ರಾಜಕೀಯ ಎಂದರೆ ಅಲ್ಲಿ ಯಾರೂ ಶಾಶ್ವತ ಶತ್ರು ಅಥವಾ ಮಿತ್ರರು ಇರುವುದಿಲ್ಲ. ಇಂದು ಆಡಳಿತ ಪಕ್ಷದಲ್ಲಿರುವವರು ನಾಳೆ ವಿರೋಧಿ ಪಾಳಯದಲ್ಲಿರಬಹುದು, ಪರಸ್ಪರ ವಾಕ್‌ಸಮರ, ಕೆಸರೆರಚಾಟ, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ವಿಭಿನ್ನ ಪಕ್ಷಗಳ ನಾಯಕರು ನಾಳೆ ಒಂದೇ ಪಕ್ಷದ ವೇದಿಕೆಯಲ್ಲಿ ಪರಸ್ಪರ ಆಲಿಂಗಿಸಿಕೊಳ್ಳಬಹುದು. ಇವೆಲ್ಲ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ. ಇಲ್ಲಿ ನೈತಿಕತೆ-ಅನೈತಿಕತೆ, ಸಿದ್ಧಾಂತ ಇವೆಲ್ಲ ತೊಡಕಾಗದು. ಯಾವ ಕ್ಷಣದಲ್ಲಿ ಯಾವ ಪಕ್ಷದಲ್ಲಿರುತ್ತಾರೋ ಆಗ ಅವರದು ಆ ಪಕ್ಷದ್ದೇ ಸಿದ್ಧಾಂತ, ನೈತಿಕತೆ. ಪಕ್ಷಾತೀತವಾಗಿರುವ ಪಕ್ಷಾಂತರವೇ ರಾಜಕೀಯದ ವಿಶೇಷತೆ. ಚುನಾವಣ ವರ್ಷದಲ್ಲಿ ನಾಯಕರ ಈ ಕಪ್ಪೆ ಜಿಗಿತ ಮಾಮೂಲು. ಪಕ್ಷಾಂತರಕ್ಕೆ ಹಿರಿ- ಕಿರಿಯರೆಂಬ ಭೇದವಿಲ್ಲ. ಇಲ್ಲೂ ಗೆದ್ದ ಎತ್ತಿನ ಬಾಲ ಹಿಡಿಯುವವರೇ ಅಧಿಕ. ಯಾವ ಪಕ್ಷ ಹೆಚ್ಚು ಚಲಾವಣೆಯಲ್ಲಿರುತ್ತದೋ ಆ ಪಕ್ಷದ ಬುಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಪ್ಪೆಗಳು ಜಿಗಿಯುತ್ತವೆ. ರಾಜಕೀಯ ನಾಯಕರ ಈ ವಲಸೆ ಪ್ರಕ್ರಿಯೆ ಗ್ರಾಮ ಪಂಚಾಯತ್ ಮಟ್ಟದಿಂದ ಹಿಡಿದು ಲೋಕಸಭೆ ಚುನಾವಣೆಯವರೆಗೂ ನಡೆಯುತ್ತದೆ.
ಸದ್ಯ ದೇಶದ ಹಲವೆಡೆ ನಾಯಕರ ಪಕ್ಷಾಂತರ ಭರಾಟೆ ಜೋರಾಗಿದೆ. ಕಳೆದೊಂದು ದಶಕದಿಂದ ಈ ಪಕ್ಷಾಂತರದ ಪೂರ್ಣ ಫಲಾನುಭವಿ ಬಿಜೆಪಿ. ನಾಯಕರ ವಲಸೆಯಿಂದ ಹೆಚ್ಚು ನಷ್ಟ ಅನುಭವಿಸಿರುವುದು ಕಾಂಗ್ರೆಸ್. ಅದರಲ್ಲೂ ಕಾಂಗ್ರೆಸ್ ಯುವ ನಾಯಕರ ಗಡಣವನ್ನೇ ಚಿನ್ನದ ತಟ್ಟೆಯಲ್ಲಿಟ್ಟು ಬಿಜೆಪಿಗೆ ಧಾರೆ ಎರೆದಿದೆ. ಯುವ ನಾಯಕತ್ವವನ್ನು ಬೆಳೆಸಲು ಆಸಕ್ತಿ ತೋರದ ಕಾಂಗ್ರೆಸ್ ಇದೀಗ ಇದರ ಪ್ರಾಯಶ್ಚಿತ್ತವನ್ನು ಅನುಭವಿಸುತ್ತಿದೆ. ಇದೇ ವೇಳೆ ಇತರ ಪಕ್ಷಗಳಿಂದ ವಲಸೆ ಬಂದ ನಾಯಕರನ್ನು ನಡೆಸಿಕೊಳ್ಳುವ ರೀತಿಯನ್ನು ಕಳೆದೊಂದು ದಶಕದಿಂದ ಬದಲಾಯಿಸಿಕೊಂಡಿರುವ ಬಿಜೆಪಿ, ವಲಸಿಗರಿಗೂ ಪಕ್ಷದಲ್ಲಿ ಸ್ಥಾನಮಾನ ಮತ್ತು ಅಧಿಕಾರ ನೀಡತೊಡಗಿದೆ. ಇದರ ಪರಿಣಾಮವಾಗಿ ಇತರ ಪಕ್ಷಗಳಿಂದ ನಾಯಕರು ಕೇಸರಿ ಪಾಳಯಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ನಾವಿಕನಿಲ್ಲದ ದೋಣಿಯಂತಾಗಿರುವ ಕಾಂಗ್ರೆಸ್‌ನಿಂದ ನಾಯಕರ ದಂಡೇ ಬಿಜೆಪಿಯತ್ತ ಗುಳೇ ಹೋಗುವ ಮೂಲಕ ತಮ್ಮನ್ನು ಚಲಾವಣೆಯಲ್ಲಿರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಎಂದರೆ ಗುಜರಾತ್‌ನ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್.
ತಿಮಿಂಗಿಲಕ್ಕೆ ಗಾಳ: ಹಾರ್ದಿಕ್ ಪಟೇಲ್ ಅವರ ಸೇರ್ಪಡೆ ಗುಜರಾತ್‌ನಲ್ಲಿ ಬಿಜೆಪಿಯ ಬಲವನ್ನು ಮತ್ತಷ್ಟು ವೃದ್ಧಿಸಿದೆ. ಕಳೆದ ಬಾರಿ, ಅಂದರೆ 2017ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಸಂಖ್ಯಾಬಲ ಕುಸಿಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾರ್ದಿಕ್ ಪಟೇಲ್‌ರನ್ನೇ ಇದೀಗ ತನ್ನ ಬುಟ್ಟಿಗೆ ಸೆಳೆದುಕೊಳ್ಳುವ ಮೂಲಕ ಬಿಜೆಪಿ ಚುನಾವಣ ಪೂರ್ವದಲ್ಲಿಯೇ ಭರ್ಜರಿ ಬೇಟೆಯನ್ನಾಡಿದೆ. ಈ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಹಾರ್ದಿಕ್ ಪಟೇಲ್‌ರ ಈ ನಡೆ ಕಾಂಗ್ರೆಸ್‌ನ ಜಂಘಾಬಲವನ್ನೇ ಉಡುಗುವಂತೆ ಮಾಡಿದೆ. ಗುಜರಾತ್‌ನಲ್ಲಿ 1.5 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಪಾಟೀದಾರ್ ಸಮುದಾಯದ ಉಪಜಾತಿಯಾಗಿರುವ ಕಡ್ವಾದ ಪ್ರಬಲ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಸೆಳೆದುಕೊಳ್ಳುವ ಮೂಲಕ ಬಿಜೆಪಿ ಈ ಸಮುದಾಯದ ಮತಬುಟ್ಟಿಗೆ ನೇರವಾಗಿ ಕೈಹಾಕಿದೆ. ಪ್ರಬಲ ಸಮುದಾಯಗಳಲ್ಲೊಂದಾಗಿರುವ ಪಾಟೀದಾರರನ್ನು ಪಕ್ಷದತ್ತ ಮತ್ತೆ ಸೆಳೆಯುವಲ್ಲಿ ಯಶಸ್ವಿಯಾದಲ್ಲಿ ರಾಜ್ಯದಲ್ಲಿ ಅದರಲ್ಲೂ ಸೌರಾಷ್ಟ್ರ ಪ್ರಾಂತದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರ ಬಿಜೆಪಿಯದ್ದು.
2019ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಹಾರ್ದಿಕ್ ಪಟೇಲ್ ಅವರನ್ನು 2020ರ ಜುಲೈಯಲ್ಲಿ ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಆ ಬಳಿಕ ಕಾಂಗ್ರೆಸ್‌ನಲ್ಲಿದ್ದರೂ ಒಂದಿಷ್ಟು ಹಿನ್ನೆಲೆಗೆ ಸರಿದಿದ್ದ ಹಾರ್ದಿಕ್ ಪಟೇಲ್ ಅವರು ಪಕ್ಷದಲ್ಲಿ ತನ್ನನ್ನು ನಿರ್ಲಕ್ಷಿಸಲಾಗುತ್ತಿದೆಯಲ್ಲದೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಈ ವರ್ಷದ ಮೇ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್ ವರಿಷ್ಠರು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರಿಂದಾಗಿ ಮೇ 18ರಂದು ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ಅಧಿಕೃತವಾಗಿ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದರು.
ಹಾರ್ದಿಕ್‌ಗೆ ರತ್ನಗಂಬಳಿ ಸ್ವಾಗತ ಯಾಕೆ?: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಆರಂಭದಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ಖಚಿತವಾಗಿ ಏನನ್ನು ಹೇಳದಿದ್ದರೂ ಅವರು ಕೇಸರಿ ತೆಕ್ಕೆಗೆ ಜಿಗಿಯುವುದು ಪಕ್ಕಾ ಆಗಿತ್ತು. ಅದರಂತೆ ಜೂ.2ರಂದು ಹಾರ್ದಿಕ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷದ ಪಾಲಿಗೆ ಮುಳುವಾಗಿ ಪರಿಣಮಿಸಿದ್ದ ಯುವ ನಾಯಕನನ್ನು ಬಿಜೆಪಿ ವರಿಷ್ಠರು ಈಗ ಆದರದಿಂದ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಮೂಲಕ ಪಾಟೀದಾರ್ ಸಮುದಾಯದ ಪ್ರಾಬಲ್ಯವಿರುವ ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಬಲವನ್ನು ವೃದ್ಧಿಸಿಕೊಳ್ಳುವ ತಂತ್ರಗಾರಿಕೆ ಪಕ್ಷದ ನಾಯಕರದ್ದಾಗಿದೆ. ಪಾಟೀದಾರ್ ಸಮುದಾಯ ರಾಜ್ಯದ ಒಟ್ಟು ಮತದಾರರ ಪೈಕಿ ಶೇ. 14ರಷ್ಟು ಮತದಾರರನ್ನು ಹೊಂದಿದೆ. 1984-85ರಿಂದ ಪಾಟೀದಾರ್ ಸಮುದಾಯ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿತಾ¤ದರೂ 2015ರ ಬಳಿಕ ಪಕ್ಷದ ವಿರುದ್ಧ ಮುನಿಸಿಕೊಂಡಿದೆ. 2015ರಲ್ಲಿ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ರಾಜ್ಯದಲ್ಲಿ ನಡೆದ ಹೋರಾಟದ ವೇಳೆ ಬಿಜೆಪಿ ವಿಭಿನ್ನ ನಿಲುವು ತಳೆದಿದ್ದೇ ಸಮುದಾಯದ ಅಸಮಾಧಾನಕ್ಕೆ ಕಾರಣ. ಆ ಬಳಿಕ ಈ ಸಮುದಾಯವನ್ನು ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಲೇ ಬಂದಿದೆಯಾದರೂ ಇದರಲ್ಲಿ ಪೂರ್ಣಪ್ರಮಾಣದ ಯಶ ಕಂಡಿಲ್ಲ. ಇಂಥ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಸಮುದಾಯದ ಮಂದಿ ಮತ್ತೆ ಬಿಜೆಪಿಯತ್ತ ಮುಖ ಮಾಡಿಯಾರು ಎಂಬ ನಿರೀಕ್ಷೆ ಪಕ್ಷದ್ದಾಗಿದೆ.
ಇದೇ ವೇಳೆ ಕಳೆದೆರಡು ತಿಂಗಳುಗಳಿಂದ ರಾಜ್ಯ ರಾಜಕೀಯದಲ್ಲಿ ಪಾಟೀದಾರ್ ಸಮುದಾಯದ ಇನ್ನೊಂದು ಉಪಜಾತಿಯಾದ ಲೇವಾಕ್ಕೆ ಸೇರಿದವರಾದ ರಾಜ್‌ಕೋಟ್‌ನ ನರೇಶ್ ಪಟೇಲ್ ಸಂಚಲನ ಉಂಟುಮಾಡಿದ್ದಾರೆ. ಸೌರಾಷ್ಟ್ರ ಭಾಗದ ಹೆಸರಾಂತ ಮತ್ತು ಶ್ರೀಮಂತ ಉದ್ಯಮಿಯಾಗಿರುವ ಇವರು ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇದೀಗ ರಾಜಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇವರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ನಿರಂತರವಾಗಿ ಪ್ರಯತ್ನಿಸುತ್ತಿವೆಯಾದರೂ ಅವರಿನ್ನೂ ತಮ್ಮ ನಿಲುವನ್ನು ಖಚಿತಪಡಿಸಿಲ್ಲ. ಇದೀಗ ಹಾರ್ದಿಕ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ನರೇಶ್ ಪಟೇಲ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹೀಗಾಗಿ ಹಾರ್ದಿಕ್ ಅವರು ನರೇಶ್ ಪಟೇಲ್ ಅವರಿಗೆ ಸಡ್ಡು ಹೊಡೆಯಲು ಸಶಕ್ತರಾದಾರು ಎಂಬ ದೂರಾಲೋಚನೆಯೂ ಬಿಜೆಪಿಯದ್ದಾಗಿದೆ.
ಏತನ್ಮಧ್ಯೆ ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಬೇರೂರತೊಡಗಿದೆ. ಜನಸಾಮಾನ್ಯರು, ಕೃಷಿಕರು, ಕಾರ್ಮಿಕರ ಸಮಸ್ಯೆ, ಅವರ ಬೇಡಿಕೆ, ಭ್ರಷ್ಟಾಚಾರ ಮತ್ತಿತರ “ಆಮ್ ಆದ್ಮಿ’ ವಿಚಾರಗಳನ್ನು ಚುನಾವಣ ಅಸ್ತ್ರವನ್ನಾಗಿಸಿಕೊಂಡು ಈ ವರ್ಗದ ಮಂದಿಗೆ ಭರಪೂರ ಉಚಿತ ಕೊಡುಗೆಗಳ ಘೋಷಣೆಗಳೊಂದಿಗೆ ಚುನಾವಣೆಯನ್ನು ಎದುರಿಸುತ್ತ ಬಂದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ದೇಶದ ಕೆಲವು ರಾಜ್ಯಗಳಲ್ಲಿ ಮತದಾರರ ಮೇಲೆ ತನ್ನ ಪ್ರಭಾವ ಬೀರಿರುವ ಮಾದರಿಯಲ್ಲಿ ಗುಜರಾತ್‌ನಲ್ಲೂ ತಳಮಟ್ಟದಲ್ಲಿ ಮತದಾರರನ್ನು ತಲುಪುವ ಕಾರ್ಯದಲ್ಲಿ ನಿರತವಾಗಿದೆ. ಇದು ಬಿಜೆಪಿಯನ್ನು ಒಂದಿಷ್ಟು ಚಿಂತಿಸುವಂತೆ ಮಾಡಿದ್ದು ಈ ಪಕ್ಷ ಮುಂದೊಡ್ಡಲಿರುವ ಸವಾಲಿಗೂ ಹಾರ್ದಿಕ್ ಪಟೇಲ್ ಉತ್ತರವಾಗಲಿದ್ದಾರೆ ಎನ್ನುವ ವಿಶ್ವಾಸದಲ್ಲಿದೆ ಬಿಜೆಪಿ.
ಸದ್ಯದ ರಾಜಕೀಯ ಲೆಕ್ಕಾಚಾರದಂತೆ ನರೇಶ್ ಪಟೇಲ್ ಕಾಂಗ್ರೆಸ್‌ಗೆ ಸೇರ್ಪಡೆಯಾದದ್ದೇ ಆದಲ್ಲಿ ಪಾಟೀದಾರ್ ಸಮುದಾಯದ ಎರಡು ಉಪಜಾತಿಗಳಾದ ಲೇವಾ ಮತ್ತು ಕಡ್ವಾ ನಾಯಕರ ನಡುವೆ ಈ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆ ಜಿದ್ದಾಜಿದ್ದಿನ ಹೋರಾಟ ಕಣವಾಗಲಿದೆ. ನರೇಶ್ ಪಟೇಲ್ ಅವರನ್ನೂ ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡದ್ದೇ ಆದಲ್ಲಿ ಚುನಾವಣೆ ಏಕಪಕ್ಷೀಯವಾಗಿ ನಡೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
– ಹರೀಶ್ ಕೆ.