ಚೆನ್ನೈ: ಐಪಿಎಲ್ ನ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶನಿವಾರ ಚೆನ್ನೈನಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯವನ್ನು ಧೋನಿ ನಾಯಕತ್ವದ ಸಿಎಸ್ ಕೆ ಸುಲಭದಲ್ಲಿ ಗೆದ್ದು ಬೀಗಿದೆ.
ಈ ಪಂದ್ಯದಲ್ಲಿ ಚೆನ್ನೈ ಯುವ ಬೌಲರ್ ಮತೀಶ ಪತಿರಣ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ನಾಲ್ಕು ಓವರ್ ಬೌಲ್ ಮಾಡಿದ ಪತಿರಣ ಕೇವಲ 15 ರನ್ ನೀಡಿ ಮೂರು ವಿಕೆಟ್ ಪಡೆದರು. ತಮ್ಮ ಸ್ಪೆಲ್ ನಲ್ಲಿ ಒಂದೂ ಬೌಂಡರಿ ಬಿಟ್ಟುಕೊಡದ ಬೇಬಿ ಮಲಿಂಗಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಧೋನಿ, ಪತಿರಣ ಅವರ ಸ್ಲಿಂಗ್ ಆಕ್ಷನ್ ಗಮನಲ್ಲಿಟ್ಟುಕೊಂಡು ಆಟದ ಎಲ್ಲಾ ಸ್ವರೂಪಗಳಲ್ಲಿ ಆಡದಂತೆ ಎಚ್ಚರಿಕೆ ನೀಡಿದರು.
“ಯಾವುದೇ ಕ್ಲೀನ್ ಆಕ್ಷನ್ ಹೊಂದಿರದ ಬೌಲರ್ ಗೆ ಆಡಲು ಬ್ಯಾಟ್ಸ್‌ಮನ್ ಗಳು ಕಷ್ಟಪಡುತ್ತಾರೆ. ಆದರೆ ಅವರ (ಪತಿರಣ) ಸ್ಥಿರತೆ, ವೇಗ ಅವರನ್ನು ವಿಶೇಷವಾಗಿಸುತ್ತದೆ” ಎಂದು ಧೋನಿ ಪಂದ್ಯದ ನಂತರ ಹೇಳಿದರು.
“ನನ್ನ ಪ್ರಕಾರ ಆತ ಟೆಸ್ಟ್ ಕ್ರಿಕೆಟ್ ಆಡಬಾರದು. ಆತನನ್ನು ಕೇವಲ ಐಸಿಸಿ ಟೂರ್ನಿಗಳಿಗೆ ಆಡಿಸಬೇಕು. ಆತ ಇನ್ನೂ ಯುವಕ, ಆತ ಲಂಕಾ ಕ್ರಿಕೆಟ್ ಗೆ ದೊಡ್ಡ ಆಸ್ತಿಯಾಗಬಲ್ಲ. ಕಳೆದ ಬಾರಿ ಬಂದಾಗ ಆತ ತೆಳ್ಳಗಿದ್ದಾನೆ. ಈಗ ಸ್ವಲ್ಪ ಶಕ್ತಿವಂತನಾಗಿದ್ದಾನೆ” ಎಂದು ಧೋನಿ ಹೇಳಿದರು.
ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ ಕೇವಲ 139 ರನ್ ಮಾಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 17.4 ಓವರ್ ಗಳಲ್ಲಿ 140 ರನ್ ಮಾಡಿ ಜಯ ಸಾಧಿಸಿತು.