೀಮತಿ ಎಸ್.ಜೆ. ಹಾನಗಲ್ಲ ವಂದಿಸಿದರು. ಸೆಡಾಕ್ ಉಪನಿರ್ದೇಶಕ ಸಿ.ಎಚ್. ಅಂಗಡಿ ನೇತೃತ್ವದಲ್ಲಿ ತರಬೇತಿ ಶಿಬಿರ ಆರಂಭಗೊಂಡಿತು.