Advertisement

ಬಡತನದ ನೋವು ನರಳಾಟದಿಂದ ಸಾಧನೆ ಗುರಿಯತ್ತ ಸಾಗುವ ಮಾರ್ಗ ಸುಗಮ

09:42 PM Feb 03, 2020 | Sriram |

ಗೋಣಿಕೊಪ್ಪಲು: ಬಡತನದ ನೋವಿನ ನರಳಾಟದಿಂದ ಮಾತ್ರ ಸಾಧನೆಯ ಗುರಿಯತ್ತ ಸಾಗುವ ಮಾರ್ಗ ಸುಗಮವಾಗುತ್ತದೆ. ಶ್ರೀಮಂತಿಕೆ ನಮ್ಮ ಪ್ರತಿಭೆಗಳನ್ನೇ ಚಿವುಟುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಅಂತರ್‌ರಾಷ್ಟ್ರೀಯ ಹಾಕಿ ಕ್ರೀಡಾಪಟು ಮೊಳ್ಳೇರ .ಪಿ. ಗಣೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕೋಣನಕಟ್ಟೆ ಕಲ್ಚರಲ್‌ ಅಂಡ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ ವತಿಯಿಂದ ಆಯೋಜಿಸಿದ ಪದ್ಮಶ್ರೀ ಪುರಸ್ಕೃತ ಎಂ.ಪಿ ಗಣೇಶ್‌ ದಂಪತಿಯ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.ಶ್ರೀಮಂತಿಕೆ ಪ್ರತಿಭೆಗಳಿಗೆ ಕಪ್ಪು ಚುಕ್ಕಿ ಇದ್ದಂತೆ, ಪ್ರತಿಭೆಗಳು ಅರಳಲು ಸೂಕ್ತ ಹಾದಿ ಲಕ್ಷ್ಮೀ ಕೃಪಕಟಾಕ್ಷದಿಂದ ದೂರ ಉಳಿಯುವುದು. ಹೆಚ್ಚು ಆಸ್ತಿ, ಹಣ ಇಲ್ಲದೇ ಇರುವುದೇ ನನ್ನ ಈ ಸಾಧನೆಗೆ ಸುಗಮ ಹಾದಿಯಾಗಿದೆ. ಕಾಫಿ ತೋಟಗಳನ್ನು ಹೊಂದಿ ಶ್ರೀಮಂತ ಜೀವನ ನನ್ನದಾಗಿದ್ದರೆ ಕ್ರೀಡೆಯಲ್ಲಿ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಅರ್ಜಿ ಹಾಕದಿದ್ದರೂ ನನ್ನ ಪ್ರತಿಭೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶೀ ಗೌರವ ಪುರಸ್ಕಾರ ನೀಡಿದೆ. ಇದು ನನ್ನ ಗುರಿಯ ಹಾದಿಯತ್ತ ಬೆಳಕು ನೀಡಿದ ಮಹನೀಯರಿಗೆ ಅರ್ಪಣೆ ಎಂದು ‌ ಸಂತಸದ ಕ್ಷಣವನ್ನು ಹಂಚಿಕೊಂಡರು. ನನ್ನ ಗುರುಗಳಾದ ಮುಂಡುಮಾಡ ರಾಮು ಅವರ ಮಾರ್ಗದರ್ಶನವೇ ನನ್ನ ಸಾಧನೆಯ ಬೆಳಕು ಎಂದು ಅವರು ಹೇಳಿದರು.

ಬಹುತೇಕ ಸಾಧನೆಗಳನ್ನು ಮಾಡಿ ಕ್ರೀಡೆಯಲ್ಲಿ ಗುರುತಿಸಿಕೊಂಡ ನನ್ನನ್ನು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕೋಣನಕಟ್ಟೆಯ ಕಲ್ಚರಲ್‌ ಅಂಡ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ನ ಸದಸ್ಯರು ಸನ್ಮಾನಿಸಿ ಗೌರವಿಸಿದ್ದಾರೆ. ಇವರ ಈ ಕಾರ್ಯಕ್ಕೆ ಬಾವುಕನಾಗಿದ್ದೇನೆ. ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತಗೊಂಡಗಲು ಇಷ್ಟು ಸಂತೋಷ ಮತ್ತು ಬಾವುಕನಾಗಿರಲಿಲ್ಲ. ಕ್ರೀಡೆಯಲ್ಲಿ ನನ್ನ ಸಾಧನೆಯನ್ನು ಕೊಡಗಿನ ಜನತೆ ಗುರುತಿಸಿದ್ದರೂ ಈ ದೀರ್ಘ‌ ಪ್ರಯಾಣದಲ್ಲಿ ಒಮ್ಮೆಯೂ ನನ್ನನ್ನು ಯಾವುದೇ ಸಂಘ ಸಂಸ್ಥೆಗಳು ಸನ್ಮಾನಿಸಿಲ್ಲ ಎಂದು ದುಃಖದ ಮನದಲ್ಲಿ ತಮ್ಮ ಅಭಿಪ್ರಾಯವನ್ನು ಅನಾವರಣಗೊಳಿಸಿದರು.

ನನ್ನಂತಯೇ ಬಹಳಷ್ಟು ಪ್ರತಿಭೆಗಳು ಕೊಡಗಿನಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದರು. ರಾಷ್ಟ್ರ, ಅಂತರ್‌ರಾಷ್ಟ್ರ ಮಟ್ಟದಲ್ಲೂ ಆಡುವ ಸಾಮಾರ್ಥ್ಯವಿತ್ತು. ಆದರೆ ಕೊಡಗು ಮತ್ತು ಕರ್ನಾಟಕ ರಾಜ್ಯದಿಂದ ಹೊರಗೆ ಆಡುವ ಅಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಬಹಳಷ್ಟು ಪ್ರತಿಭೆಗಳು ಅವಕಾಶ ವಂಚಿತರಾಗಿದ್ದಾರೆ ಎಂದು ಹೇಳಿದ ಅವರು ತನ್ನ ಜೀವನ ಯಾತ್ರೆಯಲ್ಲಿನ ವಿವಿಧ ಅನುಭವಗಳನ್ನು ಹಂಚಿಕೊಂಡು ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅಮೂಲ್ಯ ಕ್ಷಣಗಳನ್ನು ನೆನೆದು ಬಾವುಕರಾದ ಅವರು ಸೇನೆಯ ಸೇವೆಯನ್ನು ತ್ಯಜಿಸಿ ಬಂದ ನಂತರ ಅರ್ಜುನ್‌ ಪ್ರಶಸ್ತಿ ಪುರಸ್ಕೃತರಾಗಿದ್ದರೂ ಉದ್ಯೋಗವಿಲ್ಲದೇ ಅಲೆದಾಡಿದ ಕ್ಷಣಗಳಲ್ಲಿನ ನೋವನ್ನು ಜನರ ಮುಂದೆ ತೆರೆದಿಟ್ಟರು. ನನ್ನ ಈ ಎಲ್ಲಾ ಸಾಧನೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನನ್ನ ಪತ್ನಿ ಪ್ರೇಮ ಅವರ ತ್ಯಾಗವನ್ನು ಸ್ಮರಿಸಿಕೊಂಡರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಚೆಪ್ಪುಡೀರ ಅರುಣ್‌ ಮಾಚಯ್ಯ ಮಾತನಾಡಿ ಕೊಡಗಿನ ಕ್ರೀಡಾಪಟುಗೆ ಪದ್ಮಶ್ರೀ ಗೌರವ ನೀಡಿರುವುದು ನಮ್ಮ ನಾಡಿಗೆ ಹೆಮ್ಮೆ. ಇಂತಹ ಮಹನೀಯರೊಂದಿಗೆ ನಾವು ಜೀವಂತ ಸಾಕ್ಷಿಯಾಗಿರುವುದು ನಮ್ಮ ಅದೃಷ್ಟ ಎಂದು ಶ್ಲಾಘೀಸಿದ ಅವರು ಮುಂದಿನ ದಿನಗಳಲ್ಲಿ ಎಂ.ಪಿ. ಗಣೇಶ್‌ ಅವರು ರಾಜ್ಯ ಸಭಾ ಸದಸ್ಯರಗುವ ಎಲ್ಲಾ ಲಕ್ಷಣಗಳು ಇವೆ. ಇದಕ್ಕೆ ಕೊಡಗಿನ ಕುಲದೇವರ ಮತ್ತು ಹಿರಿಯರ ಆಶೀರ್ವಾದ ಇರಲಿ ಎಂದು ಹೇಳಿದರು.

ಚೆಪ್ಪುಡೀರ ಕುಶಾಲಪ್ಪ ಬಿನ್ನವತ್ತಾಲೆ ಅರ್ಪಿಸಿದರು. ಪುಚ್ಚಿಮಾಡ ಪೂಣಚ್ಚ, ವಕೀಲ ಅಜ್ಜಿನಿಕಂಡ ಭೀಮಯ್ಯ, ಕುಳುವಂಡ.ಪಿ. ಸುಬ್ರಮಣಿ, ಸಿ.ಪಿ. ಅಯ್ಯಪ್ಪ ಇವರುಗಳು ಎಂ.ಪಿ. ಗಣೇಶ್‌ ಅವರ ಸಾಧನೆಯ ಬಗ್ಗೆ ಸಭೆಯಲ್ಲಿ ಮಾತನಾಡಿದರು. ಪುಚ್ಚಿಮಾಡ ಆಶೋಕ್‌ ಸನ್ಮಾನ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸಿದರು.

ಇದೇ ಸಂದರ್ಭ ಎಂ.ಪಿ ಗಣೇಶ್‌ ಅವರೊಂದಿಗೆ ಅವರ ಪತ್ನಿ ಪ್ರೇಮಾ ಮತ್ತು ಗುರು ರಾಮು ಅವರನ್ನು ಸಮ್ಮಾನಿಸಲಾಯಿತು.

ಕಲ್ಚರಲ್‌ ಅಂಡ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಕಳ್ಳಿಚಂಡ ಕಾಶಿ, ಅಧ್ಯಕ್ಷ ಅಜ್ಜಿನಿಕಂಡ ತಿಮ್ಮಯ್ಯ, ಸದಸ್ಯರು ಹಾಗೂ ಕುಟುಂಬಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next