ಚೆನ್ನೈ: ‘ವಲಸೆ ಕಾರ್ಮಿಕರ ದುಃಸ್ಥಿತಿ ನೋಡಿದರೆ, ಎಂಥ ಕಲ್ಲು ಹೃದಯವೂ ಕರಗಬೇಕು. ನಮಗೆ ಕಣ್ಣೀರು ತಡೆಯಲಾಗುತ್ತಿಲ್ಲ’
– ಹೀಗೆಂದು ನುಡಿದಿದ್ದು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ಎನ್. ಕಿರುಬಾಕರನ್ ಮತ್ತು ಆರ್. ಹೇಮಲತಾ.
ಕಾರ್ಮಿಕರ ಪರಿಸ್ಥಿತಿ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದ ನ್ಯಾಯಾಧೀಶರು, ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವಲ್ಲಿ ವಿಫಲವಾಗಿರುವ ಸರಕಾರಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮೈಲುಗಟ್ಟಲೆ ದೂರವಿರುವ ಊರುಗಳಿಗೆ ಕಾರ್ಮಿಕರು ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ. ಹೀಗೆ ತೆರಳುವಾಗ ದಾರಿ ಮಧ್ಯೆಯೇ ಹಲವರು ಅಸುನೀಗಿದ್ದಾರೆ.
ಇದು ಮಾನವ ನಿರ್ಮಿತ ಅವಘಡಗಳು. ಅವರ ದುಃಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಎಲ್ಲ ರಾಜ್ಯಗಳು ಕೂಡ ಈ ಕಾರ್ಮಿಕರಿಗಾಗಿ ನೆರವಿನ ಹಸ್ತ ಚಾಚಬಹುದಿತ್ತು. ಆದರೂ ಅದನ್ನು ಮಾಡುತ್ತಿಲ್ಲ’ ಎಂದು ಕಿಡಿಕಾರಿದರು.
ಹೈಕೋರ್ಟ್‌ನ ಈ ಹೇಳಿಕೆ ಬೆನ್ನಲ್ಲೇ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ಪ್ರತಿಕ್ರಿಯಿಸಿ, ಎಲ್ಲ ಕಾರ್ಮಿಕರೂ ಸದ್ಯ ಶಿಬಿರದಲ್ಲೇ ಇರಲಿ.
ಅವರನ್ನು ಮನೆ ತಲುಪಿಸಲು ವ್ಯವಸ್ಥೆ ಮಾಡುತ್ತೇವೆ. ಅವರ ರೈಲು, ಪ್ರಯಾಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದಿದ್ದಾರೆ.